ದಲಿತರ ಒತ್ತುವರಿ ಭೂಮಿ ವಾಪಸ್ಗೆ ಆಗ್ರಹ
ಕ.ಪ್ರ.ವಾರ್ತೆ ಹಾಸನ ನ.18
ಬಡವರು ಮತ್ತು ದಲಿತರ ಸ್ವಾಧೀನದಲ್ಲಿ ಇರುವ ಜಾಗವನ್ನು ಜಿಲ್ಲಾಡಳಿತ ಅರಕಲಗೂಡಿನ ಜೀತಮುಕ್ತರಿಗೆ ಭೂ ಮಂಜೂರಾತಿ ಮಾಡಿದ್ದು, ಕೂಡಲೇ ಅದನ್ನು ರದ್ದುಪಡಿಸುವಂತೆ ಆಗ್ರಹಿಸಿ ಸಕಲೇಶಪುರ ತಾಲೂಕಿನ ಬೆಳಗೋಡು ಹೋಬಳಿಯ ಗೊಳಗೊಂಡೆ ಮತ್ತು ಹೊಸಗದ್ದೆ ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಕಾರರು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶಾಸಕ ಎಚ್.ಕೆ.ಕುಮಾರಸ್ವಾಮಿ ನೇತೃತ್ವದಲ್ಲಿ ಕೆಲ ಸಮಯ ಧರಣಿ ನಡೆಸಿ ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿ ಹೆಚ್ಚುವರಿ ಜಿಲ್ಲಾಧಿಕಾರಿ ಗೋಪಾಲಕೃಷ್ಣ ಅವರಿಗೆ ಮನವಿ ನೀಡಿದರು.
ಅರಕಲಗೂಡು ತಾಲೂಕಿನ ಗಂಗೂರು ಗ್ರಾಮದ ಜೀತಮುಕ್ತರಿಗೆ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಗುರಿತಿಸಿದ 24 ಫಲಾನುಭವಿಗಳಿಗೆ ತಲಾ 3 ಎಕರೆ ಜಮೀನಿನ್ನು ಸಕಲೇಶಪುರ ತಾಲೂಕಿನ ಗೊಳಗೊಂಡೆ, ಹೊಸಗದ್ದೆ, ಕೆರೋಡಿ ಮತ್ತು ಕೆಸಗುಲಿಯಲ್ಲಿ 72 ಎಕರ ಜಮೀನಿನ್ನು ಗುರುತಿಸಿ ಜೀತಮುಕ್ತರಿಗೆ ಭೂ ಮಂಜೂರಾತಿ ಹಕ್ಕು ಪತ್ರವನ್ನು ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ವಿತರಿಸಿದ್ದಾರೆ.
ಸಕಲೇಶಪುರ ತಾಲೂಕಿನ ಗೊಳಗೊಂಡೆ ಮತ್ತು ಹೊಸಗದ್ದೆ ಗ್ರಾಮದ ದೊಡ್ಡಯ್ಯ, ರಾಜಯ್ಯ, ಕುಮಾರ್, ಪ್ರೇಂಕುಮಾರ್, ನಂಜುಂಡ, ರವೀಶ್, ಅಣ್ಣಪ್ಪ ಸೇರಿದಂತೆ ನೂರಾರು ಮಂದಿ ಬಡವರು ಮತ್ತು ದಲಿತರಿಗೆ 1994ರಲ್ಲಿ ಆಶ್ರಯ ಯೋಜನೆಯಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಿ ಹಕ್ಕು ಪತ್ರವನ್ನು ವಿತರಿಸಿದ್ದಾರೆ. ಆದರೆ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತದಲ್ಲಿ ಅಧಿಕಾರಿಗಳ ಆತುರದ ಕ್ರಮ ಹಾಗೂ ಸರಿಯಾಗಿ ಪರಿಶೀಲನೆ ಮಾಡದ ಕಾರಣ ಈ ರೀತಿಯ ಘಟನೆ ನಡೆದಿದೆ ಎಂದು ದೂರಿದರು.
ಜೀತಮುಕ್ತರಿಗೆ ಹಂಚಿಕೆ: ಅರಲಗೂಡು ತಾಲೂಕಿನಲ್ಲಿ ಇರುವಂತಹ ಸರ್ಕಾರಿ ಭೂಮಿಯನ್ನು ಮತ್ತು ಅಕ್ರಮ ಸಾಗುವಳಿದಾರರನ್ನು ತೆರೆವುಗೊಳಿಸಿ ಅಲ್ಲಿಯೇ ಜೀತಮುಕ್ತರಿಗೆ ಭೂಮಿಯನ್ನು ಮಂಜೂರು ಮಾಡಬಹುದಿತ್ತು. ಅದರೆ ಪಕ್ಕದ ತಾಲೂಕಿಗೆ ಬಂದು ಬಡವರನ್ನು ಒಕ್ಕಲೆಬ್ಬಿಸುವುವಂತಹ ಕಾರ್ಯವನ್ನು ಜಿಲ್ಲಾಡಿಳಿತ ಮತ್ತು ಸರ್ಕಾರ ಮಾಡುತ್ತಿದ್ದೆ ಎಂದು ಕಿಡಿದಾರಿದರು.
ಸಕಲೇಶಪುರದ ಹೊಸಗದ್ದೆಯ ಸರ್ವೇ ನಂ.48ರಲ್ಲಿ 21 ಬಡವರು, ದಲಿತರು, ಸಾಮಾನ್ಯ ವರ್ಗದವರ ಭೂಮಿಯನ್ನು ಜಿಲ್ಲಾಡಳಿತ ಅರಕಲಗೂಡು ತಾಲೂಕಿನ ಗಂಗೂರಿನ ಜೀತಮುಕ್ತರಿಗೆ ಹಂಚಿಕೆ ಮಾಡಿದೆ. ಆದ್ದರಿಂದ ಜಿಲ್ಲಾಡಳಿತ ಕೂಡಲೇ ಈ ಮಂಜೂರಾತಿಯನ್ನು ರುದ್ದು ಪಡಿಸಿ ಪುನರ್ ಸ್ವಾಧೀನದ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಶಾಸಕ ಎಚ್.ಕೆ.ಕುಮಾರಸ್ವಾಮಿ, ಜಿಪಂ ಸದಸ್ಯರಾದ ಸುಲೋಚನ ರಾಮಕೃಷ್ಣ ಮತ್ತು ಮಲ್ಲಿಗೆವಾಳು ದ್ಯಾವಪ್ಪ, ದಿನೇಶ್, ರಾಮಕೃಷ್ಣ, ಅನ್ಯಾಯಗೊಳಗಾದ ದೊಡ್ಡಯ್ಯ, ರಾಜಯ್ಯ, ಕುಮಾರ್, ಪ್ರೇಂ ಕುಮಾರ್, ನಂಜುಂಡ, ರವೀಶ್, ಅಣ್ಣಪ್ಪ ಮತ್ತಿರರರು ಉಪಸ್ಥಿತರಿದ್ದರು.