'ಭಾರತ ರತ್ನ'ಗಳ ಸಾಧನೆ ಸ್ಫೂರ್ತಿಯಾಗಲಿ
ಕ.ಪ್ರ.ವಾರ್ತೆ ಚಾಮರಾಜನಗರ ನ. 18
ವಿದ್ಯಾರ್ಥಿಗಳಿಗೆ ಭಾರತರತ್ನಗಳಾದ ಸಚಿನ್ ತೆಂಡೂಲ್ಕರ್ ಮತ್ತು ಸಿಎನ್ಆರ್ ರಾವ್ ಸಾಧನೆಗಳು ಸ್ಫೂರ್ತಿಯಾಗಲಿ ಎಂದು ಕ್ರೀಡಾಪಟು ಶ್ರೀನಿವಾಸ ಪ್ರಸಾದ್ ಹೇಳಿದರು.
ನಗರದ ಶಂಕರಪುರದ ಸೇವಾಭಾರತಿ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಗುರುನಾನಕ್ ಜಯಂತಿ ಹಾಗೂ ವಾರ್ಷಿಕ ಕ್ರೀಡಾಕೂಟವನ್ನು ಪಾರಿವಾಳ ಹಾರಿ ಬಿಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಕಠಿಣ ಶ್ರಮ, ಸತತ ಅಭ್ಯಾಸವಿದ್ದಾಗ ಮಾತ್ರ ಯಾವುದೇ ಗುರಿಯನ್ನು ಸಾಧಿಸಬಹುದು ಎಂದರು.
ನಗರದಲ್ಲಿ 2002ರಲ್ಲಿ ಪ್ರಾರಂಭವಾದ ಕ್ರೀಡಾಂಗಣ ಕಾಮಗಾರಿ 9 ಜಿಲ್ಲಾಧಿಕಾರಿಗಳು ಸೇವೆ ಸಲ್ಲಿಸಿ ವರ್ಗಾವಣೆಯಾದರೂ ಪೂರ್ಣವಾಗಿಲ್ಲ. ಇದು ಜಿಲ್ಲಾಡಳಿತಕ್ಕೆ ಎಷ್ಟರ ಮಟ್ಟಕ್ಕೆ ಕ್ರೀಡಾಭಿಮಾನ ಇದೆ ಎಂಬುದನ್ನು ತೋರುತ್ತದೆ ಎಂದರು.
ದೈಹಿಕ ಶಿಕ್ಷಕ ನಾಗರಾಜು ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿ, ದೇಶಾದ್ಯಂತ ಸಂಚರಿಸಿ ಜನರಲ್ಲಿ ಮೂಢನಂಬಿಕೆ ತೊಡೆದು ಹಾಕಲು ಶ್ರಮಿಸಿದ್ದ ಗುರುನಾನಕ್ರ ಜಯಂತಿ ದಿನವೇ ಕ್ರೀಡೋತ್ಸವ ನಿಜಕ್ಕೂ ಅರ್ಥಪೂರ್ಣ. ಕ್ರೀಡೆಯಿಂದ ವಿದ್ಯಾರ್ಥಿಗಳಲ್ಲಿ ಸ್ನೇಹ ಬೆಳವಣಿಗೆ ಆಗುತ್ತದೆ. ರಾಜ್ಯ, ದೇಶದ ಒಗ್ಗಟನ್ನು ಕಾಪಾಡುತ್ತದೆ. ಕ್ರೀಡೆ ದೇಶದ ಅವಿಭಾಜ್ಯ ಅಂಗ ಎಂದರು.
ಅಧ್ಯಕ್ಷತೆ ವಹಿಸಿದ್ದ ಸೇವಾಭಾರತಿ ಶಿಕ್ಷಣ ಸಂಸ್ಥೆ ಆಡಳಿತ ಅಧಿಕಾರಿ ರಮೇಶ್ ಮಾತನಾಡಿ, ಚಾಮರಾಜನಗರ ಜಿಲ್ಲೆಯಾಗಿ 16 ವರ್ಷ ಕಳೆದರೂ ಜಿಲ್ಲೆಯಲ್ಲಿ ಸುಸಜ್ಜಿತ ಕ್ರೀಡಾಂಗಣ ಕೊರತೆಯಿಂದಾಗಿ ನಿರೀಕ್ಷಿತ ಮಟ್ಟದಲ್ಲಿ ಕ್ರೀಡಾ ಸಾಧನೆ ಸಾಧ್ಯವಾಗುತ್ತಿಲ್ಲ ಎಂದರು.
ಮುಖ್ಯ ಶಿಕ್ಷಕ ರವಿಪ್ರಸಾದ್, ಶಿಕ್ಷಕ ಶ್ರೀನಿವಾಸ ಇದ್ದರು. ವಿದ್ಯಾರ್ಥಿನಿ ಮೇಘನಾ ಪ್ರಾರ್ಥಿಸಿ, ಪ್ರಾಂಶುಪಾಲ ಲೋಕೇಶ್ ಸ್ವಾಗತಿಸಿದರು. ಉಪನ್ಯಾಸಕ ಆಜಯ್ಕುಮಾರ್ ವಂದಿಸಿದರು.
60 ಕೆಜಿ ಗಾಂಜಾ ವಶ
ಕೊಳ್ಳೇಗಾಲ: ಖಚಿತ ಮಾಹಿತಿ ಮೇರೆಗೆ ರಾಮಾಪುರ ಪೊಲೀಸರು ದಾಳಿ ನಡೆಸಿ 60 ಕೆಜಿ ತೂಕದ 57 ಗಾಂಜಾ ಗಿಡಗಳನ್ನು ಸೋಮವಾರ ಸಂಜೆ ವಶಪಡಿಸಿಕೊಂಡಿದ್ದಾರೆ.
ತಾಲೂಕಿನ ಕುರಟ್ಟಿ ಹೊಸೂರು ಗ್ರಾಮದ ಮುನಿಶೆಟ್ಟಿ ಎಂಬಾತ ತನ್ನ ಮೆಣಸಿನ ಫಸಲು ಹಾಗೂ ಜೋಳದ ಫಸಲಿನ ನಡುವೆ ಗಾಂಜಾ ಗಿಡಗಳನ್ನು ಅಕ್ರಮವಾಗಿ ಬೆಳೆಸಿದ್ದ. ವಿಚಾರ ತಿಳಿದ ಎಸ್ಐ ಬಸವರಾಜು, ಡಿವೈಎಸ್ಪಿ ಚನ್ನಬಸವಣ್ಣ ಅವರ ಮಾರ್ಗದರ್ಶನದಲ್ಲಿ ದಾಳಿ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಆರೋಪಿ ಮುನಿಶೆಟ್ಟಿ ಪರಾರಿಯಾಗಿದ್ದು, ಪತ್ತೆ ಕಾರ್ಯ ನಡೆಯುತ್ತಿದೆ. ರಾಮಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾಳಿಯಲ್ಲಿ ಪೇದೆಗಳಾದ ಲಾರೆನ್ಸ್, ನಾಗರಾಜು, ನಿಂಗರಾಜು, ಲಿಂಗರಾಜು, ಶಿವಮೂರ್ತಿ, ನಂಜುಂಡ ಇದ್ದರು.
ಮ.ಬೆಟ್ಟದಲ್ಲಿ ಇಬ್ಬರು ಸಾವು
ಹನೂರು: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಸಾವಿಗೀಡಾಗಿರುವ ಘಟನೆ ಕ್ಷೇತ್ರ ವ್ಯಾಪ್ತಿಯ ಮಲೆಮಹದೇಶ್ವರ ಬೆಟ್ಟದಲ್ಲಿ ಜರುಗಿದೆ.
ಕುಟುಂಬ ಸಮೇತರಾಗಿ ಪೂಜೆ ಸಲ್ಲಿಸಲು ಶ್ರೀಕ್ಷೇತ್ರಕ್ಕೆ ಆಗಮಿಸಿದ್ದ ಮೈಸೂರು ತಾಲೂಕಿನ ದಡದಹಳ್ಳಿ ವಾಸಿ ಮಂಜುನಾಥ್(25) ಸ್ನಾನಕ್ಕೆಂದು ಅಂತರಗಂಗೆಯಲ್ಲಿ ಮುಳುಗಿ ಸಾವಿಗೀಡಾದಿದ್ದಾರೆ. ಈ ಸಂಬಂಧ ಮಹದೇಶ್ವರ ಬೆಟ್ಟದ ಸಿಪಿಐ ಮರಿಸಿದ್ದಶೆಟ್ಟಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗುಂಡ್ಲುಪೇಟೆ ತಾಲೂಕಿನ ತೆರಣಕಣಾಂಬಿಯ ಮಾದಮ್ಮ (72) ದೇವಸ್ಥಾನದ ಸುತ್ತ ರಜೆ ಹೊಡೆಯುವುದಾಗಿ ಹರಕೆ ತೀರಿಸಲು ನಾಲ್ಕು ದಿನಗಳ ಹಿಂದೆ ಆಗಮಿಸಿದ್ದು ಅಸ್ವಾಭಾವಿಕವಾಗಿ ಸಾವಿಗೀಡಾಗಿದ್ದಾರೆ. ಈ ಸಂಬಂಧ ಮ.ಬೆಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.