ರಾಜಕಾರಣದಲ್ಲಿ ಮರೆಯಾದ ಸಮಾನತೆ
ಕ.ಪ್ರ.ವಾರ್ತೆ ಹಾಸನ ನ.18
ಸಮಾನತೆ ಆಶಯದ ದಲಿತ, ಮಹಿಳೆ, ಪರಿಸರ, ರೈತಸಂಘ ಸೇರಿದಂತೆ ನೂರಾರು ಸಂಘಟನೆಗಳು, ಪಕ್ಷಗಳು ತಂತಮ್ಮ ಐಡೆಂಟಿಟಿ ರಾಜಕಾರಣವನ್ನೇ ಆನೆಕಾಲು ರೋಗದಂತೆ ದೊಡ್ಡದು ಮಾಡಿಕೊಂಡು ಸಮಾನತೆಯನ್ನು ಮರೆತಿವೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಸಾಹಿತಿ ದೇವನೂರ ಮಹಾದೇವ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಇಲ್ಲಿನ ಬಯಲು ಸಾಹಿತ್ಯ ವೇದಿಕೆ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ 'ಈ ಹೊತ್ತು ನಮ್ಮ ಮಾತು ಸೋತಿದೆಯೇ?' ಎಂಬ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಇದುವರೆಗಿನ ಭೂಮಿ ಮೇಲಿನ ಶೋಷಣೆಯ ಇತಿಹಾಸದಲ್ಲಿ ಪ್ರಕೃತಿ ನಾಳೆಗೂ ಉಳಿಯುತ್ತಿತ್ತು. ಇಂದಿನ ಜಾಗತೀಕರಣ, ಖಾಸಗೀಕರಣದ ದಾಹದಲ್ಲಿ ನಾಳೆಗೆ ಪ್ರಕೃತಿ ಏನೂ ಉಳಿಯುವುದಿಲ್ಲವೇನೋ ಎಂಬಷ್ಟು ವೇಗವಾಗಿ ಧ್ವಂಸೀಕರಣ ನಡೆಯುತ್ತಿದೆ ಎಂದು ಖಂಡಿಸಿದರು.
ಜಾಗತೀಕರಣದ ಮಾಯಾಬಜಾರ್: ಇಂದು ಜೀವನ ಎಂದರೆ ಹಣಕ್ಕಾಗಿ ಹಣಕ್ಕೋಸ್ಕರ ಎಂಬಂತಾಗಿ ಬಿಟ್ಟಿದೆ. ಸಮಾನತೆಯ ಅಶಯಗಳ ಸೈದ್ಧಾಂತಿಕತೆ ಕಣ್ಣುಬಾಯಿ ಬಿಡುತ್ತಿದೆ. ಇಂದಿನ ಜಾಗತೀಕರಣದ ಮಾಯಾಬಜಾರ್ ಖಾಸಗೀಕರಣದ ಬಂಡವಾಳವೇ ಇಂದು ಜಗತ್ತಿನ ಹಸಿವಿನ ಬಗ್ಗೆ ಮಾತಾಡುತ್ತಿದೆ.
ಉದ್ಯೋಗದ ಬಗ್ಗೆ ಮಾತಾಡುತ್ತಿದೆ. ಬಡವರ ಉದ್ಧಾರ ತನ್ನ ಕೇಲಿ ಮಾತ್ರ ಎಂಬಂತೆ ಬಿಂಬಿಸಿಕೊಂಡು ನಂಬಿಸುತ್ತಿದೆ ಎಂದರು. ಮಾಟ, ಮಂತ್ರ ಮತ್ತು ಮಾಯಾಬಜಾರ್ ಎಲ್ಲವೂ ವಿಜ್ಞಾನದ ಭಾಷೆಯಲ್ಲೂ ಮಾತಾಡುತ್ತಿದೆ. ಹೀಗಿರುವಾಗ ವಿವೇಚನೆ ಹೇಗೆ ಅಥವಾ ಯಾರು ಖಳನಾಯಕನು ನಾಯಕನನ್ನು ತುಳಿದಿಟ್ಟು ತಾನೇ ನಾಯಕನ ಮಾತುಗಳಾಡುತ್ತಿದ್ದಾನೆ. ಜತೆಗೆ ಈ ಕಾಲ ಮಾಹಿತಿಯ ಯುಗ. ಮನುಷ್ಯ ಹೆಚ್ಚೆಚ್ಚು ಎಚ್ಚರ ಪಡೆಯುತ್ತಿದ್ದಾನೆ. ಎಚ್ಚರ ಇಲ್ಲದಿದ್ದಾಗ ಅಸಮಾನತೆ ತಾರತಮ್ಯಗಳು ಇದ್ದರೂ ಎಲ್ಲಿದೆ ನೆಮ್ಮದಿ ಎಂದು ಪ್ರಶ್ನಿಸಿದರು.
ಯಾಕೆಂದರೆ ಸಮಾನತೆಯ ಕನಸನ್ನು ಸಾಕ್ಷಾತ್ಕರಿಸಬೇಕಾದ ನಮ್ಮ ಸೈದ್ಧಾಂತಿಕ ನಾಯಕರು ಅವರೇ ತುಳಿತಕ್ಕೊಳಗಾಗಿದ್ದಾರೆ. ಇವರು ಒಟ್ಟಾಗುತ್ತಿಲ್ಲ. ಹೀಗಿರುವಾಗ ತುಳಿತಕ್ಕೊಳಗಾದ ಜನತೆ ಒಟ್ಟಾಗುವುದೆಲ್ಲಿ ಬಂತು ಒಂದೊಂದು ಸೈದ್ಧಾಂತಿಕತೆಯೂ ತನ್ನದೇ ಶತ್ರುಗಳನ್ನು ಗುರುತಿಸಿಕೊಂಡು ಆ ಶತ್ರುಗಳಿಗೆ ತಕ್ಕಂತೆ ತಮ್ಮ ಪ್ರತ್ಯೇಕತೆ ಆಚರಿಸುತ್ತಿವೆ.
ಮಡಿ ಮಾಡ್ತಾರಲ್ಲ ಹಾಗೆ. ಶತ್ರುತ್ವ ಅಭ್ಯಾಸವಾಗಿ ಬಿಟ್ಟರೆ, ಕಾಲಾನುಕ್ರಮದಲ್ಲಿ ಜಡತ ಆವರಿಸಿಕೊಂಡಾಗ ಅವರು ಗುರುತಿಸಿಕೊಂಡಿದ್ದ ಶತ್ರು ಮರೆತು ಹೋಗಿ ಅವರ ಅಕ್ಕಪಕ್ಕದವರೇ ಶತ್ರುಗಳಾಗಿ ಬಿಡಬಹುದು. ಇಂಥವೂ ಆಗುತ್ತಿವೆ ಎಂದು ವಿಷಾದಿಸಿದರು.
ಇದರೊಡನೆ ಖಾಸಗಿ ಬಂಡವಾಳದ ಕೃಪಾಪೋಷಿತ ಎನ್ಜಿಓಗಳು ಜನಪರ ಶಕ್ತಿಗಳಿಗಿಂತಲೂ ಹೆಚ್ಚು ಜನಪರವಾಗಿ ಮಾತನಾಡುತ್ತಾ ಜನಪರ ಆಂದೋಲನಗಳಿಗೆ ತೊಡರುಗಾಲು ಹಾಕುತ್ತಿವೆ.
ಇಂದು ಸಾವಿರಾರು ಅಸಮಾನತೆಗಳು ಈ ಭೂಮಿ ಮೇಲೆ ಬಲೆ ಹಾಕಿವೆ. ಎಷ್ಟು ಅಸಮಾನತೆ ಇದೆಯೋ ಅಷ್ಟೇ ಸಂಖ್ಯೆಗಳಲ್ಲಿ ಹಿಂಸೆಗಳೂ ಕತ್ತು ಹಿಸುಕುತ್ತಿವೆ. ಮುಖಾಮುಖಿಯಾಗುವುದೇ ಹೇಗೆ.
ಜಾಗತೀಕರಣದ ಅಟ್ಟಹಾಸದಲ್ಲಿ ಸಮಾನತೆಯ ಸಿದ್ಧಾಂತಗಳು, ಹೋರಾಟಗಳು ಕಾಲ ಮುಗಿದ ಹೋಯಿತು ಎಂದು ಎಲ್ಲರೂ ನಂಬುತ್ತಿರುವ ಇಂದಿನ ಮುಳುಗುತ್ತಿರುವ ಸ್ಥಿತಿಯಲ್ಲಿ ಆಸರೆಯಾಗಿ ಒಂದು ಹುಲ್ಲುಕಡ್ಡಿ ಎಂಬಂತ ಒಂದಿಷ್ಟು ಅಂದಾಜುಗಳನ್ನು ಮುಂದಿಡುವೆ. ಹಳ್ಳಿಯ ಜೀವಂತ ಜೀವಂತ ಸಂದರ್ಭದೊಳಗೆ ಅಂಬೇಡ್ಕರ್ ವಾದಿಯಾಗಿ ಹಾಗೂ ಅದರ ಹೊರಗೆ ಗಾಂಧಿವಾದಿಯಾಗಿ ಕಂಡರೆ ಅದು ಅಧಿಕೃತವಾದದ್ದು ಅನ್ನುತ್ತಾರೆ. ಈ ಬೀಜ ವಾಕ್ಯದಿಂದ ನಾವು ಬೆಳೆ ತೆಗೆಯಬೇಕಾಗಿದೆ ಎಂದು ದೇವನೂರ ಹೇಳಿದರು.
ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸ್, ವಿಮರ್ಶಕ ಸಿ.ಎನ್. ರಾಮಚಂದ್ರನ್ ಮಾತನಾಡಿದರು. ಬಯಲು ಸಾಹಿತ್ಯ ವೇದಿಕೆಯ ಜಿ.ಬಿ. ನಾಗನಗೊಡ ಇದ್ದರು. ಲೇಖಕಿ ರೂಪಹಾಸನ್, ಸ. ಉಷಾ ಮತ್ತಿತರರು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮಧ್ಯಾಹ್ನ ನಡೆದ ಅಭಿವೃಕ್ತಿ ಸ್ವಾತಂತ್ರ್ಯದ ಸವಾಲುಗಳು- ನನ್ನ ಅನುಭವ ಕುರಿತು ಲೇಖಕರಾದ ಬಾನು ಮುಷ್ತಾಕ್, ಮಹಾಂತೇಶ ನವಲಕರ್, ಎಚ್.ನಾಗವೇಣಿ, ನವೀನ್ ಸೂರಿಂಜೆ ಮಾತನಾಡಿದರು.
ಪುಸ್ತಕ ಬಿಡುಗಡೆ: ಚಿಂತಕ ಹರ್ಷ ಮಂದರ್ ಅವರ ಅಂಕಣ ಬರಹಗಳ ಅನುವಾದ ಸಂಕಲನ ಅಸಮಾನತೆಯ ಬಣ್ಣಗಳು ಕೃತಿಯನ್ನು ವೀಕ್ ಪತ್ರಿಕೆ ವರದಿಗಾರ ಬಾನುತೇಜ್ ಬಿಡುಗಡೆ ಮಾಡಿದರು. ಚಿಂತಕ ವಿ.ಎಸ್. ಶ್ರೀಧರ್, ಲೇಖಕ ಸಂವರ್ಥ ಸಾಹಿಲ್ ಇತರರು ಇದ್ದರು.