ಶಾಲಾ ದಾಖಲಾತಿ ವೇಳಾ ಪಟ್ಟಿ ಪ್ರಕಟ
ಹಾಸನ: ಶಿಕ್ಷಣ ಹಕ್ಕು ಅಧಿನಿಯಮದ ಪ್ರಕಾರ 2014-15ನೇ ಸಾಲಿಗೆ 1ನೇ ತರಗತಿ ಅಥವಾ ಪೂರ್ವ ಪ್ರಾಥಮಿಕ ತರಗತಿಗೆ ಮಕ್ಕಳನ್ನು ದಾಖಲು ಮಾಡಿಕೊಳ್ಳಲು ಶಿಕ್ಷಣ ಹಕ್ಕು ಕಾಯಿದೆ ಸೆಕ್ಷನ್ 12(1)(ಸಿ) ಪ್ರಕಾರ ಶೇ.25 ಸೀಟುಗಳಿಗೆ ಎದುರಾಗಿ ದಾಖಲಾತಿ ಕೋರಿ ಇಲಾಖೆ ನಿಗದಿಪಡಿಸಿರುವ ಅರ್ಜಿಗಳನ್ನು ಪೋಷಕರು ಈ ಕೆಳಕಂಡ ವೇಳಾ ಪಟ್ಟಿಯನುಸಾರ ಅರ್ಜಿ ಸಲ್ಲಿಸಬಹುದಾಗಿದೆ.
ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಸೇರಿರುವ ಮಕ್ಕಳ ಆದಾಯ ಮಿತಿ ಕುರಿತಂತೆ ಮಾರ್ಗಸೂಚಿ ಪರಿಷ್ಕರಿಸಲಾಗಿದೆ. ಅದರಂತೆ 3.50 ಲಕ್ಷದವರೆಗೆ ವಾರ್ಷಿಕ ಆದಾಯ ರು.1 ಲಕ್ಷಕ್ಕಿಂತ ಕಡಿಮೆ ಇರುವ ಮಕ್ಕಳನ್ನು ಮೊದಲು ಪರಿಗಣಿಸತಕ್ಕದ್ದು. ಅಂತಹ ಮಕ್ಕಳ ಸಂಖ್ಯೆ ಮೀಸಲಾತಿ ಇಡಲಾದ ಸೀಟುಗಳಿಗಿಂತ ಹೆಚ್ಚಿಗೆ ಇದ್ದಲ್ಲಿ ಲಾಟರಿ ಮುಖಾಂತರ ನಿರ್ಧರಿಸುವುದು. ತದ ನಂತರ ಇನ್ನೂ ಸೀಟುಗಳು ಉಳಿಕೆ ಇದ್ದಲ್ಲಿ 1.00ರಿಂದ 3.50 ಲಕ್ಷದವರೆಗೆ ಆದಾಯ ಇರುವವರನ್ನು ಪರಿಗಣಿಸಲಾಗುವುದು.
ನಿಗದಿಪಡಿಸಲಾದ ಅರ್ಜಿ ನಮೂನೆಗಳು ಕ್ಷೇತ್ರ ಶಿಕ್ಷಣಾಧಿ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಸಂಬಂಧಪಟ್ಟ ಶಾಲೆಗಳಲ್ಲಿಯೂ ಲಭ್ಯವಿರುತ್ತದೆ. ಹೆಚ್ಚಿನ ಮಾಹಿತಿಗಳಿಗೆ ಹಾಗೂ ಅರ್ಜಿ ನಮೂನೆಗಳಿಗೆ ವೆಬ್‌ಸೈಟ್ ಢಿಢಿಢಿ.ಝ್ಛ್ಟ್ಟಟಜಜ್ಡ್ಛಛಡ್ಝ್ಟಿಟಿ.್ಞಛ್ಠ.ಟ್ಝ್ಛಿ.್ಝಟಿ ನಲ್ಲಿ ಲಭ್ಯವಿದೆ. ಇಲ್ಲಿಂದ ಡೌನ್‌ಲೋಡ್ ಮಾಡಿಕೊಳ್ಲಬಹುದು. ಅರ್ಜಿಗಳನ್ನು ಸಲ್ಲಿಸಲು ವೇಳಾಪಟ್ಟಿ ಇಂತಿದೆ.
ಜ.6 ರಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರತೀ ಶಾಲೆಯಲ್ಲಿ ಲಭ್ಯವಿರುವ ಶೇ.25 ಸೀಟುಗಳನ್ನು ಪ್ರಕಟಿಸುವುದು, ಜ.7 ರಂದು ಶಾಲಾ ದಾಖಲಾತಿ ಕೋರಿ ಪೋಷಕರು ಅರ್ಜಿ ಸಲ್ಲಿಸಲು ನಿಗದಿಪಡಿಸಲಾದ ಅವಧಿಯಾಗಿದೆ. ಜ.7 ರಿಂದ ಫೆ.8 ರವರೆಗೆ ಶಾಲೆಯವರು ಸ್ವೀಕರಿಸಿದ ಅರ್ಜಿಗಳನ್ನು ನಿಯಮಾನುಸಾರ ಪರಿಶೀಲನೆ ನಡೆಸಿ, ಆಯ್ಕೆ ಪಟ್ಟಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಫೆ.17ರಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ದಾಖಲಾತಿಯನ್ನು ಅನುಮೋದಿಸಿ ಪಟ್ಟಿಯನ್ನು ಸಂಬಂಧಪಟ್ಟ ಶಾಲೆಗಳಿಗೆ ಕಳುಹಿಸಲು ಕಡೇ ದಿನವಾಗಿದೆ. ಫೆ.28 ರಂದು ಶಾಲೆಗಳಲ್ಲಿ ದಾಖಲಾತಿ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಿ.ಆರ್.ಬಸವರಾಜ ತಿಳಿಸಿದ್ದಾರೆ.
'ಸಮಗ್ರ ಅಭಿವೃದ್ಧಿಗೆ ಶಿಕ್ಷಣ ಅಗತ್ಯ'
ಕ.ಪ್ರ.ವಾರ್ತೆ ಅರಕಲಗೂಡು ನ.18
ದೇಶದ ಪ್ರತಿ ಪ್ರಜೆಯೂ ಮುಂದಿನ ಪೀಳಿಗೆಗೆ ಶಿಕ್ಷಣ ನೀಡುವತ್ತ ಜವಾಬ್ದಾರಿಯುತವಾಗಿ ನಡೆದುಕೊಂಡಾಗ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಭುವನೇಶ್ವರಿ ಮಹಿಳಾ ಸಮಾಜದ ಅಧ್ಯಕ್ಷೆ ಮೀನಾಕ್ಷಿ ವೆಂಕಟೇಶ್ ತಿಳಿಸಿದ್ದಾರೆ.
ಪಟ್ಟಣದ ನಿವೇದಿತಾ ವಿದ್ಯಾಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ರಾಷ್ಟ್ರೀಯ ಶಿಕ್ಷಣ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರಗಳು ಶಿಕ್ಷಣಕ್ಕಾಗಿ ಸಾವಿರಾರು ಕೋಟಿ ರುಪಾಯಿ ವೆಚ್ಚ ಮಾಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೇಲ್ಪಂಕ್ತಿಯಲ್ಲಿ ನಿಲ್ಲುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದರೂ ಇಂದಿಗೂ ಮಕ್ಕಳನ್ನು ಶಾಲೆಗೆ ಸೇರಿಸಿ ಎಂದು ಘೋಷಣೆಗಳನ್ನು ಕೂಗುತ್ತಾ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವ ಪರಿಸ್ಥಿತಿ ಇರುವುದು ನಿಜಕ್ಕೂ ಬೇಸರದ ಸಂಗತಿ ಎಂದರು. ಅವರು ದೇಶದಲ್ಲಿ ನಾವು ಪ್ರಗತಿ ಸಾಧಿಸಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದರೂ ಸಂಪೂರ್ಣ ಶಿಕ್ಷಣ ನೀಡಲು ಸಾಧ್ಯವಾಗುತ್ತಿಲ್ಲ. ಶಿಕ್ಷಣದ ಕೊರತೆಯಿಂದಾಗಿ ಸಮಾಜದಲ್ಲಿ ಮೌಢ್ಯತೆಗಳು ಹೆಚ್ಚಾಗಿ ಜನರು ಸಂಕಷ್ಟದಲ್ಲಿ ಸಿಲುಕುತ್ತಿದ್ದಾರೆ ಎಂದರು. ಸಮಾಜದಲ್ಲಿ ಪ್ರತಿಯೊಬ್ಬರೂ ಶಿಕ್ಷಣ ಪಡೆಯುವ ಅನಿವಾರ್ಯತೆ ಇದ್ದು ಎಲ್ಲ ಪೋಷಕರೂ ಮಕ್ಕಳನ್ನು ಶಾಲೆಗೆ ಸೇರಿಸಬೇಕೆಂದು ನುಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ಸುಬ್ಬರಾವ್ ಮಾತನಾಡಿ, ಸ್ವಾತಂತ್ರ್ಯಾನಂತರದಲ್ಲಿ ಎಲ್ಲ ಮಹನೀಯರೂ ಶಿಕ್ಷಣಕ್ಕೆ ಆದ್ಯತೆ ನೀಡಬೇಕೆಂಬ ಪ್ರತಿಪಾದನೆ ಮಾಡುತ್ತಲೇ ಬಂದಿದ್ದಾರೆ. ಅದರಂತೆಯೇ ಸರ್ಕಾರಗಳೂ ಶಿಕ್ಷಣಕ್ಕೆ ಮಹತ್ವ ನೀಡುತ್ತಲೇ ಬಂದಿವೆ. ಈ ನಿಟ್ಟಿನಲ್ಲಿ ಸಾರ್ವಜನಿಕ ಜಾಗೃತಿಯೂ ಅಗತ್ಯ ಎಂದರಲ್ಲದೆ, ಅಬ್ದುಲ್ ಅಜಾದ್ ಅವರು ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಯನ್ನು ಸ್ಮರಿಸಿದರು. ಮಹಿಳಾ ಸಮಾಜದ ಕಮಲಮ್ಮ ಅಪ್ಪಾಜಿಗೌಡರು ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಶಿಕ್ಷಕಿ ಬಿ.ಎಂ.ರಾಗಿಣಿ ಸ್ವಾಗತಿಸಿ, ಶಿಕ್ಷಕಿ ಅಶ್ವಿನಿ ವಂದಿಸಿದರು.