ಹಾದಿ ತಪ್ಪಿದವರಿಗೆ ಸಂದೀಪ'ದಂಡ'ಂ ದಶಗುಣಂ
-ದೇವರಾಜು ಕಪ್ಪಸೋಗೆ
ಕ.ಪ್ರ.ವಾರ್ತೆ ಗುಂಡ್ಲುಪೇಟೆ ನ. 18
ತಾಲೂಕಿನ ಹೋಬಳಿ ಕೇಂದ್ರ ಬೇಗೂರಿನಲ್ಲಿ ಆಟೊ Þ ಚಾಲಕರು ಮತ್ತು ವಾಹನ ಸವಾರರಲ್ಲಿ ಶಿಸ್ತು ಬಂದಿದೆ. ನಿತ್ಯ ಕುಡಿದು ಕಂಡಕಂಡಲ್ಲಿ ವಾಲಾಡುತ್ತಿದ್ದವರ ಸದ್ದಡಗಿದೆ. ಇದಕ್ಕೆಲ್ಲಾ ಕಾರಣ ಕಳೆದ ಒಂದು ತಿಂಗಳ ಹಿಂದಷ್ಟೇ ನೂತನ ಠಾಣೆಗೆ 2ನೇ ಸಬ್ ಇನ್ಸ್‌ಪೆಕ್ಟರ್ ಆಗಿ ಬಂದಿರುವ ಬಿ.ಎನ್.ಸಂದೀಪ್ ಕುಮಾರ್.
ದಿನ ನಿತ್ಯ ಕುಡುಕರ ಹಾವಳಿ, ವಾಹನಗಳ ಸಂಚಾರ, ಜನ ದಟ್ಟಣೆಯಿಂದ ಗಿಜಿಗುಡುತ್ತಿದ್ದ ಬೇಗೂರಿನಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ನೂತನ ಸಬ್‌ಇನ್ಸ್‌ಪೆಕ್ಟರ್ ಸಂದೀಪ್‌ಕುಮಾರ್ ಹಲವಾರು ಸುಧಾರಣೆ ಕ್ರಮ ಕೈಗೊಂಡು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಅ.14ರಂದು ಬೇಗೂರು ಠಾಣೆಯ ಅಧಿಕಾರ ಸ್ವೀಕರಿಸಿದ ಸಂದೀಪ್‌ಕುಮಾರ್ ಕೇವಲ ಒಂದು ತಿಂಗಳ ಅವಧಿಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ ಸವಾರರಿಂದ ಸುಮಾರು 1 ಲಕ್ಷದಷ್ಟು ದಂಡ ಕಟ್ಟಿಸುವ ಮೂಲಕ ಸಂಚಾರ ವ್ಯವಸ್ಥೆಯನ್ನು ತಹಬಂದಿಗೆ ತಂದಿದ್ದಾರೆ. ಇದು ಇಡಿ ಜಿಲ್ಲೆಗೆ ಮಾದರಿಯಾಗಿದೆ.
ರಾ.ಹೆ. 212 ಹಾದು ಹೋಗಿರುವ ಜಿಲ್ಲೆಯ ಪ್ರಮುಖ ಹೋಬಳಿ ಕೇಂದ್ರವಾದ ಬೇಗೂರಿನಲ್ಲಿ ಬೇಕಾಬಿಟ್ಟಿ ವಾಹನ ಸವಾರಿಯಿಂದಾಗಿ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿದ್ದವು. ಇದನ್ನು ತಗ್ಗಿಸುವ ಸಲುವಾಗಿ ಸಂದೀಪ್ ಹಲವು ಸುಧಾರಣಾ ಕ್ರಮ ಕೈಗೊಂಡಿದ್ದು, ಆಟೋ ಹಾಗೂ ಟೆಂಪೋ ಚಾಲಕರಿಗೆ ಸಮವಸ್ತ್ರ ತೊಡಿಸಿದ್ದಾರೆ. ವಾಹನಗಳ ದಾಖಲಾತಿಯ ಬಗ್ಗೆ ನಿಗಾ ವಹಿಸುವಂತೆ ಸೂಚನೆ ನೀಡಿದ್ದಾರೆ.
ಬೇಗೂರಲ್ಲಿ ಎಲ್ಲೆಂದರಲ್ಲಿ ವಾಹನಗಳು ನಿಲ್ಲುತ್ತಿದ್ದನ್ನು ಕಂಡು, ಆಟೋ ಹಾಗೂ ಟೆಂಪೋದವರಿಗೆ ಸಭೆ ನಡೆಸಿ ಪ್ರತ್ಯೇಕವಾಗಿ ನಿಲ್ಲಿಸಲು ಅನುವು ಮಾಡಿಕೊಟ್ಟಿದ್ದಾರೆ. ದಾಖಲಾತಿ ಇಲ್ಲದೆ, ನಿಯಮಬಾಹಿರವಾಗಿ, ಕುಡಿದು ವಾಹನ ಚಲಿಸಿ ಸಿಕ್ಕಿ ಬಿದ್ದ ಮಂದಿಯಿಂದ ನ್ಯಾಯಾಲಯಲ್ಲಿ ತಿಂಗಳ ಅವಧಿಯಲ್ಲಿ 58 ಸಾವಿರ ದಂಡ ಕಟ್ಟಿಸಿದ್ದಾರೆ. ಸ್ವತಃ ಇವರೇ ಸ್ಥಳದಲ್ಲೇ 30 ಸಾವಿರ ದಂಡ ವಸೂಲಿ ಮಾಡಿ ಸರ್ಕಾರಕ್ಕೆ ಹಣ ಸಂದಾಯ ಮಾಡಿದ್ದಾರೆ. ಕುಡಿದು ಸಾರ್ವಜನಿಕರಿಗೆ ಭಂಗ ತಂದ ಸುಮಾರು 30 ಮಂದಿಯ ವಿರುದ್ಧ ಕೇಸು ಹಾಕಿ ಅವರಿಂದ ದಂಡ ಕಟ್ಟಿಸಿದ್ದಾರೆ. ಕುಡುಕರ ಹಾವಳಿಯಿಂದ ಜನರು ಮುಕ್ತರಾಗಲು ಅವಕಾಶ ಮಾಡಿದ್ದಾರೆ. ಇತ್ತೀಚಿಗೆ ಗ್ರಾಮದ ಸುತ್ತಮುತ್ತಲು ಎಡೆಬಿಡದೆ ನಡೆಯುತ್ತಿದ್ದ ಕೇಬಲ್ ಕಳ್ಳತನ, ಕುಡುಕರ ಹಾವಳಿ ನಿಂತಿದೆ. ಠಾಣಾ ವ್ಯಾಪ್ತಿಯಲ್ಲಿನ ಗ್ರಾಮಗಳಲ್ಲಿ ಜೂಜಾಟಕ್ಕೂ ಕಡಿವಾಣ ಹಾಕಿದ್ದಾರೆ.
ಗಣ್ಯರಿಗೂ ದಂಡದ ಬಿಸಿ: ಸಂಚಾರ ನಿಯಮ ಉಲ್ಲಂಘಿಸಿದ ಈ ಭಾಗದ ರಾಜಕೀಯ ಪಕ್ಷಗಳ ಕೆಲ ಮುಖಂಡರು ಸಹ ದಂಡ ಕಟ್ಟಿಸಿರುವುದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದ್ದು, ನಮ್ಮ ನಾಯಕರಿಗೆ ದಂಡ ಹಾಕಿದ ಮೇಲೆ ನಮ್ಮನ್ನು ಸುಮ್ಮನೆ ಬಿಡುತ್ತಾರೆಯೇ ಎಂದು ಜನರು ಎಚ್ಚೆತ್ತಿದ್ದಾರೆ.
ಪೊಲೀಸ್ ಠಾಣೆಯಲ್ಲಿ ಮಧ್ಯವರ್ತಿಗಳಿಗೆ ಬ್ರೇಕ್ ಹಾಕಿದ್ದಾರೆ. ದೂರುದಾರ ಹಾಗೂ ಆರೋಪಿಗಳನ್ನು ಮುಖಾ ಮುಖಿ ಕುಳ್ಳರಿಸಿ, ನ್ಯಾಯ ದೊರಕಿಸುವ ಕೆಲಸ ಕಂಡು ಮಧ್ಯವರ್ತಿಗಳು ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ. ಕೊಳ್ಳೇಗಾಲದ ಸಬ್‌ಇನ್‌ಪೆಕ್ಟರ್ ಆಗಿದ್ದಾಗ ಅಲ್ಲಿನ ಸಂಚಾರ ಸುವ್ಯವಸ್ಥೆ ಕಾಪಾಡಿ ಒಳ್ಳೆ ಹೆಸರು ಮಾಡಿದ್ದ ಇವರು, ಇದೀಗ ಜಿಲ್ಲಾ ಉಸ್ತುವಾರಿ ಸಚಿವ ಮಹದೇವಪ್ರಸಾದ್ ಅವರ ತವರು ಹೋಬಳಿ ಕೇಂದ್ರದಲ್ಲಿ ಹವಾ ಮೂಡಿಸಿದ್ದಾರೆ.
ಮತ್ತಷ್ಟು ಕೆಲಸವಾಗಬೇಕಿದೆ: ಬೇಗೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದ್ದು, ರಸ್ತೆಯ ಬದಿಯಲ್ಲಿ ಫುಟ್‌ಪಾತ್ ಒತ್ತುವರಿ ತೆರವುಗೊಳಿಸಿಬೇಕಿದೆ. ಗ್ರಾಪಂ ಹಾಗು ಬಿಸಿಎಂ ಹಾಸ್ಟೆಲ್ ಎದುರು ಇರುವ ಆಟೋ ನಿಲ್ದಾಣ ಬೇರೆಡೆ ಸ್ಥಳಾಂತರಿಸಬೇಕಿದೆ. ಬೇಗೂರು ಪರಿಮಿತಿಯಲ್ಲಿ ರಸ್ತೆ ಡುಬ್ಬಗಳಿದ್ದು, ರಸ್ತೆ ಡುಬ್ಬಕ್ಕೆ ಸೂಚನಾ ಫಲಕ, ಸ್ಟಿಕ್ಕರ್ ಹಾಗೂ ಬಣ್ಣ ಹಾಕಬೇಕಿದೆ. ಗ್ರಾಮದ ಬಸ್ ನಿಲ್ದಾಣದ ಮುಂದೆ ಪೇದೆ ನಿಲ್ಲಿಸಬೇಕಿದೆ.
ಗ್ರಾಮದಲ್ಲಿ ರಾತ್ರಿ ಗಸ್ತು ಆರಂಭಿಸಬೇಕಿದೆ. ಶಾಲಾ-ಕಾಲೇಜು ಬಿಡುವ ಸಮಯದಲ್ಲಿ ಕಾಲೇಜು ಬಳಿಯಿಂದ ಗ್ರಾಮದವರೆಗೆ ಪೊಲೀಸರು ಗಸ್ತು ತಿರುಗಬೇಕಿದೆ. ಬೇಗೂರು ಠಾಣಾ ವ್ಯಾಪ್ತಿಯ ಕೆಲ ಗ್ರಾಮದಲ್ಲಿನ ಕಿರಾಣಿ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದ್ದು ಇದಕ್ಕೆ ಬ್ರೇಕ್ ಹಾಕಬೇಕಾಗಿದೆ.
ನೂತನ ಸಬ್ ಇನ್ಸ್‌ಪೆಕ್ಟರ್ ಸಂದೀಪ್‌ಕುಮಾರ್ ಬಂದ ಮೇಲೆ ಠಾಣಾ ವ್ಯಾಪ್ತಿಯಲ್ಲಿ ಸಂಚಾರ ಸುವ್ಯವಸ್ಥೆಗೆ ಆದ್ಯತೆ ನೀಡಿದ್ದಾರೆ. ಠಾಣೆಯಲ್ಲಿ ಮಧ್ಯವರ್ತಿಗಳ ಕಾಟ ತಪ್ಪಿದ್ದು, ಸಾರ್ವಜನಿಕರು ಮುಕ್ತವಾಗಿ ಸಮಸ್ಯೆ ಬಗೆಹರಿಸಿಕೊಳ್ಳಬಹುದಾಗಿದೆ.
ಬಸಪ್ಪ, ಬೇಗೂರು.
ಹೊಸದಾಗಿ ಇಲ್ಲಿನ ಠಾಣೆಗೆ ಬಂದಿದ್ದೇನೆ. ಸಂಚಾರಕ್ಕೆ ಹೆಚ್ಚಿನ ಒತ್ತು ನೀಡಲು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಮತ್ತಷ್ಟು ಕೆಲಸ ಮಾಡುವ ಉದ್ದೇಶ ಹೊಂದಿದ್ದೇನೆ. ಅದಕ್ಕಾಗಿ ಮತ್ತಷ್ಟು ಸಮಯ ಬೇಕಾಗಿದೆ.
ಸಂದೀಪ್‌ಕುಮಾರ್, ಪಿಎಸ್‌ಐ, ಬೇಗೂರು ಠಾಣೆ.