ಕರಡಿ ದಾಳಿ ವಿರುದ್ಧ ಅರಣ್ಯ ಇಲಾಖೆಯಿಂದ ಜನಜಾಗೃತಿ
ಕ.ಪ್ರ.ವಾರ್ತೆ ಅರಸೀಕೆರೆ ನ.19
ತಾಲೂಕಿನಲ್ಲಿ ಕರಡಿ ದಾಳಿಯಿಂದ ಭಯಭೀತರಾಗಿರುವ ಗ್ರಾಮಗಳ ಜನರಿಗೆ ಅರಿವು ಮೂಡಿಸುವ ಕಾರ್ಯಕ್ಕೆ ಅರಣ್ಯ ಇಲಾಖೆ ಮುಂದಾಗಿದ್ದು ಮೊದಲ ಹಂತದಲ್ಲಿ ಡಂಗೂರ ಸಾರುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ.
ಕಣಕಟ್ಟೆ ಹೋಬಳಿಯ ನಾಗಪುರಿ ಅರಣ್ಯದ ಸುತ್ತಮುತ್ತ ಬಹುತೇಕ ಗ್ರಾಮಗಳಲ್ಲಿ ಜನತೆ ಕರಡಿ ದಾಳಿಯ ಭೀತಿಗೆ ಒಳಗಾಗಿದ್ದಾರೆ. ಅಲ್ಲದೇ ಕೋಡಿಹಳ್ಳಿ, ಪುರ್ಲೇಹಳ್ಳಿ, ಹರತನಹಳ್ಳಿ, ಭೈರನಾಯ್ಕನಹಳ್ಳಿ, ನರಸೀಪುರ, ಬ್ಯಾಡರಹಳ್ಳಿ ಗೊಲ್ಲರಹಟ್ಟಿ, ಚಿಕ್ಕಮ್ಮನಹಳ್ಳಿ, ಕುರುವಂಕ, ಕೊಂಡವಾಗಿಲು, ಮರಟಗೆರೆ, ಸೇರಿದಂತೆ ನಾನಾ ಹಳ್ಳಿಗಳಲ್ಲಿ ಡಂಗೂರ ಸಾರಲಾಗುತ್ತಿದೆ. ರೈತರು ಬೆಳಗಿನ ಜಾವ ಹಾಗೂ ರಾತ್ರಿಯ ವೇಳೆಯಲ್ಲಿ ಒಬ್ಬೊಬ್ಬರೇ ತಿರುಗಾಡಬಾರದು ಹಾಗೂ ಹೊಲ, ತೋಟಗಳಿಗೆ ನಿರಾಯುಧರಾಗಿ ಹೋಗಬಾರದು ಅಗತ್ಯವಿದ್ದರೆ ಗುಂಪು-ಗುಂಪಾಗಿ ಆಯುಧ ಹಿಡಿದು ಸಂಚರಿಸಬೇಕು ಎಂಬುದು ಸೇರಿದಂತೆ ಇನ್ನಿತರೆ ಅಂಶಗಳನ್ನು ಜನರಿಗೆ ತಿಳಿಸಲಾಗುತ್ತಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ವಲಯ ಅರಣ್ಯಾಧಿಕಾರಿ ಜೆ.ವಿ.ರವಿ ಕರಡಿ ದಾಳಿಯಿಂದ ಜನರು ಭಯ ಭೀತಿಗೊಳಗಾಗಿದ್ದು ಅರಣ್ಯ ಇಲಾಖೆಯಿಂದ ಕರಡಿ ಹಿಡಿಯಲು ಅಗತ್ಯ ಸಿದ್ಧತೆ ಮಾಡಲಾಗಿದೆ. ಈಗಾಗಲೇ ಸಿಬ್ಬಂಧಿ ಸೂಕ್ತ ಉಪಕರಣಗಳ ಸಹಾಯದಿಂದ ಕಾರ್ಯಾಚರಣೆಗೆ ಸನ್ನದ್ಧರಾಗಿದ್ದಾರೆ. ದಾಳಿಗೊಳಗಾದ ವ್ಯಕ್ತಿಗಳಿಗೆ ಪರಿಹಾರ ನೀಡುವ ಸಂಬಂಧ ಸರ್ಕಾರಕ್ಕೆ ವರದಿ ಕಳುಹಿಸಲಾಗಿದೆ ಎಂದರು. ಉಪವಲಯ ಅರಣ್ಯಾಧಿಕಾರಿ ಮಂಜುನಾಥ್, ಸಿಬ್ಬಂದಿ ದಿಲೀಪ್, ಗ್ರಾಮದ ಚಿರಂಜೀವಿ, ಶಂಕರಲಿಂಗಪ್ಪ ಹಲವರು ಇದ್ದರು.
ಅಂದರ್‌ಬಾಹರ್ ಜೂಜಾಟ: 10 ಬಂಧನ
ಅರಸೀಕೆರೆ: ತಾಲೂಕಿನ ಬಾಣಾವರ ಹೋಬಳಿ, ಸುಳದಿಮ್ಮನಹಳ್ಳಿಯ ಶಂಕರಣ್ಣ ಎಂಬುವರ ಮನೆಯ ಮುಂದೆ ನ. 18 ರಂದು ಸಂಜೆ ಅಂದರ್‌ಬಾಹರ್ ಜೂಜಾಡುತ್ತಿದ್ದವರನ್ನು ಪೊಲೀಸರು ಬಂಧಿಸಿ, ಪಣಕ್ಕೆ ಇಟ್ಟಿದ್ದ ಹಣ ವಶಪಡಿಸಿಕೊಂಡಿದ್ದಾರೆ. ಸುಳದಿಮ್ಮನಹಳ್ಳಿಯ ದೇವರಾಜ (38), ಮಲ್ಲೇಶಪ್ಪ (52), ಸುರೇಶ (26), ಪ್ರದೀಪ (26) ಬಂಧಿತರು. ಪಣಕ್ಕಿಟ್ಟಿದ್ದ 2800 ರು. ಗಳನ್ನು ವಶಪಡಿಸಿಕೊಂಡು, ಬಾಣಾವರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅರಸೀಕೆರೆ ತಾ. ಜೆ.ಸಿ.ಪುರ ಗ್ರಾಮದ ಪುಟ್ಟಗವಿ ದೇವಸ್ಥಾನದ ಹತ್ತಿರ ಜೂಜಾಡುತ್ತಿದ್ದ ಜೆಸಿ ಪುರದ ಚಿಕ್ಕಣ್ಣ (40), ಗಂಗಾಧರಪ್ಪ (53), ಮಹಮದ್‌ಗೌಸ್ (32), ಜಭೀವುಲ್ಲಾ (33), ಮರುಳ ಸಿದ್ದಪ್ಪ (38), ರಾಜಣ್ಣ (40) ಎಂಬುವರನ್ನು ಬಂಧಿಸಿ, ಪಣಕ್ಕಿಟ್ಟದ್ದ 15370 ರು.ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅರಸೀಕೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ