ಪ್ರತಿ ಮಗುವಿಗೂ ಉತ್ತಮ ನಾಗರಿಕನಾಗಿ ರೂಪುಗೊಳ್ಳುವ ಹಕ್ಕಿದೆ: ನ್ಯಾ. ಸೋಮಶೇಖರ್
ಹಾಸನ: ಪ್ರತಿಯೊಂದು ಮಗುವಿಗೂ ಉತ್ತಮ ನಾಗರಿಕನಾಗಿ ರೂಪುಗೊಂಡು ಬದುಕುವ ಹಕ್ಕಿದೆ. ಕೆಲವು ಸಮಾಜಘಾತುಕ ಶಕ್ತಿಗಳು ಅದನ್ನು ಕಸಿಯುವ ಪ್ರಯತ್ನ ನಿರಂತರವಾಗಿ ಮಾಡುತ್ತಾ ಬಂದಿವೆ. ಇದನ್ನು ಶಾಶ್ವತವಾಗಿ ಹತ್ತಿಕ್ಕಬೇಕಿದೆ ಎಂದು ಜಿಲ್ಲಾ ಪ್ರಧಾನ ನ್ಯಾಯಾಧೀಶ ಜೆ.ಎನ್.ಸೋಮಶೇಖರ್ ಹೇಳಿದರು.
ಜಿಲ್ಲಾಡಳಿತ, ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಸಮಗ್ರ ಮಕ್ಕಳ ರಕ್ಷಣಾ ಘಟಕ, ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಮಕ್ಕಳ ಕಲ್ಯಾಣ ಸಮಿತಿ ಸಂಯುಕ್ತಾಶ್ರಯದಲ್ಲಿ ನಗರದ ಬಾಲಕರ ಸರ್ಕಾರಿ ಬಾಲ ಮಂದಿರದಲ್ಲಿ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕಠಿಣ ಕಾನೂನುಗಳಿದ್ದರೂ ಮಕ್ಕಳ ಸಾಗಾಣಿಕೆ, ಸಮಾಜಘಾತುಕ ಚಟುವಟಿಕೆಗಳನ್ನು ತೊಡಗಿಸುವುದು ಲೈಂಗಿಕ ಶೋಷಣೆಗಳಂತಹ ಘಟನೆಗಳು ನಿರಂತರವಾಗಿ ನಡೆಯುತ್ತಿವೆ. ಈ ಬಗ್ಗೆ ಇಡೀ ಸಮಾಜ ಜಾಗೃತವಾಗ ಬೇಕು, ಎಲ್ಲಾ ಮಕ್ಕಳೂ ಸತ್ಪ್ರಜೆಗಳಾಗಿ ಬೆಳೆಯುವ ಅವಕಾಶ ಕಲ್ಪಿಸಬೇಕು ಎಂದು ತಿಳಿಸಿದರು.
ಅನೇಕ ಕಾರಣಗಳಿಂದ ನಿರ್ಲಕ್ಷಕೊಳಗಾದ ಮಕ್ಕಳಿಗೆ ಸರ್ಕಾರ ಆಶ್ರಯ ನೀಡಿ ಪೋಷಿಸುತ್ತಿದೆ. ಎಲ್ಲರೂ ಒಳ್ಳೆಯ ಶಿಕ್ಷಣ ಹೊಂದಿ ಸಮಾಜಕ್ಕೆ ಕೊಡುಗೆ ನೀಡಬೇಕು, ಮಾದರಿಯಾಗಿ ಬದುಕಬೇಕು, ಎಂದು ಅವರು ಕರೆ ನೀಡಿದರು.
ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಬಿ.ಜಯಂತ್‌ಕುಮಾರ್ ಮಾತನಾಡಿ, ಪ್ರತಿಯೊಬ್ಬರು ಆತ್ಮ ವಿಶ್ವಾಸ ರೂಢಿಸಿಕೊಂಡು ಇತರರಿಗೆ ಕೆಡುಕು ಮಾಡದೆ ಬದುಕಬೇಕು, ಗುರು ಹಿರಿಯರನ್ನು ಗೌರವಿಸಬೇಕು ಎಂದರು.
ಪ್ರತಿ ಮಗುವಿಗೂ, ಆರೋಗ್ಯದ ಹಕ್ಕು, ಶೈಕ್ಷಣಿಕ ಹಕ್ಕು ಸೇರಿದಂತೆ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬದುಕುವ ಸಾಮಾಜಿಕ ಹಕ್ಕುಗಳಿವೆ. ಅವುಗಳನ್ನು ಕಸಿದುಕೊಳ್ಳಬಾರದು. ಬಲವಂತದ ದುಡಿಮೆ ಶಿಕ್ಷಣ ಹಕ್ಕು ಕಸಿಯುವ ಅಪವಾದ ಎಂದ ಅವರು, ಬಾಲ ಮಂದಿರದ ಮಕ್ಕಳು ಸವಾಲುಗಳನ್ನು ಮೆಟ್ಟು ನಿಂತು ಗುರಿ ಮುಟ್ಟಬೇಕು ಎಂದು ಮಕ್ಕಳಲ್ಲಿ ಸ್ಥೈರ್ಯ ತುಂಬಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ದೇವರಾಜೇಗೌಡ ಮಾತನಾಡಿ, ಸಮಾಜ ಮುಖಿ ಬದುಕು ಮುಖ್ಯ ಹೆಚ್ಚು ಇದರೊಂದಿಗೆ ಉತ್ತಮ ಜೀವನ ಮಟ್ಟವನ್ನು ಉನ್ನತೀಕರಿಸಿಕೊಳ್ಳಿ ಎಂದು ಕರೆ ನೀಡಿದರು.
ಸರ್ಕಾರಿ ಬಾಲಕಿಯರ ಬಾಲ ಮಂದಿರದ ಕುಮಾರಿ ರಾಧ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಎಚ್.ಸಿ.ಚಿದಾನಂದ, ಮಕ್ಕಳ ಸಹಾಯ ವಾಣಿ ಕೇಂದ್ರದ ಮುಖ್ಯಸ್ಥ ಫೌಲಸ್, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಮಧುರ, ಜಿಲ್ಲಾ ಸಮಗ್ರ ಮಕ್ಕಳ ರಕ್ಷಣಾ ಪ್ರಚಾರಕ ಮೇಲ್ವಿಚಾರಕರಾದ ಗೀತಾ ಇನ್ನೂ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಲ್ಲಿಗೆ ಮೊಪೆಡ್ ಡಿಕ್ಕಿ: ಸವಾರ ಸಾವು
ಹಾಸನ: ಕೆರೆ ಏರಿಯ ಕಲ್ಲಿಗೆ ಡಿಕ್ಕಿ ಹೊಡೆದ ಪರಿಣಾಮ ಮೊಪೆಡ್ ಸವಾರ ಸಾನ್ನಪ್ಪಿರುವ ಘಟನೆ ತಾಲೂಕಿನ ಸಾಲಗಾಮೆ ಕೆರೆ ಏರಿ ಬಳಿ ಸೋಮವಾರ ನಡೆದಿದೆ. ಹಾಸನ ತಾ. ಕಡದರವಳ್ಳಿ ವಾಸಿ ರಾಜಶೆಟ್ಟಿ ಎಂಬುವವರ ಪುತ್ರ ಮಧು ಮತ್ತು ಅಳಿಯ ಕಿರಣ್‌ಕುಮಾರ್ ಸಾಲಗಾಮೆ ಕೆರೆಯ ಏರಿಯ ಮೇಲೆ ತಮ್ಮ ಟಿವಿಎಸ್‌ನಲ್ಲಿ ಊರಿಗೆ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಕಿರಣ್‌ಕುಮಾರ ಟಿವಿಎಸ್ ಅನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಏರಿಯ ಕಲ್ಲಿಗೆ ಡಿಕ್ಕಿ ಮಾಡಿದ ಪರಿಣಾಮ ಮುಖ ಹಾಗೂ ತಲೆಗೆ ರಕ್ತಗಾಯಗಳಾಗಿ ಕಿರಣಕುಮಾರ್ (45) ಮೃತಪಟ್ಟಿದ್ದಾರೆ. ರಾಜಶೆಟ್ಟಿ ಕೊಟ್ಟ ದೂರಿನ ಮೇರೆಗೆ ಹಾಸನ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ.