ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಶಾಲೆಗೆ ಬೀಗ ಜಡಿದು ಗ್ರಾಮಸ್ಥರ ಪ್ರತಿಭಟನೆ

Srinivasa Murthy VN
Updated On : 20 Nov 2013, 12:15 pm

ಕ.ಪ್ರ.ವಾರ್ತೆ ರಾಮನಾಥಪುರ ನ. 19
ಸಮೀಪದ ಹಂಡ್ರಂಗಿ ಪಂಚಾಯ್ತಿ ವ್ಯಾಪ್ತಿಯ ಅಕ್ಕಲವಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಅವ್ಯವಸ್ಥೆಯನ್ನು ಖಂಡಿಸಿ ಗ್ರಾಮಸ್ಥರು ಶಾಲೆಗೆ ಬೀಗ ಜಡಿದು ಪಾಲಕರು ಹಾಗೂ ಮಕ್ಕಳೊಂದಿಗೆ  ಪ್ರತಿಭಟನೆ ನಡೆಸಿದರು.  
ಶಾಲೆಯ ಕಟ್ಟಡ ಮತ್ತು ಮೇಲ್ಛಾವಣಿ ಸಂಪೂರ್ಣ ಶಿಥಿಲಗೊಂಡು ಯಾವ ಕ್ಷಣದಲ್ಲಾದರೂ ಮುರಿದು ಬೀಳುವ ಸಾಧ್ಯತೆ ಇದೆ.  ಹೀಗಿದ್ದು, ಈ ಮೇಲ್ಛಾವಣಿ ಕೆಳಗೆ ಪ್ರತಿನಿತ್ಯ ಬಿಸಿಯೂಟದ ದಾಸೋಹ ನಡೆಯುತ್ತಿದೆ. ಶಾಲೆಗೆ ನೂತನ ಕಟ್ಟಡ ನಿರ್ಮಿಸಲು ಮುಖ್ಯ ಶಿಕ್ಷಕ ಸೋಮಶೇಖರ್ ಅವರೇ ಕಟ್ಟಡ ಕಾಮಗಾರಿಯ ರುವಾರಿಯನ್ನು ಹೊತ್ತಿದ್ದು, ಕಟ್ಟಡದ ಕಾಮಗಾರಿ ಹಣವನ್ನು ದುರ್ಬಳಕೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಸತತ ನಾಲ್ಕು ವರ್ಷಗಳಿಂದ ಕಾಮಗಾರಿ ಸ್ಥಗಿತಗೊಂಡಿದೆ.  
ಈ ವಿಚಾರವಾಗಿ ಕೇಳಲು ಹೋದರೆ ಉಡಾಫೆಯಿಂದ ಉತ್ತರಿಸುತ್ತಾರೆ. ಮತ್ತು ಈ ಶಾಲೆಗೆ ನೀರಿನ ಪೂರೈಕೆ ಮಾಡುವ ವಾಟರ್‌ಟ್ಯಾಂಕ್ ತೊಳೆದು ಎಷ್ಟೋ ದಿನಗಳಾಗಿವೆ.  ಇದರಿಂದ ನೀರು ಕಲುಷಿತಗೊಂಡು ಸಣ್ಣಹುಳುಗಳು ಆಗಿದ್ದು, ಪ್ರತಿನಿತ್ಯ ಶಾಲೆಯ ಮಕ್ಕಳು ಬೇರೆ ದಾರಿಯಿಲ್ಲದೆ ಈ ನೀರನ್ನೇ ಬಳಸುತ್ತಿದ್ದಾರೆ.
ಇದರಿಂದಾಗಿ ಎಷ್ಟೋ ಮಕ್ಕಳು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಶಾಲೆಗಳ ಸ್ವಚ್ಛತೆಗೆ ಸರ್ಕಾರ ಹಣ ಬಿಡುಗಡೆ ಮಾಡುತ್ತಿದ್ದರೂ ಶಾಲೆಯ ಮುಖ್ಯ ಶಿಕ್ಷಕ ಶಾಲೆ ಮಕ್ಕಳಿಂದ ಬಲವಂತವಾಗಿ ಬರಿಗೈನಿಂದ ಶೌಚಾಲಯವನ್ನು ಸ್ವಚ್ಛ ಮಾಡಿಸುತ್ತಾರೆ ಎಂದು ಗ್ರಾಮಸ್ಥರು ಆರೋಪಿಸಿದರು.
ಜೊತೆಗೆ ಎಸ್‌ಡಿಎಂಸಿಯ 30 ಸಾವಿರ ರು.ಗಳನ್ನು ತೆಗೆದುಕೊಂಡಿದ್ದರೂ, ಈ ಶಾಲೆಯ ತಡೆಗೋಡೆಗೆ ಒಂದು ಗೇಟ್ ಕೂಡಾ ಅಳವಡಿಸಿಲ್ಲ ಮತ್ತು ಶಾಲೆಯ ಹಿಂಭಾಗದ ಮರಗಳ ಹರಾಜಿನಿಂದ ಬಂದಂತಹ 56 ಸಾವಿರ ರು. ಗಳನ್ನು ಗ್ರಾಮಸ್ಥರ ಸಮಕ್ಷಮದಲ್ಲಿ ಮುಖ್ಯ ಶಿಕ್ಷಕನಿಗೆ ನೀಡಲಾಗಿದ್ದು, ಇದುವರೆಗೂ ಆ ಹಣಕ್ಕೆ ಸರಿಯಾದ ಲೆಕ್ಕ ನೀಡುತ್ತಿಲ್ಲ ಎಂದು ದೂರಿದರು.
ಸಂಬಂಧಪಟ್ಟ ಕ್ಲಸ್ಟರ್ ಸಂಪನ್ಮೂಲ ಅಧಿಕಾರಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಾಕಷ್ಟು ಬಾರಿ ದೂರು ನೀಡಿದ್ದು, ಯಾವ ಪ್ರಯೋಜನವೂ ಆಗಿಲ್ಲ. ಇನ್ನಾದರೂ ಹಿರಿಯ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ತನಿಖೆ ನಡೆಸಿ ಶಿಸ್ತು ಕ್ರಮ ಕೈಗೊಳ್ಳದೆ ಹೋದಲ್ಲಿ ಜಿಲ್ಲಾ ಶಿಕ್ಷಣಾಧಿಕಾರಿ ಕಚೇರಿ ಮತ್ತು ಶಿಕ್ಷಣ ಸಚಿವರ ಮನೆ ಮುಂದೆ ಧರಣಿ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಗ್ರಾಮಸ್ಥರಾದ ಗಿಡ್ಡೇಗೌಡ, ರೈತ ಸಂಘದ ಜಗದೀಶ್, ದೇವರಾಜ್, ಎಸ್‌ಡಿಎಂಸಿ ಸದಸ್ಯ ರಂಗಸ್ವಾಮಿ, ಕಾಳೇಗೌಡ, ಶಿವಣ್ಣ, ಭೀಮಯ್ಯ, ರಾಮಕೃಷ್ಣ, ಗ್ರಾಪಂ ಸದಸ್ಯ ಜಗದೀಶ್ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement