ಅಣೆಕಟ್ಟಿನ ಕಬ್ಬಿಣವನ್ನೇ ಕಿತ್ತ ಕಿಡಿಗೇಡಿಗಳು
ಕ.ಪ್ರ.ವಾರ್ತೆ ರಾಮನಾಥಪುರ ನ. 20
ಕಾವೇರಿ ನದಿಗೆ ಅಡ್ಡಲಾಗಿ ಕಟ್ಟೇಪುರದಲ್ಲಿ ನಿರ್ಮಿಸಿರುವ ಐತಿಹಾಸಿಕ ಶತಾಯು ಅಣೆಕಟ್ಟು ಕಿಡಿಗೇಡಿಗಳ ಲಾಭದಾಸೆಗೆ ಬಲಿಯಾಗಿ ಗಂಡಾಂತರದಲ್ಲಿದೆ. ಈ ಹಿಂದೆ ಸರ್ಕಾರ ಶತಾಯು ಅಣೆಕಟ್ಟಿಗೆ ಕಾಂಕ್ರಿಟ್ ಹಾಕಿಸುವುದರೊಂದಿಗೆ ಭದ್ರತೆಗೆ ಇನ್ನಷ್ಟು ಕ್ರಮ ಕೈಗೊಂಡಿತ್ತು.
ಇತ್ತೀಚೆಗೆ ಕೆಲ ಕಿಡಿಗೇಡಿಗಳು ದುರುದ್ದೇಶದಿಂದ ಈ ಅಣೆಕಟ್ಟಿನಲ್ಲಿ ಕಾಂಕ್ರಿಟನ್ನು ಅಗೆದು ಅದರಲ್ಲಿನ ಕಬ್ಬಿಣವನ್ನು ಲೂಟಿ ಮಾಡುತ್ತಿದ್ದಾರೆ. ಹೀಗಾದರೆ ಈ ಅಣೆಕಟ್ಟಿನ ಗತಿಯೇನು. ಈ ಅಣೆಕಟ್ಟಿನ ಸ್ಥಿತಿ ಗತಿ ಕುರಿತು ಅಧಿಕಾರಿಗಳು ಮೌನದಿಂದಿರುವುದು ಸರಿಯೇ. ಸಂಬಂಧಿಸಿದ ಅಧಿಕಾರಿಗಳು ಹಾಗೂ ಜಲಾನಯನ ಮುಖ್ಯ ಇಂಜಿನಿಯರ್ ಎಷ್ಟರಮಟ್ಟಿಗೆ ದಕ್ಷತೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂಬುದು ಈ ಅಣೆಕಟ್ಟಿಗೆ ಬಂದರೆ ತಿಳಿಯುತ್ತದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನಾಲ್ವಡಿ ಕೃಷ್ಣರಾಜೇಂದ್ರ ಅರಸರ ಕಾಲದಲ್ಲಿ ಕಟ್ಟಿಸಿದ ಈ ಶತಾಯು ಅಣೆಕಟ್ಟಿಗೆ ಇಂದಿಗೂ ಸರಿಯಾದ ಭದ್ರತೆ ವ್ಯವಸ್ಥೆ ಇಲ್ಲ. ಈ ಹಿಂದೆ ಈ ಅಣೆಕಟ್ಟಿನ ರಾಜ ಕಾಲುವೆಯ ಹಿತ್ತಾಳೆ ಗೇಟ್‌ಗಳೆ ರಿಪೇರಿಯ ನೆಪದಲ್ಲಿ ಹೊತ್ತೊಯ್ದ ಅಧಿಕಾರಿಗಳು ಇದುವರೆಗೂ ಇದನ್ನು ಅಳವಡಿಸುವ ಗೋಜಿಗೆ ಹೋಗುವುದಿರಲಿ ಅದರ ಪತ್ತೆಯೇ ಇಲ್ಲ. ಬದಲಿಗೆ ಕಬ್ಬಿಣದ ಗೇಟ್‌ಗಳನ್ನು ಅಳವಡಿಸಲಾಗಿದೆ. ಸರ್ಕಾರ ಎಚ್ಚೆತ್ತುಕೊಂಡು ಈ ಶತಾಯು ಅಣೆಕಟ್ಟಿಗೆ ಸೂಕ್ತ ರಕ್ಷಣೆ ಹಾಗೂ ಭದ್ರತಾ ವ್ಯವಸ್ಥೆಯನ್ನು ಒದಗಿಸಿ ಕೊಡುವಂತೆ ಸ್ಥಳೀಯ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮ
ಚನ್ನರಾಯಪಟ್ಟಣ: ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗದೇ ಇರಲು ಗ್ರಂಥಾಲಯ ಎಂಬ ಔಷಧಿ ಅವಶ್ಯ. ಓದುವುದನ್ನು ಮೈಗೂಡಿಸಿಕೊಂಡರೆ ನಿಮ್ಮ ಬದುಕು ಉತ್ತಮವಾಗಿರುತ್ತದೆ ಎಂದು ಎಸ್‌ಐ ರಾಜು ತಿಳಿಸಿದರು. ಪಟ್ಟಣದ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಹೆಚ್ಚಿನ ಸಮಯ ಟಿವಿ ನೋಡುತ್ತಾ ಕಾಲಹರಣ ಮಾಡುವುದು ಸರಿಯಲ್ಲ. ಈ ಕಾಲವನ್ನು ಪುಸ್ತಕ ಹಾಗೂ ಪತ್ರಿಕೆ ಓದುವ ಹವ್ಯಾಸಕ್ಕೆ ಬಳಸಿದರೆ ವಿದ್ಯಾರ್ಥಿಗಳ ಜ್ಞಾನಕಣಜ ತುಂಬಿ ಅವರ ಭವಿಷ್ಯವನ್ನೇ ಉತ್ತಮ ದಾರಿಗೆ ಸಾಗಿಸುತ್ತದೆ ಎಂದರು. ಪ್ರಾಂಶುಪಾಲ ಶಿವರಾಮೇಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿದರು, ವೃತ್ತನಿರೀಕ್ಷಕ ಶೈಲೇಂದ್ರಕುಮಾರ್, ಕೈಗಾರಿಕೋದ್ಯಮಿ ಅಟ್ಟಾವರ ರಾಮದಾಸ್, ಹಿರಿಯ ಪತ್ರಕರ್ತ ಪುಟ್ಟಣ್ಣ, ಗ್ರಂಥಾಲಯ ಸಹಾಯಕ ದೇವರಾಜ್ ಇದ್ದರು. ಗ್ರಂಥಾಲಯದ ಮಹತ್ವ ಮತ್ತು ಅಗತ್ಯತೆ ಎಂಬ ವಿಷಯದ ಬಗ್ಗೆ ಭಾಷಣ ಸ್ಪರ್ಧೆ ನಡೆಯಿತು. ನಂಜೇಗೌಡ ಸ್ವಾಗತಿಸಿದರು.