ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕನಕ ಒಂದು ಜನಾಂಗಕ್ಕೆ ಸೀಮಿತರಲ್ಲ: ಶಾಸಕ

Srinivasa Murthy VN
Updated On : 20 Nov 2013, 11:48 am

ಕ.ಪ್ರ.ವಾರ್ತೆ ಅರಸೀಕೆರೆ ನ. 21
ಕನಕದಾಸರು ಯಾವುದೇ ಒಂದು ಜನಾಂಗಕ್ಕೆ ಸೀಮಿತವಾದವರಲ್ಲ. ಎಲ್ಲ ಮತಧರ್ಮಗಳ ಜನರಿಗೆ ಒಳಿತನ್ನು ಬಯಸಿದ ಮಹಾನ್ ಸಂತ, ತತ್ವಜ್ಞಾನಿ ದೈವಾಂಶ ಸಂಭೂತ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಅಭಿಪ್ರಾಯಪಟ್ಟರು.
ಪಟ್ಟಣದ ಬಸವರಾಜೇಂದ್ರ ಪ್ರೌಢಶಾಲಾ ಆವರಣದಲ್ಲಿ ತಾಲೂಕು ಆಡಳಿತ ಮತ್ತು ಕುರುಬರ ಸಂಘ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ಧ ಕನಕ ಜಯಂತಿ ಸಮಾರಂಭದ ಅಧ್ಯಕ್ಷತೆ ವಹಿಸಿ  ಅವರು ಮಾತನಾಡಿದರು.
ಜಾತಿ-ಮತ, ತಾರತಮ್ಯ, ಬೇಧಭಾವಗಳು ಮಾನವತೆಗೆ ಮಾರಕ ಎಂಬುದು ಅವರ ಬಾಳಿನ ಮಂತ್ರವಾಗಿತ್ತು. ಸಮಾಜದಲ್ಲಿ ಬೇರುಬಿಟ್ಟಿರುವ ಮೇಲು, ಕೀಳು ಎಂಬ ವರ್ಗ ವರ್ಣ ತಾರತಮ್ಯ ಹೋಗಲಾಡಿಸಲು ತಮ್ಮ ಕೀರ್ತನೆಗಳ ಮೂಲಕ ಹೋರಾಟ ನಡೆಸಿದ ಮಹಾನ್ ಪುರುಷರು ಎಂದರು.
ಬಸವಣ್ಣ, ಬುದ್ಧ, ಮಹಾವೀರ, ಕನಕದಾಸರು ದೈವಾಂಶ ಸಂಭೂತರಾಗಿದ್ದು ಭೂಲೋಕದಲ್ಲಿ  ಅಸಮಾನತೆ ಹೆಚ್ಚಾದಾಗ ಅದನ್ನು ಹೋಗಲಾಡಿಸಲು ಜನ್ಮವೆತ್ತಿ ಅನೇಕ ಪವಾಡಗಳ ಮೂಲಕ ಜನರಲ್ಲಿದ್ದ ಕೀಳರಿಮೆಯನ್ನು ಹೋಗಲಾಡಿಸಿ ಸರಿದಾರಿಗೆ ತರಲು ಹೋರಾಟ ಮಾಡಿದ ಇಂತಹ ಮಹಾನ್ ಪುರುಷರ ತತ್ವ, ಆದರ್ಶಗಳನ್ನು ಇಂದಿನ ಯುವಕರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಮಾಜಕ್ಕೆ ದಾರಿದೀಪವಾಗಬೇಕು ಎಂದು ಹೇಳಿದರು.
ನಿವೃತ್ತ ಶಿಕ್ಷಣಾಧಿಕಾರಿ ಬೇಲೂರು ವಿಜಯನಾರಾಯಣ (ಎನ್.ಬಿ.ನಿಂಗಪ್ಪ) ಮಾತನಾಡಿ,  ಕನಕದಾಸರು ಕೇವಲ ಕವಿ  ಮಾತ್ರ ಅಲ್ಲ. ಪಾಳ್ಯಗಾರ, ಯೋಧ, ದಾಸ, ಭಕ್ತ, ದಾರ್ಶನಿಕರಾಗಿ ಕೀರ್ತನೆಗಳ ಮೂಲಕ ಹರಿಭಕ್ತಸಾರದಿಂದ ಜನತೆಯ ಆಧ್ಯಾತ್ಮ ಪಿಪಾಸೆಯನ್ನು ತಣಿಸಿದ್ದಾರೆ. ಹರಿಭಕ್ತಸಾರ, ನಳಚರಿತ್ರೆ, ರಾಮಧ್ಯಾನಚರಿತೆ ಮತ್ತು ಮೋಹನತರಂಗಿಣಿ ಮುಂತಾದ ಕೃತಿಗಳಿಂದ ಜನತೆಯಲ್ಲಿ ಸಾಹಿತ್ಯಾಭಿರುಚಿಯನ್ನು ಮೂಡಿಸಿ ಸಾಮಾಜಿಕ ಅಸಮತೋಲನಕ್ಕೆ ಕನ್ನಡಿ ಹಿಡಿದಿದ್ದಾರೆ ಎಂದರು.
ಸಮಾರಂಭಕ್ಕೂ ಮುನ್ನ  ಪ್ರವಾಸಿ ಮಂದಿರದಿಂದ ಕನಕದಾಸರ ಭಾವಚಿತ್ರದೊಂದಿಗೆ  ಭಾರಿ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಗೊಂಬೆ ಕುಣಿತ, ವೀರಗಾಸೆ, ಕರಡೆವಾದ್ಯ, ನಂದಿಧ್ವಜ ಕುಣಿತ ಇನ್ನಿತರ ಜಾನಪದ ಕಲಾತಂಡಗಳು ರಾಷ್ಟ್ರೀಯ ಹೆದ್ದಾರಿಯ ಮೂಲಕ ಸಾಯಿನಾಥ ರಸ್ತೆ, ಪೇಟೆಬೀದಿ ಮೂಲಕ ಸಾಗಿ ಸಮಾರಂಭದ  ಸ್ಥಳಕ್ಕೆ ಆಗಮಿಸಿದವು.
ಇದೇ ಸಂದರ್ಭದಲ್ಲಿ ಪ್ರತಿಭಾನ್ವಿತ  ವಿದ್ಯಾರ್ಥಿಗಳಿಗೆ ಹಾಗೂ ಸಮಾಜದಲ್ಲಿ ಉತ್ತಮ  ಸೇವೆ ಮಾಡಿದ ಗಣ್ಯರಿಗೆ ಸನ್ಮಾನಿಸಲಾಯಿತು. ಮಾಜಿ ಶಾಸಕ ಜಿ.ಎಸ್.ಪರಮೇಶ್ವರಪ್ಪ, ತಹಶೀಲ್ದಾರ್ ಕೇಶವಮೂರ್ತಿ, ಜಿ.ಪಂ ಉಪಾಧ್ಯಕ್ಷ ಬಿಳಿಚೌಡಯ್ಯ, ತಾಪಂ ಅಧ್ಯಕ್ಷ ಎಚ್.ಟಿ.ಶಿವಮೂರ್ತಿ, ಪುರಸಭಾಧ್ಯಕ್ಷ ಮೋಹನ್‌ಕುಮಾರ್, ಉಪಾಧ್ಯಕ್ಷೆ ಭಾಗ್ಯಲತಾ ಮಂಜು, ಜಿಪಂ ಸದಸ್ಯ ಕೃಷ್ಣನಾಯ್ಕ, ಪಾರ್ವತಮ್ಮ, ರತ್ಮಮ್ಮ, ಸಂಗೊಳ್ಳಿ ರಾಯಣ್ಣ ಸಹಕಾರ ಸಂಘದ ಅಧ್ಯಕ್ಷ ಡಾ.ಚಂದ್ರಶೇಖರ್, ತಾಪಂ ಸದಸ್ಯ ಎ.ಆರ್.ಜಯಣ್ಣ, ಎಂ.ಎಸ್.ಲಕ್ಷ್ಮಣ್, ಹನುಮೇಗೌಡ, ಮಾನಸ, ಇನ್ನಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement