ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಗೌಡ್ರು ಜಿಲ್ಲೆಗೇನು ಮಾಡಿದ್ದಾರೆ: ವಿಶ್ವನಾಥ್ ಪ್ರಶ್ನೆ

Srinivasa Murthy VN
Updated On : 22 Nov 2013, 12:43 pm

ಕ.ಪ್ರ.ವಾರ್ತೆ ಹಾಸನ ನ. 21
ರಾಜ್ಯ ಸರ್ಕಾರ ಜಿಲ್ಲೆಯನ್ನು ಕಡೆಗಣಿಸಿದೆ ಎಂದು ಮುಖ್ಯಮಂತ್ರಿ ಮನೆ ಮುಂದೆ ಚಳವಳಿ ನಡೆಸುವುದಾಗಿ ಹೇಳಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮೊದಲು ತಮ್ಮ ಅಧಿಕಾರವಧಿಯಲ್ಲಿ ಜಿಲ್ಲೆಗೆ ಮಾಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಶ್ವೇತ ಪತ್ರ ಹೊರಡಿಸಲಿ ಎಂದು ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್ ಆಗ್ರಹಿಸಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವೇಗೌಡರು ಜಿಲ್ಲೆಯಿಂದ ಸತತ 2ನೇ ಬಾರಿಗೆ ಲೋಕಸಭೆಗೆ ಆಯ್ಕೆಯಾಗಿದ್ದು, ಪ್ರಧಾನಿ ಹಾಗೂ ರಾಜ್ಯದ ಮುಖ್ಯಮಂತ್ರಿ ಕೂಡಾ ಆಗಿದ್ದರು. ಅಷ್ಟೇ ಅಲ್ಲದೆ ಅವರ ಮಕ್ಕಳು ಸಹ ಮುಖ್ಯಮಂತ್ರಿ ಹಾಗೂ ಸಚಿವರಾಗಿದ್ದೂ ಜಿಲ್ಲೆಯ ಅಭಿವೃದ್ಧಿಗೆ ಏನೂ ಕೊಡುಗೆ ನೀಡಿದ್ದಾರೆ ಅಂತ ತಿಳಿಸಲಿ. ಪ್ರಸ್ತುತ ಚುನಾವಣೆ ಸಮೀಪಿಸುತ್ತಿರುವುದರಿಂದ 5 ವರ್ಷಗಳಿಂದ ಕಾಣೆಯಾಗಿದ್ದ ಅವರು, ಈಗ 2 ತಿಂಗಳಿಂದ ಜಿಲ್ಲೆ ಬಿಟ್ಟು ಹೋಗಿಲ್ಲ ಎಂದು ಟೀಕಿಸಿದರು.
ಈ ಸಂದರ್ಭದಲ್ಲಿ ಜಿಲ್ಲೆಯ ಅಭಿವೃದ್ಧಿಗೆ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ. ಸಂಪೂರ್ಣವಾಗಿ ಜಿಲ್ಲೆಯನ್ನು ಕಡೆಗಣಿಸಿದೆ ಅಂತ ಈಗ ಸಿಎಂ ಮನೆ ಮುಂದೆ ಸತ್ಯಾಗ್ರಹ ಮಾಡುವುದಾಗಿ ಹೇಳಿದ್ದಾರೆ. ಆದರೆ ಕಳೆದ 10 ವರ್ಷಗಳಲ್ಲಿ ಇವರು ಜಿಲ್ಲೆಗೆ ಮಾಡಿರುವ ಕೆಲಸಗಳಿಂದ ಜನತೆ ಬೇಸತ್ತಿದ್ದು, ದೇವೇಗೌಡರ ಮನೆ ಮುಂದೆ ಜಿಲ್ಲೆಯ ಜನ ಧರಣಿ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಭೂ ಒತ್ತುವರಿಗೆ ಸಂಬಂಧಿಸಿದಂತೆ ಹೊಸ ಚಿಂತನೆ ಪ್ರಾರಂಭವಾಗಿದೆ. ಕಾಫಿ ಬೆಳೆಗಾರರು ಹಾಗೂ ಒತ್ತುವರಿ ದಾರರ ಸಭೆಯನ್ನು ಕರೆಯುತ್ತಿದ್ದೀರಿ. 2006-07ನೇ ಸಾಲಿನಲ್ಲಿ ಶಾಸನ ಸಭೆಯಲ್ಲಿ ಒತ್ತುವರಿ ಭೂಮಿಯನ್ನು ಸರ್ಕಾರದ ವಶಕ್ಕೆ ಪಡೆಯಲು ಭೂ ಕಾಯ್ದೆಗೆ ತಿದ್ದುಪಡಿಯನ್ನು ತರಲು ಮಸೂದೆಯನ್ನು ಶಾಸನ ಸಭೆಯಲ್ಲಿ ಮಂಡಿಸಲೆತ್ನಿಸಿದಾಗ ವಿಶೇಷವಾಗಿ ಪಶ್ಚಿಮಘಟ್ಟ ಶಾಸಕರೆಲ್ಲರು ಒಟ್ಟಿಗೆ ಸೇರಿ ಬಲವಾಗಿ ವಿರೋಧ ಮಾಡಿದ್ದೇವು.
ಮಲೆನಾಡು ಭಾಗದ ಕೂಲಿ ಕಾರ್ಮಿಕರು, ಸಣ್ಣಪುಟ್ಟ ರೈತರು ತಮ್ಮ ಬದುಕಿಗಾಗಿ ಭೂಮಿ ಒತ್ತುವರಿ ಮಾಡಿದ್ದಾರೆ. ಆದರೆ ಶ್ರೀಮಂತರು ಮಾಡಿರುವ ಭೂ ಒತ್ತುವರಿ ಬಿಡಿಸಬೇಕು.
ಅದಕ್ಕೂ ಮೊದಲು ಸರ್ವೇ ಮಾಡಿಸಿ ಅರಣ್ಯ ಮತ್ತು ಕಂದಾಯ ಇಲಾಖೆಯ ಭೂಮಿಯನ್ನು ವರ್ಗೀಕರಣ ಮಾಡಿ, ಯಾರು ಎಷ್ಟು ಒತ್ತುವರಿ ಮಾಡಿದ್ದಾರೆ ಎಂಬ ನಿಖರ ಮಾಹಿತಿ ತಿಳಿದು ನಂತರ ಮಸೂದೆ ಜಾರಿಗೆ ತರುವಂತೆ ಹೇಳಿದೇವು.
ಆದರೆ ದೇವೇಗೌಡರು 2007ರ ಶಾಸನ ಸಭೆಯಲ್ಲಿ ಪಶ್ಚಿಮಘಟ್ಟದ ಶಾಸಕರನ್ನೆಲ್ಲ ಒಟ್ಟುಗೂಡಿಸಿ ಸಣ್ಣ ಬೆಳೆಗಾರರಿಗೆ ತೊಂದರೆ ಆಗದಂತೆ ಕಾಯ್ದೆ ಮಾಡುತ್ತೇನೆ. ಅದಕ್ಕೆ ಒಪ್ಪಿಗೆ ಸೂಚಿಸುವಂತೆ ಒತ್ತಡ ಹೇರಿದರು. ಆದರೆ ಪ್ರಸ್ತುತ ಜೀತ ಮುಕ್ತರಿಗೆ ಸರ್ಕಾರ ಭೂಮಿ ನೀಡಿದರೆ, ಸಕಲೇಶಪುರ ಶಾಸಕರ ಮೂಲಕ ಆ ಜಾಗವನ್ನು ಈಗಾಗಲೇ ಬೇರೆಯವರಿಗೆ ನೀಡಲಾಗಿದೆ ಅಂತ ಹೇಳುವ ಮೂಲಕ ಪ್ರತಿಭಟನೆ ಮಾಡಿಸುತ್ತಿದ್ದೀರಿ ಎಂದು ವಿಶ್ವನಾಥ್ ಆರೋಪಿಸಿದರು.
ಈ ಭಾಗದ ಜನತೆ ಕಾಡಾನೆ ಹಾವಳಿಯಿಂದ ಪ್ರಾಣ ಹಾನಿ ಮತ್ತು ಬೆಳೆ ಹಾನಿ ಅನುಭವಿಸುತ್ತಿದ್ದರೇ ಒಂದು ದಿನ ಇತ್ತ ಗಮನ ಹರಿಸಲಿಲ್ಲ. ಏಲಕ್ಕಿ ಬೆಳೆಗೆ ಕೊಕ್ಕೆ ಕಂದು ಮತ್ತು ವೈರಸ್‌ರೋಗ ಬಂದು 30 ವರ್ಷ ಕಳೆದು, ಇಡೀ ಪಶ್ಚಿಮಘಟ್ಟದ ಏಲಕ್ಕಿ ಬೆಳೆಗಾರರ ಬದುಕೇ ನಾಶವಾಗಿದೆ. ಕಾಡು ಪ್ರಾಣಿಗಳ ಹಾವಳಿ, ಅತಿಯಾದ ಮಳೆಯಿಂದ ಜರ್ಜರಿತರಾಗಿ ತಮ್ಮ ಮನೆ ಬಾಗಿಲಿಗೆ 25 ವರ್ಷಗಳಿಂದ ಸುತ್ತಾಡುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಮಲೆನಾಡು ಜನತೆ ಇವತ್ತು ಹಾಳಾಗಿರುವುದಕ್ಕೆ ದೇವೇಗೌಡ ಹಾಗೂ ಅವರ ಮಕ್ಕಳೇ ಕಾರಣ ಎಂದು ದೂರಿದರು. ಈ ಹಿನ್ನೆಲೆಯಲ್ಲಿ ದೇವೇಗೌಡರು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸದೆ ಬೇರೆಯವರಿಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.
ಅರಣ್ಯ ಸಚಿವ ರಮಾನಾಥ ರೈ ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಶಾಸಕ ಎಚ್.ಕೆ.ಕುಮಾರಸ್ವಾಮಿ ಅವರನ್ನು ಸಚಿವರು ತಮ್ಮ ಕಾರಿನಲ್ಲಿ ಕರೆದುಕೊಂಡು ಹೋಗದೆ ಅವಮಾನಗೊಳಿಸಿದ್ದಾರೆ ಅಂತ ದೇವೇಗೌಡರು ಹೇಳುತ್ತಾರೆ. ಆದೇ ಅವರ ಪುತ್ರ ಎಚ್.ಡಿ.ರೇವಣ್ಣ ನನ್ನನ್ನು ಸೇರಿದಂತೆ ಎಚ್.ಕೆ.ಜವರೇಗೌಡ, ಪುಟ್ಟಗೌಡರಿಗೆ ಮಾಡಿರುವಷ್ಟು ಅವಮಾನ ಬೇರೆ ಯಾರಿಗೂ ಮಾಡಿಲ್ಲ ಎಂದು ಹೇಳಿದರು.  
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನಾರಾಯಣಗೌಡ, ಕಾಂಗ್ರೆಸ್ ಮುಖಂಡ ಡಿ.ಮಲ್ಲೇಶ್, ಹೆಮ್ಮಿಗೆ ಮೋಹನ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement