ನಾಳೆಯಿಂದ ಶಾಂತಿಗಾಗಿ ಸಾಹಿತ್ಯ ಅಭಿಯಾನ, ಪುಸ್ತಕ ಮೇಳ
ಕನ್ನಡಪ್ರಭ ವಾರ್ತೆ ಹಾಸನ ನ. 21
ಶಾಂತಿ ಪ್ರಕಾಶನ ರಜತ ಮಹೋತ್ಸವ ಅಂಗವಾಗಿ ಶಾಂತಿಗಾಗಿ ಸಾಹಿತ್ಯ ವಿಚಾರ ಸಂಕಿರಣ, ಬೃಹತ್ ಪುಸ್ತಕ ಮೇಳ ಮತ್ತು ವಿಷನ್ ಎಕ್ಸೋಪೋ ಕಾರ್ಯಕ್ರಮ ನ.23ರಿಂದ 30ರ ವರೆಗೆ ನಡೆಯಲಿದೆ ಎಂದು ಶಾಂತಿಗಾಗಿ ಸಾಹಿತ್ಯ ಅಭಿಯಾನದ ಜಿಲ್ಲಾ ಸಂಚಾಲಕ ಸಯ್ಯದ್ಸಾರುಲ್ಲಾ ಷರೀಫ್ ತಿಳಿಸಿದರು.
ಶಾಂತಿ ಪ್ರಕಾಶನಕ್ಕೆ 25 ವರ್ಷ ತುಂಬಿರುವ ಈ ಸಂದರ್ಭದಲ್ಲಿ ರಾಜ್ಯಾದ್ಯಂತ ಅದರ ಸಾಹಿತ್ಯ ಕೃತಿಗಳ ಪರಿಚಯ ಹಾಗೂ ತನ್ಮೂಲಕ ಶಾಂತಿಯುತ ಸಮಾಜ ನಿರ್ಮಾಣದ ಉದ್ದೇಶದೊಂದಿಗೆ ಶಾಂತಿಗಾಗಿ ಸಾಹಿತ್ಯ ಎಂಬ ಅಭಿಯಾನ ನಡೆಯುತ್ತಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಬೃಹತ್ ಪುಸ್ತಕ ಮೇಳ ಮತ್ತು ವಸ್ತು ಪ್ರದರ್ಶನ ಗೌಸ್ಮೊಹಿಯುದ್ದೀನ್ ಶೋರೂಂ ಕಟ್ಟಡದಲ್ಲಿ ನಡೆಯಲಿದೆ. ಸಂಸ್ಥೆಯ ಗೌರವಾಧ್ಯಕ್ಷ ಆದಿಚುಂಚನಗಿರಿ ಶಾಖಾ ಮಠದ ಶಂಭುನಾಥ ಸ್ವಾಮಿಜಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಜವೇನಹಳ್ಳಿ ಮಠದ ಸಂಗಮೇಶ್ವರ ಸ್ವಾಮಿಜಿ, ಜಿಲ್ಲಾ ಎಸ್ಪಿ ರವಿ ಚನ್ನಣ್ಣನವರ್, ಮಾಜಿ ಸಚಿವೆ, ಸಾಹಿತಿ ಬಿ.ಟಿ.ಲಲಿತಾ ನಾಯಕ್, ಸಾಹಿತಿ ಹಾಗೂ ವಕೀಲ ಜ.ಹೋ.ನಾರಾಯಣಸ್ವಾಮಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮಂಗಳೂರಿನ ಶಾಂತಿ ಪ್ರಕಾಶನ ವ್ಯವಸ್ಥಾಪಕ ಜನಾಬ್ಮಹಮ್ಮದ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.