'ಸಂಸ್ಕೃತಿ ಉಳಿಸುವುದು ಕರ್ತವ್ಯ'
ಚನ್ನರಾಯಪಟ್ಟಣ: ತಾಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ಈಶ್ವರ ದೇವಾಲಯ ಪುನರ್ಪ್ರತಿಷ್ಠಾಪನಾ ಸಮಾರಂಭದಲ್ಲಿ ಆಶೀರ್ವಚನ ನೀಡಿ ಮಾತನಾಡಿದ ನಿರ್ಮಲಾನಂದನಾಥ ಸ್ವಾಮೀಜಿ ಅವರು ಜನತೆ ದೇವರನ್ನು ನಂಬಿ ಪುಣ್ಯದ ಕೆಲಸಗಳನ್ನು ಮಾಡುವತ್ತಾ ಮುಂದಾಗಿ ಸಮಾಜದಲ್ಲಿ ಶಾಂತಿ ನೆಮ್ಮದಿಯನ್ನು ಕಾಪಾಡಿಕೊಂಡು ಹೋಗಬೇಕು ಎಂದು ತಿಳಿಸಿದರು.
ಸಮಾಜದಲ್ಲಿ ಇಂದು ಅವಿಭಕ್ತ ಕುಟುಂಬಗಳು ವಿಭಜಿತವಾಗಿ ಕುಟುಂಬ ಸ್ವಾಸ್ಥ್ಯ ಕಳೆದುಕೊಳ್ಳುತ್ತಿವೆ. ರಾಮನನ್ನು ಕಾಡಿಗೆ ಕಳಿಸಿದರೂ ಅಣ್ಣತಮ್ಮಂದಿರು ಮಾತ್ರ ಎಂದಿಗೂ ತಮ್ಮ ಸಹೋದರ ಬಾಂಧವ್ಯವನ್ನು ಬಿಡಲಿಲ್ಲ. ಅದೇ ರೀತಿ ಅಣ್ಣ ತಮ್ಮಂದಿರು ಬೇರೆಯವರ ಮಾತುಗಳನ್ನು ಕೇಳದೆ ಹೊಂದಾಣಿಕೆಯಿಂದ ಸಾಗಿದರೆ ಕುಟುಂಬಗಳ ಒಡಕು ಮಾಯವಾಗುತ್ತವೆ ಎಂದು ಹೇಳಿದರು.
ವಿಶ್ವದಲ್ಲಿಯೇ ಉತ್ತಮ ಸಂಸ್ಕೃತಿಯಿರುವ ಈ ನಾಡಿನಲ್ಲಿ ಹುಟ್ಟಿರುವ ನಾವು ನಮ್ಮ ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗುವ ಉತ್ತಮ ಮಾರ್ಗಗಳನ್ನು ಅನುಸರಿಸುವುದು ತಮ್ಮ ಕರ್ತವ್ಯವಾಗಿದೆ ಎಂದು ತಿಳಿಸಿದರು.
ನುಗ್ಗೇಹಳ್ಳಿ ಪುರವರ್ಗ ಮಠದ ಮಹೇಶ್ವರ ಸ್ವಾಮೀಜಿ, ಆದಿಚುಂಚನಗಿರಿ ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಮಂಜೇಗೌಡ, ಜಿಲ್ಲಾ ಪಂಚಾಯಿತಿ ಸದಸ್ಯ ಶಿವಶಂಕರ್ಕುಂಠೆ, ತಾಪಂ ಸದಸ್ಯ ಬಸವರಾಜು, ತಾಪಂ ಮಾಜಿ ಉಪಾಧ್ಯಕ್ಷ ಮಂಜೇಗೌಡ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಮುದ್ದೇಗೌಡ ಇನ್ನೂ ಮೊದಲಾದವರು ಉಪಸ್ಥಿತರಿದ್ದರು.