ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸದಸ್ಯರಿಂದ ಸಿಇಓ ತರಾಟೆ

Srinivasa Murthy VN
Updated On : 22 Nov 2013, 12:42 pm

ಕ.ಪ್ರ.ವಾರ್ತೆ ಹೊಳೆನರಸೀಪುರ ನ.21
ಸರಿಯಾಗಿ ಕೆಲಸ ಮಾಡದೇ, ಸಭೆಗೂ ಬಾರದೇ ಇರೋ ಅಧಿಕಾರಿಗಳನ್ನೆಲ್ಲ ಸಮರ್ಥಿಸಿಕೊಂಡು, ಅವರ ಪರವಾಗಿ ನೀವೇ ಮಾತನಾಡೋದಾದ್ರೆ, ಸದಸ್ಯರು ನಾವ್ಯಾಕೆ ಸಭೆಗೆ ಬರಬೇಕು, ಸಭೆಗೆ ಬಾರದೇ ಇರೋ ಅಧಿಕಾರಿಗಳ ವಿರುದ್ಧ ಇಲ್ಲಿಯವರೆಗೆ ಯಾವ ಕ್ರಮ ಕೈಗೊಂಡಿದ್ದೀರಿ ...
ಹೀಗೆ ಬಹುತೇಕ ಸದಸ್ಯರು ತಾಪಂ ಕಾರ್ಯನಿರ್ವಾಹಣಾಧಿಕಾರಿ ವಿರುದ್ಧವೇ ತಿರುಗಿ ಬಿದ್ದ ಘಟನೆ ಪುಷ್ಪಾಗೌಡೇಗೌಡರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ತಾಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಕಂಡುಬಂತು.
ಸಭೆಯ ಆರಂಭದಲ್ಲಿಯೇ ಬಹುತೇಕ ಇಲಾಖೆಗಳ ಅಧಿಕಾರಿಗಳ ಗೈರುಹಾಜರಾತಿಯನ್ನು ಕಂಡು ಅಧ್ಯಕ್ಷೆ ಪುಷ್ಪಾಗೌಡೇಗೌಡ ಅಸಮಾಧಾನ ಹೊರಹಾಕಿದರು. ನಂತರ ಒಂದು ಹಂತದಲ್ಲಿ ಅಧ್ಯಕ್ಷೆ ಗ್ರಾಮ ಸಭೆಗಳನ್ನು ನಡೆಸ್ತೀವಿ ಅಂತಾರೆ, ಆದರೆ ಯಾವ ಗ್ರಾಮಸ್ಥರೂ ಸಭೆಯಲ್ಲಿ ಇರಲ್ಲ, ಇದು ಕಾರ್ಯದರ್ಶಿ ಹಾಗು ಪಿಡಿಓಗಳಿಗೂ ಬೇಕಿಲ್ಲ ಎನ್ನುವಂತಾಗಿದೆ ಎಂದು ತಾಲೂಕಿನ ಗ್ರಾಪಂ ಕಾರ್ಯದರ್ಶಿಗಳು ಹಾಗೂ ಪಿಡಿಓಗಳ ಕಾರ್ಯವೈಖರಿಯ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಅಧ್ಯಕ್ಷರ ಮಾತಿಗೆ ಸದಸ್ಯರಾದ ಸಿ.ಆರ್.ಮಂಜುನಾಥ್, ಕೆ.ಎಂ.ಚಂದ್ರಮತಿ, ಉಪಾಧ್ಯಕ್ಷ ನಂಜುಂಡಪ್ಪ ಮೊದಲಾದವರು ದನಿಗೂಡಿಸಿ, ಯಾವುದೇ ಗ್ರಾಪಂ ಕಾರ್ಯದರ್ಶಿ ಹಾಗೂ ಪಿಡಿಓಗಳೂ ಸರಿಯಾಗಿ ಗ್ರಾಪಂಗಳಲ್ಲಿ ಕೂರುತ್ತಿಲ್ಲ. ಅಲ್ಲದೇ ಯಾವುದೇ ಕಾರ್ಯಕ್ರಮದ ಅನುಷ್ಠಾನಕ್ಕೂ ತಮ್ಮ ವ್ಯಾಪ್ತಿಯ ತಾಪಂ ಸದಸ್ಯರನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಅಂತಹವರ ಬಗ್ಗೆ ವಕಾಲತ್ತು ವಹಿಸಿಕೊಂಡು ಭಾಷಣ ಮಾಡಬೇಡಿ ಎಂದು ಮರಳಿ ತಾಪಂ ಇಓ ತಮ್ಮಣ್ಣಗೌಡ ಅವರನ್ನು ಸದಸ್ಯರು  ತರಾಟೆಗೆ ತೆಗೆದುಕೊಂಡರು.
ನಾನಾ ಇಲಾಖೆ ಅಧಿಕಾರಿಗಳ ವಿರುದ್ಧ ಗರಂ: ಉಪಾಧ್ಯಕ್ಷ ನಂಜುಂಡಪ್ಪ ಅವರು ನಮ್ಮ ತಾಲೂಕಿನ ಕೆಲ ಅಧಿಕಾರಿಗಳು ಹೇಗಿದ್ದಾರೆ ಎಂದರೆ, ಒಂದು ಕೆಲಸ ಹೇಳಿ ನಾಲ್ಕು ಸಭೆಗಳಾದರೂ ಇನ್ನೂ ಕೆಲಸ ಆಗಿಲ್ಲ ಎಂದರೆ ಹೇಗೆ ಎಂದು ಅಸಮಾಧಾನ ಹೊರಹಾಕಿದರು. ಯಾವುದೇ ರಾಷ್ಟ್ರೀಯ ಹಬ್ಬಗಳ ಆಚರಣೆ ಇದ್ದರೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ, ತಹಸೀಲ್ದಾರ್ ಹಾಗೂ ಬಿಇಓ ಬಿಟ್ಟರೆ ಇನ್ನಾವುದೇ ಇಲಾಖೆಯ ಅಧಿಕಾರಿಗಳು ತಮಗೆ ಸಂಬಂಧವೇ ಇಲ್ಲ ಎನ್ನುವಂತೆ ಕಾರ್ಯಕ್ರಮದಲ್ಲಿ ಸುಳಿಯುವುದಿಲ್ಲ ಹೀಗಾದರೆ ಅವರಿಗೆ ಜವಾಬ್ದಾರಿ ಇಲ್ಲವೇ ಎಂದು ಕೆಲ ಸದಸ್ಯರು ನಾನಾ ಇಲಾಖೆಯ ಅಧಿಕಾರಿಗಳ ವಿರುದ್ಧ ಗರಂ ಆದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಯು.ಎಚ್.ಭಾನುಪ್ರಕಾಶ್ ಸಭೆಯಲ್ಲಿ ಮಾಹಿತಿ ನೀಡಿ, ಇಲಾಖೆಯ ಮಾನದಂಡದಡಿಯಲ್ಲಿ ಅರ್ಹ ಫಲಾನುಭವಿ ರೈತರಿಗೆ ಸರ್ಕಾರದ ಯೋಜನೆಗಳನ್ನು ನೀಡಲಾಗಿದೆ ಎಂದರು. ನ.8ರಂದು ಬೆಂಗಳೂರಿನಲ್ಲಿ ನಡೆದ ಕೃಷಿ ಮೇಳಕ್ಕೆ ತಾಲೂಕಿನ ಆಯ್ದ 150 ರೈತರನ್ನು ಕರೆದೊಯ್ಯಲಾಗಿತ್ತು ಎಂದು ತಿಳಿಸಿದ ಅವರು, ಸಸ್ಯ ಸಂರಕ್ಷಣಾ ಯೋಜನೆಯಡಿಯಲ್ಲಿ ಕೈಚಾಲಿತ ಸಸ್ಯ ಸಂರಕ್ಷಣಾ ಉಪಕರಣಗಳು ಹಾಗೂ ಔಷಧಿಗಳನ್ನು ನೀಡಲಾಗಿದೆ ಎಂದು ಹೇಳಿದರು. ಸೀಮೆಎಣ್ಣೆ ಪಂಪ್‌ಸೆಟ್ಟನ್ನು 5 ಫಲಾನುಭವಿಗಳಿಗೂ ಮತ್ತು ಡೀಸೆಲ್ ಪಂಪ್‌ಸೆಟ್‌ಗಳನ್ನು 7 ಫಲಾನುಭವಿಗಳಿಗೂ ನೀಡಲಾಗಿದೆ ಎಂದು ತಿಳಿಸಿದರು.
ಬೋಗಸ್ ಬಿಲ್‌ಗೂ ಸಹಾಯಧನ:   ತೋಟಗಾರಿಕೆ ಇಲಾಖೆಯ ವರದಿ ಸಲ್ಲಿಕೆ ಸಂದರ್ಭದಲ್ಲಿ ಕೆಲ ಸದಸ್ಯರು ಪ್ರಶ್ನಿಸಿದಾಗ ಇಲಾಖೆಯ ಸಿಬ್ಬಂದಿಯೇ ಯೋಜನೆಯೊಂದರಲ್ಲಿ ಸರ್ಕಾರ ನಿಗದಿಗೊಳಿಸಿರುವ ಸಂಸ್ಥೆಗೆ ರೈತರು 20 ಸಾವಿರ ರು. ಕಟ್ಟಿದರೆ ಪವರ್‌ಸ್ಪ್ಸಿಯರ್ ನೀಡಿ 28 ಸಾವಿರ ರು.ಗೆ ಬಿಲ್ ನೀಡುತ್ತಾರೆ. ನಂತರ ಇಲಾಖೆಯ ವತಿಯಿಂದ ಇದಕ್ಕೆ 14 ಸಾವಿರ ರು. ಸಹಾಯಧನ ನೀಡಲಾಗುತ್ತದೆ ಎಂದು ಹೇಳಿದಾಗ, ತಾಪಂ ಉಪಾಧ್ಯಕ್ಷರೂ ಸೇರಿದಂತೆ ಹಲವು ಸದಸ್ಯರು ಹಾಗಾದರೆ ಬೋಗಸ್ ಬಿಲ್‌ಗೂ ಸಹಾಯಧನ ನೀಡಿ ಕಮೀಷನ್ ಪಡೆಯುತ್ತಿದ್ದೀರಾ ಎಂದು ತೋಟಗಾರಿಕೆ ಇಲಾಖೆಯ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
ಹಿರಿಯ ಸದಸ್ಯ ಡಿ.ಕೃಷ್ಣಪ್ಪ ಮೀನುಗಾರಿಕೆ ಇಲಾಖೆಯ ಪ್ರಗತಿ ಸಲ್ಲಿಕೆ ಸಂದರ್ಭದಲ್ಲಿ ತಾಲೂಕಿನಲ್ಲಿ ಸರಿಯಾಗಿ ಮಳೆ ಇಲ್ಲದೇ ಕೆರೆ-ಕಟ್ಟೆಗಳು ಬತ್ತಿವೆ ನೀವು ಇಲಾಖೆಯಿಂದ ಕೊಡೋ ಮೀನುಗಳು ಮರೀನೇ ಮಾಡಲ್ಲ. ದಯಮಾಡಿ ರೈತರಿಗೆ ಮರಿ ಮಾಡೋ ಮೀನನ್ನೇ ಕೊಡಿ ಎಂದು ಮೀನುಗಾರಿಕೆ ಅಧಿಕಾರಿಗೆ ಕಿವಿಮಾತು ಹೇಳಿದರು.
ಶಿಕ್ಷಕರ ಕೊರತೆ:  ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಶಿವಮಾದಪ್ಪ ವರದಿ ನೀಡುವ ಸಂದರ್ಭದಲ್ಲಿ ಸದಸ್ಯೆ ಪಿ.ಸಿ.ಶಶಿಕಲಾ ಅವರು ಪಟ್ಟಣದ ಆದರ್ಶ ವಿದ್ಯಾಲಯದಲ್ಲಿ ಶಿಕ್ಷಕರ ಕೊರತೆಯಿಂದ ಪಾಠ ಪ್ರವಚನಗಳಿಗೆ ತೊಂದರೆಯಾಗಿರುವುದಲ್ಲದೇ, ಊಟ ಸರಿ ಇಲ್ಲ, ಮಕ್ಕಳು ಟಿ.ಸಿ ವಾಪಸ್ಸು ಪಡೆದು ತಮ್ಮ ಹಿಂದಿನ ಶಾಲೆಗಳಿಗೇ ತೆರಳುತ್ತಿರುವುದಾಗಿ ದೂರು ಬರುತ್ತಿದೆ ಎಂದು ಹೇಳಿದರು.
ತಾಲೂಕಿನ ಬಾಗೀವಾಳು ಹಾಗೂ ಉದ್ದೂರು ಗ್ರಾಮಗಳಲ್ಲಿನ ಸರ್ಕಾರಿ ಶಾಲಾ ಮೈದಾನವನ್ನೇ ಖಾಸಗಿಯವರು ಒತ್ತುವರಿ ಮಾಡಿಕೊಂಡು ಬೆಳೆ ಬೆಳೆಯುತ್ತಿದ್ದಾರೆ. ಆದರೂ ಮುಖ್ಯ ಶಿಕ್ಷಕರು ಏನೂ ಕ್ರಮ ಕೈಗೊಂಡಿಲ್ಲ. ಸದರಿ ಶಾಲೆ ಮುಖ್ಯ ಶಿಕ್ಷಕರ ವಿರುದ್ಧ ಹಾಗೂ ಅತಿಕ್ರಮಣ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸದಸ್ಯೆ ಭಾಗ್ಯ ಹಾಗೂ ಸಿ.ಆರ್.ಮಂಜುನಾಥ್ ಆಗ್ರಹಿಸಿದರು.
ಸಭೆ ಮಧ್ಯದಲ್ಲಿ ಜಲಾನಯನ ಇಲಾಖೆಯ ಪ್ರಗತಿ ವರದಿಯನ್ನು ಹಂಚಲು ಬಂದಾಗ ಸದಸ್ಯರು ಈ ಇಲಾಖೆ ಇದೆ ಎಂಬುದೇ ನಮಗೆ ಮರೆತುಹೋಗಿದೆ. ಆ ಇಲಾಖೆಯ ಅಧಿಕಾರಿ ಕೂಡ ಸಭೆಗೆ ಬರಲ್ಲ, ಅವರ ಇಲಾಖೆ ವರದಿಯನ್ನೇಕೆ ನಡುವೆ ನೀಡುತ್ತೀರಿ ಎಂದು ತಾಪಂ ಇಓರನ್ನು ಸದಸ್ಯರು  ತರಾಟೆಗೆ ತೆಗೆದುಕೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement