ಸ್ವಚ್ಛತೆ ಕಾಣದ ರಾಮನಾಥಪುರ ಪ್ರಾಥಮಿಕ ಶಾಲೆ
ಕನ್ನಡಪ್ರಭ ವಾರ್ತೆ ರಾಮನಾಥಪುರ ನ. 21
ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಚ್ಛತೆ ಸೇರಿ ನಾನಾ ಸಮಸ್ಯೆಗಳ ಆಗರವಾಗಿದೆ.
2011-12ನೇ ಸಾಲಿನ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಶಾಲಾ ಮೈದಾನದ ಸುತ್ತ ತಡೆಗೋಡೆ ಮತ್ತು ಗೇಟ್ ನಿರ್ಮಾಣ ಕಾಮಗಾರಿ 3.95 ಲಕ್ಷ ರು. ಅಂದಾಜು ವೆಚ್ಚದ್ದಾಗಿದೆ. ಈ ಕಾಮಗಾರಿಯನ್ನು ನಿರ್ವಹಿಸಿರುವ ಗುತ್ತಿಗೆದಾರ ತಡೆಗೋಡೆ ಒಳಭಾಗ ಸಿಮೆಂಟ್ ಪ್ಲಾಸ್ಟರಿಂಗ್ ಮಾಡಿಲ್ಲ ಮತ್ತು ಗೇಟ್ ಕೂಡಾ ಅಳವಡಿಸದೆ ಹಣ ಉಳಿಸುವ ಉದ್ದೇಶದಿಂದಲೂ ಮನಸೋ ಇಚ್ಛೆ ಕೆಲಸ ಮಾಡಿ ಬಿಲ್ ಪಡೆದಿದ್ದಾರೆ.
ಇಲ್ಲಿನ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಯನ್ನು ಈ ವಿಚಾರವಾಗಿ ಕೇಳಿದರೆ ಸಂಪೂರ್ಣ ಕಾಮಗಾರಿ ಪೂರೈಸುವವರೆಗೂ ಬಿಲ್ ಪಾವತಿಸದೆ ಇದ್ದು, ಹಿಂದಿನ ಅಧ್ಯಕ್ಷರಿಂದ ಒತ್ತಡ ತಂದು ಬಿಲ್ ಪಡೆಯಲಾಗಿದೆ ಎಂದು ತಿಳಿಸುತ್ತಾರೆ.
ಇದು ಸಾಲದು ಎಂಬಂತೆ ಈ ಶಾಲಾ ತಡೆಗೋಡೆಗೆ ಹೊಂದಿಕೊಂಡಂತೆ ಮೀನು ಕಬಾಬು, ಕ್ಷೌರದ ಹಾಗೂ ತರಕಾರಿ ಇನ್ನಿತರೆ ಅಂಗಡಿಗಳಿದ್ದು, ಇವುಗಳಿಂದ ಸಾಕಷ್ಟು ತೊಂದರೆಯಾಗುತ್ತಿದೆ. ಇವುಗಳನ್ನು ತೆರವುಗೊಳಿಸಿ ಎಂದು ಸಾಕಷ್ಟು ಬಾರಿ ಮನವಿ ಕೂಡಾ ಸಲ್ಲಿಸಲಾಗಿದೆ.
ಕ್ಷೌರದ ಅಂಗಡಿ ಬಿಸಿ ಊಟ ತಯಾರಿಸುವ ಕೊಠಡಿಯ ಪಕ್ಕದಲ್ಲಿದ್ದು, ಈ ಅಂಗಡಿಯಿಂದ ವಿಸರ್ಜಿಸಲ್ಪಡುವ ಕೂದಲುಗಳು ಈ ಕೋಣೆಗೆ ಸಲೀಸಾಗಿ ಗಾಳಿಗೆ ಹೋಗುತ್ತಿದ್ದು, ಇದರಿಂದ ಸಾಕಷ್ಟು ತೊಂದರೆಯಾಗುತ್ತಿದೆ ಮತ್ತು ಮೀನು ಕಬಾಬು ಅಂಗಡಿಯಿಂದ ವಿಪರೀತ ದುರ್ನಾತ ಬರುವುದಲ್ಲದೆ ಸಂಜೆ ವೇಳೆ ಮದ್ಯ ಕಬಾಬ್‌ನೊಂದಿಗೆ ಬರುವ ಪೋಕರಿಗಳು ಶಾಲಾ ಜಗುಲಿಯ ಮೇಲೆ ತಿಂದು ಖಾಲಿ ಮದ್ಯ ಬಾಟಲಿಯನ್ನು ಒಡೆದು ಹಾಕಿ ಜಗುಲಿಯ ಮೇಲೆ ಮಲಮೂತ್ರ ವಿಸರ್ಜನೆ ಮಾಡಿ ಹೋಗುತ್ತಿರುವುದನ್ನು ದಿನನಿತ್ಯ ಸ್ವಚ್ಛ ಮಾಡುತ್ತಿರುವ ಶಾಲಾ ಸಿಬ್ಬಂದಿಯವರಿಗೆ ಹೇಸಿಗೆ ಬಂದಂತಾಗುತ್ತದೆ.
ಮಾಡದೆ ಬೇರೆ ವಿಧಿ ಇಲ್ಲ ಎಂದು ಅವರು ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ. ರಾತ್ರಿ ವೇಳೆ ಸದಾ ಪುಂಡು ಪೋಕರಿಗಳ ದಂಡೆ ಈ ಗೇಟಿಲ್ಲದ ಶಾಲಾ ಆವರಣದಲ್ಲಿ ಬಿಡಾರ ಹೂಡಿ ತಮ್ಮ ದುಶ್ಚಟಗಳ ತಾಣವನ್ನಾಗಿಸಿ ಕೊಂಡಿರುವುದು ಈ ಶಾಲೆಯ ದುರಂತ. ಶಾಲೆ ಸ್ವಚ್ಛತೆಗೆ ಸಹಕರಿಸಿ ಮೂಲ ಸೌಕರ್ಯಗಳನ್ನು ಒದಗಿಸಿ ಕೊಡುವಂತೆ ಹಾಗೂ ಗೇಟ್ ವ್ಯವಸ್ಥೆ ಮಾಡಿ, ತಡೆಗೋಡೆಗೆ ಹೊಂದಿಕೊಂಡಂತಿರುವ ಅಂಗಡಿಗಳನ್ನು ತೆರವುಗೊಳಿಸುವಂತೆ ಅನೇಕ ಬಾರಿ ಮನವಿ ಪತ್ರ ಸಲ್ಲಿಸಿ ಇಲ್ಲಿನ ಗ್ರಾಮ ಪಂಚಾಯ್ತಿಗೆ ಅಲೆದು ಅಲೆದು ಸಾಕಾಗಿದೆ ಎಂದು ಗ್ರಾಮಸ್ಥರು ತಿಳಿಸುತ್ತಾರೆ.
ನಿರ್ಲಕ್ಷ ವಹಿಸಿರುವ ಪಂಚಾಯ್ತಿಯವರನ್ನು ತರಾಟೆಗೆ ತೆಗೆದುಕೊಂಡು ಇನ್ನುಮುಂದಾದರೂ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೂಡಲೆ ಮುಂದಾಗಿ ಶಾಲೆಯ ಸಮಸ್ಯೆಗೆ ಸ್ಪಂದಿಸಿ ಕ್ರಮ ಕೈಗೊಳ್ಳುವರೆ?