ಅಕ್ರಮ ಚಟುವಟಿಕೆಗಳು ಕಣ್ಣಿಗೆ ಬಿದ್ದರೆ ಮಾಹಿತಿ ಬರೆದು ಈ ಪೆಟ್ಟಿಗೆಗೆ ಹಾಕಿ...
ಹಾಸನ: ನಿಮ್ ಕಣ್ಣಿಗೆ ಮಟ್ಕಾ, ಜೂಜು, ಮಹಿಳೆಯರ ಮೇಲಿನ ದೌರ್ಜನ್ಯ ಮತ್ತಿತರ ಅಕ್ರಮ ಚಟುವಟಿಕೆಗಳು ಕಂಡು ಬಂದಲ್ಲಿ ಈ ಕೆಂಪು ಪೆಟ್ಟಿಗೆಗೆ ಲಿಖಿತವಾಗಿ ಬರೆದು ಹಾಕಿದರೇ ಸಾಕು.. ಇನ್ಮುಂದೆ ಕ್ರಮ ತೆಗೆದುಕೊಳ್ಳಲಾಗುತ್ತದೆ.
ನ. 21 ರಿಂದ ಹಾಸನ ನಗರದ ರೇಲ್ವೆ ನಿಲ್ದಾಣ, ಬಸ್ ನಿಲ್ದಾಣ ಸೇರಿದಂತೆ 8 ಕಡೆ ಇಂಥ ಪೆಟ್ಟಿಗೆಗಳನ್ನು ಇಡಲಾಗುವುದು. ನಂತರ ತಾಲೂಕು ಕೇಂದ್ರಗಳಲ್ಲಿ ದೂರು ಪೆಟ್ಟಿಗೆಗಳನ್ನು ಇಡಲಾಗುವುದು. ಸಾರ್ವಜನಿಕರು ಅಕ್ರಮ ಚಟುವಟಿಕೆಗಳ ಬಗ್ಗೆ ಹೆಸರು ತಿಳಿಸದೇ ರಹಸ್ಯವಾಗಿ ತಿಳಿಸಿದರೂ ಕ್ರಮ ಜರುಗಿಸಲಾಗುತ್ತದೆ. ಎರಡು ದಿನಗಳಿಗೊಮ್ಮೆ ಸಬ್ಇನ್ಸ್ಪೆಕ್ಟರ್ಗಳು ದೂರುಗಳನ್ನು ಸಂಗ್ರಹಿಸಿಕೊಂಡು ಬಂದು ತಮ್ಮ ಗಮನಕ್ಕೆ ತರುತ್ತಾರೆ. ನಂತರ ಪರಿಶೀಲಿಸಿ ಕ್ರಮ ಜರುಗಿಸಲಾಗುವುದು ಎಂದು ಎಸ್ಪಿ ಚನ್ನಣ್ಣನವರ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ದೂರನ್ನು ನೀಡಿದವರನ್ನು ಗುರುತಿಸಿಕೊಂಡು ಅಥವಾ ಯಾರ ಮೇಲೆ ದೂರು ಬಂದಿರುತ್ತದೆಯೋ ಅವರ ಬಳಿ ಪೊಲೀಸರು ಹೋಗಿ ವಸೂಲಿ ಮಾಡುವುದಕ್ಕೆ ಅವಕಾಶ ನೀಡುವುದಿಲ್ಲ. ಕೆಲವರು ಠಾಣೆಗಳಿಗೆ ಬಂದು ದೂರು ನೀಡಲು ಹಿಂಜರಿಯುವುದರಿಂದ ದೂರು ಪೆಟ್ಟಿಗೆಗಳನ್ನು ಪ್ರಮುಖ ಸ್ಥಳಗಳಲ್ಲಿ ಇಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಯಾವ್ಯಾವ ದೂರು ನೀಡಬಹುದು:
-ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುವ ಎಲ್ಲಾ ರೀತಿಯ ದೌರ್ಜನ್ಯ ಮತ್ತು ಕಿರುಕುಳ.
-ರಸ್ತೆ, ಪಾರ್ಕ್ಗಳಲ್ಲಿ ಯುವತಿಯರು, ಮಹಿಳೆಯರನ್ನು ಚುಡಾಯಿಸುವುದು ಮತ್ತು ಲೈಂಗಿಕ ಕಿರುಕುಳ ನೀಡುವುದು.
-ವೇಶ್ಯಾವಾಟಿಕೆ, ಮಟ್ಕಾ, ಇಸ್ಟೀಟ್ ಇತರೇ ಜೂಜಾಟ.
-ಸಾರ್ವಜನಿಕ ಸ್ಥಳಗಳಲ್ಲಿ ಅಪಾಯಕರ ರೀತಿಯಲ್ಲಿ ವಾಹನ ಚಾಲನೆ
-ಕಳ್ಳತನ, ದರೋಡೆ, ಡಕಾಯಿತಿ, ಕೊಲೆ ಮತ್ತಿತರ ಪ್ರಕರಣಗಳಲ್ಲಿ ಭಾಗಿಯಾಗಿರುವ ವ್ಯಕ್ತಿಗಳ ಮಾಹಿತಿ ಸಿಕ್ಕರೇ.
-ಸಂಚಾರ ಮತ್ತು ಸುರಕ್ಷತೆ, ಸುವ್ಯವಸ್ಥೆಯ ಬಗ್ಗೆ ಸಲಹೆಗಳು.
-ಹೊರಗಿನಿಂದ ಅಪರಿಚಿತರು ಬಂದು ಬಾಡಿಕೆ ಮನೆಯಲ್ಲಿ ವಾಸವಿರುವವರ ಬಗ್ಗೆ ಅನುಮಾನ.
-ಶಾಲಾ, ಕಾಲೇಜು, ಹುಡುಗಿಯರ ಹಾಸ್ಟೆಲ್ ಹಾಗೂ ಮನೆ ಪಾಠಗಳ ಬಳಿ ಹುಡುಗಿಯರನ್ನು ಚುಡಾಯಿಸುವುದು.
-ಲಾಡ್ಜ್, ಬಸ್, ರೇಲ್ವೆ ನಿಲ್ದಾಣಗಳಲ್ಲಿ ಸರಗಳ್ಳತನ, ಜೇಬುಗಳ್ಳತನ, ಅಕ್ರಮ ಚಟುವಟಿಕೆ.
-ಪೊಲೀಸ್ ಇಲಾಖೆಗೆ ಸಂಬಂಧಪಟ್ಟ ಸಾರ್ವಜನಿಕ ಕುಂದುಕೊರತೆಗಳು.
-ಸಾರ್ವಜನಿಕ ಸ್ಥಳಗಳಲ್ಲಿ ಭಯ ಹುಟ್ಟಿಸುವ ರೀತಿಯಲ್ಲಿ ನಡೆದುಕೊಳ್ಳುವ ಜನರ ಬಗ್ಗೆ.