ಎಂಸಿಎಫ್ ಸುತ್ತಮುತ್ತ ಚಿರತೆ ಹಾವಳಿ: ಭೀತಿಯಲ್ಲಿ ಜನತೆ
ಹಾಸನ: ತಾಲೂಕು ಸಾಲಗಾಮೆ ಹೋಬಳಿ ಎಂಸಿಎಫ್ ಸುತ್ತಮುತ್ತಲ ಹಳ್ಳಿಗಳಲ್ಲಿ ಚಿರತೆಗಳ ಹಾವಳಿ ಹೆಚ್ಚಿದೆ. ಈ ಪ್ರದೇಶದಲ್ಲಿ ಮೂರು ಚಿರತೆಗಳಿದ್ದವು. ಇತ್ತೀಚೆಗೆ ಎಂಸಿಎಫ್ ಸುತ್ತಲಿನ ತಡೆಗೋಡೆಗೆ ಹೊಂದಿಕೊಂಡಂತಿರುವ ಪೊದೆಯಲ್ಲಿ ಅಡಗಿದ್ದ ಚಿರತೆಯನ್ನು ಗೋವಿಂದಪುರ ಗ್ರಾಮಸ್ಥರ ಸಹಾಯದಿಂದ ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದಾರೆ. ಇನ್ನೂ ಎರಡು ಚಿರತೆಗಳು ಈ ಭಾಗದಲ್ಲಿ ಓಡಾಡಿಕೊಂಡಿವೆ. ಗೋವಿಂದಪುರ ಸಮೀಪದಲ್ಲಿ ಎತ್ತರಕ್ಕೆ ಬೆಳೆದು ನಿಂತಿರುವ ಜೋಳದ ಹೊಲಗಳಲ್ಲಿ ಎರಡು ಚಿರತೆಗಳು ಬುಧವಾರ ಕಾಣಿಸಿಕೊಂಡಿವೆ. ರೈತರು ಹೊಲ, ಗದ್ದೆಗಳಿಗೆ ಜೀವ ಕೈಯಲ್ಲಿ ಹಿಡಿದು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಈ ಪ್ರದೇಶದಲ್ಲಿ ಬಹುತೇಕ ರೈತರು ತಮ್ಮ ಹೊಲಗಳಲ್ಲಿಯೇ ಮನೆಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿರುವುದರಿಂದ ರಾತ್ರಿ ವೇಳೆ ಹೊರಬರಲು ಭಯಪಡುವಂತಾಗಿದೆ. ಯಾವುದೇ ಪ್ರಾಣ ಹಾನಿಯಾಗುವ ಮುನ್ನ ಶಾಸಕ ಪ್ರಕಾಶ್ , ಅಧಿಕಾರಿಗಳು ಇತ್ತ ಗಮನ ಹರಿಸಿ ತಕ್ಷಣ ಈ ಎರಡು ಚಿರತೆಗಳನ್ನು ಸೆರೆ ಹಿಡಿಯಲು ಕ್ರಮ ಕೈಗೊಳ್ಳಬೇಕೆಂದು ಗೋವಿಂದಪುರ, ಆಲದಹಳ್ಳಿ, ತವರದೇವರಕೊಪ್ಪಲು ಮತ್ತು ಕಂಚಮಾರನಹಳ್ಳಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.