ಖಾತಾ ಆಂದೋಲನ
ಚನ್ನರಾಯಪಟ್ಟಣ: ತಾಲೂಕಿನಲ್ಲಿ 2.3 ಲಕ್ಷಕ್ಕೂ ಹೆಚ್ಚು ಪಹಣಿಗಳಿದ್ದು, ಅವುಗಳಲ್ಲಿ 22217 ಪಹಣಿಗಳು ದೋಷಪೂರಿತವಾಗಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಅವುಗಳನ್ನು ಸರಿಪಡಿಸುವ ಸಲುವಾಗಿ ಪಹಣಿ ತಿದ್ದುಪಡಿ ಹಾಗೂ ಖಾತಾ ಆಂದೋಲನ ಪ್ರಾರಂಭಿಸಲಾಗಿದೆ ಎಂದು ತಹಸೀಲ್ದಾರ್ ಡಾ.ನಾಗರಾಜು ಹೇಳಿದರು. ತಾಲೂಕಿನ ಪ್ರತಿ ಪಂಚಾಯಿತಿಗಳಲ್ಲಿಯೂ ಖಾತಾ ಆಂದೋಲನವನ್ನು ಹಂತ ಹಂತವಾಗಿ ಪ್ರಾರಂಭಿಸಲಿದ್ದು, ರೈತರು ಈ ಸಂದರ್ಭದಲ್ಲಿ ತಮ್ಮ ಜಮೀನಿನ ಪಹಣಿ ತಿದ್ದುಪಡಿ, ಪೌತಿ ಖಾತೆ, ವಿಭಾಗದ ಪತ್ರದ ಖಾತಾ ಬದಲಾವಣೆ ಹಾಗೂ ಹಳೆಯ ಕ್ರಚ ಪತ್ರದ ಮುಖೇನ ಖಾತೆ ಮಾಡಿಸಿಕೊಳ್ಳುವುದು ಸೇರಿದಂತೆ ಪಹಣಿ ತಿದ್ದುಪಡಿಗೆ ನಿಗದಿ ಮಾಡಿದ ದಿನಾಂಕದಂದು ಆಗಮಿಸಿ ಅರ್ಜಿ ಸಲ್ಲಿಸಬೇಕಾಗಿ ಎಂದು ತಿಳಿಸಿದರು. ನ.27ರಂದು ಶ್ರವಣಬೆಳಗೊಳದ ಕರ್ನಾಟಕ ಭವನದಲ್ಲಿ ಬೆಕ್ಕ, ಹಳೆಬೆಳಗೊಳ ಹಾಗೂ ಶ್ರವಣಬೆಳಗೊಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನತೆ ತಮ್ಮ ದೂರುಗಳನ್ನು ಸಲ್ಲಿಸಬಹುದಾಗಿದೆ. ನ.28ರಂದು ದಮ್ಮನಿಂಗಲ, ಕಾಂತರಾಜಪುರ, ಜುಟ್ಟನಹಳ್ಳಿ, ಸುಂಡಹಳ್ಳಿ ಗ್ರಾ.ಪಂ.ವ್ಯಾಪ್ತಿಯ ಜನತೆ ತಮ್ಮ ದೂರು ಸಲ್ಲಿಸಬಹುದಾಗಿದೆ ಎಂದರು.