ದೇವಾಲಯ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ
ಕ.ಪ್ರ.ವಾರ್ತೆ ಹಾರನಹಳ್ಳಿ ನ. 22
ಹಾರನಹಳ್ಳಿಯ ಕಲ್ಲೇಶ್ವರ, ಕೋಡಮ್ಮ, ಕಾಳಿಕಾಂಬ ದೇವಾಲಯಗಳ ಜೀರ್ಣೋದ್ಧಾರಕ್ಕೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದ್ದು, ಈ ಸಂಬಂಧ ನಡೆಯುತ್ತಿರುವ ಕಾಮಗಾರಿಗಳನ್ನು ತಹಶೀಲ್ದಾರ್ ಕೇಶವಮೂರ್ತಿ ಪರಿಶೀಲಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ತಾಲೂಕಿನ ಅನೇಕ ದೇವಾಲಯಗಳ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ಮಂಜೂರಾಗಿದ್ದು ಜರೂರಾಗಿ ಕಾಮಗಾರಿಗಳನ್ನು ನಿರ್ವಹಿಸಬೇಕಾಗಿದೆ. ಇಲ್ಲದೇ ಹೋದರೆ ಸರ್ಕಾರಕ್ಕೆ ಅನುದಾನ ವಾಪಸ್ ಹೋಗುವ ಸಂಭವವಿರುತ್ತದೆ. ಗ್ರಾಮಸ್ಥರು ಆಸಕ್ತಿ ವಹಿಸಿ ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸಬೇಕಾಗುತ್ತದೆ ಎಂದ ಅವರು, ತಾಲೂಕು ಆಡಳಿತ ಕಾಮಗಾರಿ ಪೂರ್ಣಗೊಳಿಸಿದ ನಂತರ ದೇವಾಲಯಗಳಿಗೆ ಮಂಜೂರಾದ ಅನುದಾನವನ್ನು ನೀಡಲಾಗುತ್ತಿದೆ ಎಂದರು.
ತಾಲೂಕಿನ ಮುಜರಾಯಿ ಇಲಾಖೆಯ 340 ದೇವಾಲಯಗಳ ಅರ್ಚಕರುಗಳಿಗೆ 2012 ಮತ್ತು 2013 ನೇ ಸಾಲಿನ ನವಂಬರ್‌ವರೆಗೆ ತಸ್ತೀಕ್ ಬಾಬ್ತು 54.44 ಲಕ್ಷ ರು.ಗಳನ್ನು ದೇವಾಲಯದ ಉಳಿತಾಯ ಖಾತೆಗೆ ಈಗಾಗಲೇ ಜಮಾ ಮಾಡಲಾಗಿದೆ. ಮುಂದಿನ ವಾರದಲ್ಲಿ ಅರ್ಚಕರ ಉಳಿತಾಯ ಖಾತೆಗೆ ಕೋರ್ ಬ್ಯಾಂಕಿಂಗ್ ಮುಖಾಂತರ ತಸ್ತೀಕ್ ಹಣ ಜಮಾ ಮಾಡುವುದಾಗಿ ತಿಳಿಸಿದರು.
ಹಾರನಹಳ್ಳಿ ಚನ್ನಕೇಶವ ಮತ್ತು ಸೋಮೇಶ್ವರ ದೇವಾಲಯಕ್ಕೆ ಬರುವ ಪ್ರವಾಸಿಗರ ಸೌಲಭ್ಯಕ್ಕೆ ರಸ್ತೆ ಕಾಮಗಾರಿ ನಡೆದಿದ್ದು, ಇನ್ನೂ ಆವಶ್ಯಕ ಕಾಮಗಾರಿಗಳ ಬಗ್ಗೆ ಸಹಾಯಕ ನಿರ್ದೇಶಕರು ಪ್ರವಾಸೋದ್ಯಮ ಇಲಾಖೆ ಹಾಸನ ಹಾಗೂ ಸೋಮೇಶ್ವರ ದೇವಾಲಯ ಅಭಿವೃದ್ಧಿಗೆ ಪ್ರಾಚ್ಯವಸ್ತು ಇಲಾಖೆಗೆ ಸಂರಕ್ಷಣೆಗೆ ಪತ್ರ ಬರೆಯಲಾಗುವುದು. ತಾಲೂಕಿನಲ್ಲಿ ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬಂದಿದ್ದು ಈ ಬಗೆಗಿನ ವರದಿ ಸಿದ್ಧಪಡಿಸಲಾಗುತ್ತಿದೆ ಎಂದರು. ಕಸಬಾ ಆರ್.ಐ.ನಂಜುಂಡಪ್ಪ, ಯದುಕುಮಾರ್, ಲೋಕೇಶಯ್ಯ ಇದ್ದರು.