ದೇವೇಗೌಡರ ಸ್ಪರ್ಧೆ ಜನತೆಗೆ ಬಿಟ್ಟ ವಿಚಾರ
ಹಾಸನ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ನಿಲ್ಲಬೇಕೋ, ಬೇಡವೋ ಎಂಬುದು ಮಹಾ ಜನತೆಗೆ ಬಿಟ್ಟ ವಿಚಾರ. ಈ ವಿಚಾರದಲ್ಲಿ ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್ ಮೂಗು ತೂರಿಸುವುದು ಸರಿಯಲ್ಲ ಎಂದು ಜೆಡಿಎಸ್ ಶಾಸಕ ಎಚ್.ಎಸ್. ಪ್ರಕಾಶ್ ಹೇಳಿದ್ದಾರೆ. ದೇವೇಗೌಡರು ಚುನಾವಣೆಯಿಂದ ಹಿಂದೆ ಸರಿಯಬೇಕು ಎಂದು ಅಧಿಕಾರಕ್ಕಾಗಿ ಪಕ್ಷದಿಂದ ಪಕ್ಷಕ್ಕೆ ಹಾರುವ ವಿಶ್ವನಾಥ್ ಎಂದು ಹೇಳುವುದು ಸರಿಯಲ್ಲ. ವಿಶ್ವನಾಥ್ ಕೂಡಾ ಮತದಾರರು. ರಾಜಕಾರಣದಲ್ಲಿ ಆರೋಪ, ಪ್ರತ್ಯಾರೋಪ ಸಾಮಾನ್ಯ. ಆದರೆ ವಿಶ್ವನಾಥ್ ಅವರು ಕೀಳುಮಟ್ಟದ ಹೇಳಿಕೆ ನೀಡುವ ಮೂಲಕ ತಮ್ಮ ವ್ಯಕ್ತಿತ್ವವನ್ನು ಹರಾಜು ಹಾಕಿಕೊಂಡಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
ದೌರ್ಜನ್ಯ ತಡೆಗಟ್ಟಲು ನೈತಿಕ ಧೈರ್ಯ ತುಂಬಿ
ಹೊಳೆನರಸೀಪುರ: ಸಮಾಜದಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯಗಳು ಅಧಿಕವಾಗುತ್ತಿದ್ದು, ಇದನ್ನು ತಡೆಗಟ್ಟುವಲ್ಲಿ ಮಹಿಳೆಯರಿಗೆ ನೈತಿಕ ಧೈರ್ಯವನ್ನು ತುಂಬುವಂತ ಕೆಲಸ ಅಗಬೇಕಿದೆ ಎಂದು ನಗರ ಪೋಲೀಸ್ ಠಾಣೆ ಅಪರಾಧ ವಿಭಾಗ ಮಹಿಳಾ ಪಿಎಸ್ಐ ಸವಿತ ತಿಳಿಸಿದರು. ಅವರು ಪಟ್ಟಣದ ಸರ್ಕಾರಿ ಕೈಗಾರಿಕಾ ಕಾಲೇಜಿನಲ್ಲಿ ಎಬಿವಿಪಿ ಆಯೋಜಿಸಿದ್ದ ಝಾನ್ಸೀರಾಣಿ ಲಕ್ಷ್ಮಿಭಾಯಿ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸಮಾಜದಲ್ಲಿನ ಎಲ್ಲ ಮಹಿಳೆಯರಿಗೆ ಝಾನ್ಸಿರಾಣಿ ಲಕ್ಷ್ಮಿ ಮಾದರಿ ಆಗಬೇಕೆಂದು ತಿಳಿಸಿದ ಅವರು ಲಕ್ಷ್ಮಿಭಾಯಿ ದೇಶ ರಕ್ಷಣೆಯಲ್ಲಿ ಮೊದಲಿಗರಾಗಿದ್ದರು ಎಂದು ನುಡಿದರು. ಅಧ್ಯಕ್ಷತೆಯನ್ನು ಪ್ರಾಂಶುಪಾಲೆ ಮಂಜುಳ ವಹಿಸಿದ್ದರು. ಎಬಿವಿಪಿ ಜಿಲ್ಲಾ ಸಂಚಾಲಕ ಅಮಿತ್, ಯೋಗಾನಂದ, ತಾಲೂಕಿನ ಪ್ರಮುಖ ಅಭಿಷೇಕ್ ನಗರ ಕಾರ್ಯದರ್ಶಿ ಭರತ್ ಹಾಜರಿದ್ದರು.
ಚಿತ್ರ ಬರೆಯುವ ಸ್ಪರ್ಧೆ
ಹೊಳೆನರಸೀಪುರ: ಪಟ್ಟಣದ ಜ್ಞಾನ ವಿಜ್ಞಾನ ಸಮಿತಿ ಕನ್ನಡ ರಾಜ್ಯೋತ್ಸವ ಹಾಗು ಮಕ್ಕಳ ದಿನಾಚರಣೆ ಅಂಗವಾಗಿ ಪಟ್ಟಣ ವ್ಯಾಪ್ತಿಯ ಕಿರಿಯ, ಹಿರಿಯ ಮತ್ತು ಪ್ರೌಢಶಾಲಾ ಮಕ್ಕಳಿಗೆ ಸ್ಥಳದಲ್ಲೇ ಚಿತ್ರ ಬರೆಯುವ ಸ್ಪರ್ಧೆಯನ್ನು ಆಯೋಜಿಸಿದೆ ಎಂದು ಸಮಿತಿ ಅಧ್ಯಕ್ಷ ಆರ್.ಉಮೇಶ್ ತಿಳಿಸಿದ್ದಾರೆ. ಸ್ಪರ್ಧೆಯನ್ನು ನ. 23 ರಂದು ಶನಿವಾರ ಬೆಳಗ್ಗೆ ಪಟ್ಟಣದ ಬಯಲುರಂಗ ಮಂದಿರದ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದೆ.