ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಫಲಿಸದ ಪುಂಡಾನೆ ಸೆರೆ ಕಾರ್ಯಾಚರಣೆ

Srinivasa Murthy VN
Updated On : 23 Nov 2013, 1:31 am

ಕ.ಪ್ರ.ವಾರ್ತೆ ಆಲೂರು ನ. 22
ರೈತರ ಪ್ರಾಣಹಾನಿ ಹಾಗೂ ಬೆಳೆನಾಶ ಉಂಟು ಮಾಡುತ್ತಿರುವ ಪುಂಡಾನೆಗಳ ಸೆರೆ ಹಿಡಿಯುವ ಕಾರ್ಯಾಚರಣೆ ಶುಕ್ರವಾರವೂ ಫಲಿಸಲಿಲ್ಲ. ತಾಲೂಕಿನ ಕೆಂಚಮ್ಮನಹೊಳಕೋಟೆ ಹೋಬಳಿಯ ಕಾಗನೂರು ಗ್ರಾಮದ ಅರಣ್ಯ ಪ್ರದೇಶದಲ್ಲಿ ಆನೆ ಹಿಡಿಯುವ ಕಾರ್ಯಾಚರಣೆ ಗುರುವಾರ ಕತ್ತಲಾದ ಕಾರಣ ಶುಕ್ರವಾರ ಮುಂದುವರೆದೂ ಕಾಗನೂರು ಅರಣ್ಯ ಪ್ರದೇಶದಿಂದ 7 ಕಿಮೀ ದೂರದಲ್ಲಿ ಹೇಮಾವತಿ ಹಿನ್ನೀರಿನ ಇನ್ನೊಂದು ಬದಿಯಲ್ಲಿರುವ ಕೊಡಗು ಜಿಲ್ಲೆಗೆ ಸೇರಿದ ಹಂಪಾಪುರ ಗ್ರಾಮದತ್ತ ಉಂಬಳಿಬೆಟ್ಟ ಅರಣ್ಯ ಪ್ರದೇಶದಲ್ಲಿ ಕಾಡಾನೆಗಳನ್ನು ಗುರುತಿಸಿ ಅರಣ್ಯ ಸಿಬ್ಬಂದಿ, ನುರಿತ ಅರವಳಿಕೆ ತಜ್ಞರು, ಗುರಿತಜ್ಞರು ಹಾಗೂ 5 ಸಾಕಾನೆಗಳೊಂದಿಗೆ ಕಾಡಾನೆಗೆ ಅರವಳಿಗೆ ಮದ್ದು ನೀಡಲು ಗಜೇಂದ್ರ ಹಾಗೂ ಹರ್ಷ ಆನೆಗಳ ಮೇಲೆ ಕುಳಿತು ಆನೆಯನ್ನು ಹಿಂಬಾಲಿಸಿದರು. ಉಳಿದ 3 ಮೂರು ಆನೆಗಳು ನೀರು, ಸರಪಳಿ ಹಾಗೂ ಕಾಡಾನೆಗಳನ್ನು ಬಂಧಿಸಲು ಬೇಕಾದ ಸಲಕರಣೆಯೊಂದಿಗೆ ಶುಕ್ರವಾರ ಬೆಳಗ್ಗೆ 12ಕ್ಕೆ ಕಾರ್ಯಾಚರಣೆ ಪ್ರಾರಂಭಿಸಿದರು.
ಆನೆಯನ್ನು ಮಧ್ಯಾಹ್ನದಿಂದ ಸಂಜೆಯವರೆಗೂ ಹಿಂಬಾಲಿಸಿಕೊಂಡು ಅರವಳಿಕೆ ಮದ್ದು ನೀಡಲು ಹಿಂಬಾಲಿಸಿದರೂ ಆನೆ ಸಾಕಾನೆಗಳಿಗಿಂತ ವೇಗವಾಗಿ ಓಡಿ ಗುರಿಗೆ ಸಿಗದಂತೆ ಮರೆಯಾಗುತ್ತಿದ್ದವು. ಮಧ್ಯಾಹ್ನ 3.30ರಲ್ಲಿ ಸೂಕ್ತ ಸ್ಥಳದಲ್ಲಿ ಕಾಡಾನೆಗೆ ಅರವಳಿಗೆ  ನೀಡುವ ಸಾಧ್ಯತೆ ಇದ್ದ ಸಂದರ್ಭದಲ್ಲಿ ಆನೆ ಮರೆಯಾಗಿ ತಪ್ಪಿಸಿಕೊಂಡಿತು. ನಂತರ ಸಂಜೆ 4ರಲ್ಲಿ ಹೇಮಾವತಿ ಹಿನ್ನೀರಿ ಪ್ರದೇಶಕ್ಕೆ ಒಮ್ಮೆ ಜನರಿಗೆ ಪ್ರತ್ಯಕ್ಷವಾದ ಕಾಡಾನೆ, ಮತ್ತೆ ಕಾಡಿನೊಳಕ್ಕೆ ಹೋಗಿ ಮರೆಯಾಯಿತು.
ಹಿನ್ನೀರಿನಲ್ಲಿ ಕಾಣಿಸಿಕೊಂಡ ಕಾರಣ ಆ ಭಾಗದಲ್ಲಿ ಅರವಳಿಕೆ ಮದ್ದು ನೀಡಿದರೆ ಆನೆ ನೀರಿನಲ್ಲಿ ಬಿದ್ದು ಸಾವನ್ನಪ್ಪುತ್ತವೆ ಎಂದು ಮನಗಂಡ ಅಧಿಕಾರಿಗಳು, ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದರು. ಹಾಗೂ ಕತ್ತಲೆಯಾಗುತ್ತ ಬಂದಿದ್ದರಿಂದ ಹಿನ್ನೀರಿನ ಪ್ರದೇಶದಲ್ಲಿಯೇ ಆನೆ ಇದ್ದ ಕಾರಣ ಕಾರ್ಯಾಚರಣೆ ಸ್ಥಗಿತಗೊಳಿಸಿದರು.
ಅರವಳಿಕೆ ಚುಚ್ಚುಮದ್ದು ತಾಗಿದ ತಕ್ಷಣವೇ ಆನೆ ಎಲ್ಲೆಂದರಲ್ಲಿ 2 ಕಿಮೀ ವರೆಗೂ ಅಡ್ಡಾದಿಡ್ಡಿಯಾಗಿ ಓಡಿ ಹೋಗಿ ಪ್ರಜ್ಞೆ ತಪ್ಪುತ್ತವೆ. ಆ ಸಂದರ್ಭದಲ್ಲಿ ಏನಾದರೂ ಹೇಮಾವತಿ ಹಿನ್ನೀರಿನೊಳಗೆ ಆನೆ ಹೋದರೆ ಅದನ್ನು ರಕ್ಷಿಸಲು ಸಾಧ್ಯವಾಗುವುದಿಲ್ಲ. ಇದರಿಂದ ಆನೆ ಕಾರ್ಯಾಚರಣೆ ಸ್ಥಗಿತಗೊಳಿಸಿದರು. ಹಂಪಾಪುರ ಅರಣ್ಯ ಪ್ರದೇಶದಲ್ಲಿ ಸಾಕಾನೆಗಳೊಂದಿಗೆ ಅರಣ್ಯ ಇಲಾಖೆಯವರು ಅಲ್ಲಿಯೇ ಬಿಡು ಬಿಟ್ಟಿದ್ದು, ಶನಿವಾರ  ಬೆಳಗ್ಗೆಯಿಂದ ಮತ್ತೆ ಕಾರ್ಯಾಚರಣೆ ಪ್ರಾರಂಭಿಸಲಿದ್ದಾರೆ.
ಗುರುವಾರ ಆನೆಯನ್ನು ಹಿಡಿಯುತ್ತಾರೆ ಎಂಬ ಕುತೂಹಲದಿಂದ ಅಪಾರ ಸಂಖ್ಯೆಯಲ್ಲಿ ಜನ ಸೇರಿ, ಕೊನೆಗೆ ನಿರಾಸೆಯಿಂದ ಮರಳಿದ್ದರು. ಅದೇ ರೀತಿ ಶುಕ್ರವಾರ ಸಹ ಭಾರೀ ಸಂಖ್ಯೆಯಲ್ಲಿ ಜನರು ಸೇರಿ ಕುತೂಹಲದಿಂದ ಕಾರ್ಯಾಚರಣೆ ವೀಕ್ಷಿಸಿದರು.
ಸ್ಥಳಕ್ಕೆ ತಹಸೀಲ್ದಾರ್ಶಾರದಾಂಬ ಭೇಟಿ ನೀಡಿ ಕಾರ್ಯಾಚರಣೆಯ ಪೂರ್ಣ ಮಾಹಿತಿ ಪಡೆದು ಗ್ರಾಮದ ಬಳಿಯೇ ಕಾಡಾನೆ ಬೀಡು ಬಿಟ್ಟಿರುವುದರಿಂದ ಸುತ್ತಮುತ್ತಲಿನ ಪ್ರದೇಶದ ಜನರಿಗೆ ಆನೆ ಏನಾದರೂ ಗ್ರಾಮದೊಳಗೆ ಬರುವ ಸಾಧ್ಯತೆ ಇರುವುದರಿಂದ ಸುತ್ತಮುತ್ತಲಿನ ಜನರು ಅರಣ್ಯ ಇಲಾಖೆಯರು ಎಚ್ಚರವಹಿಸುವಂತೆ ಅರಣ್ಯ ಇಲಾಖೆಯವರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ವನ್ಯ ಪ್ರಾಣಿ ವಿಭಾಗದ ಎಪಿಸಿಸಿಎಫ್ ಉದಯಕುಮಾರ್, ಡಿಎಫ್‌ಓ ಲಕ್ಷ್ಮಣ್, ಕೊಡಗು ಡಿಎಫ್‌ಓ, ಆರ್‌ಎಫ್‌ಓ ದೇವರಾಜ್, ಶನಿವಾರ ಸಂತೆ ಎಸಿಎಫ್ ನಾಗರಾಜ್, ಹಾಸನ ಎಸಿಎಫ್ ಮಂಜುನಾಥ್ ತರರು ಇದ್ದರು.
ಕಾಗನೂರು ಬಳಿ ಬೀಡು ಬಿಟ್ಟಿದ್ದ ಸಾಕಾನೆಗಳ ಮೇಲೆ ಗುರುವಾರ ರಾತ್ರಿ ಒಂಟೀ ಸಲಗವೊಂದು ದಾಳಿ ನಡೆಸಲು ಮುಂದಾದಾಗ ಅರಣ್ಯ ಇಲಾಖೆ ಅಧಿಕಾರಿಗಳು ಗುಂಡು ಹಾಗೂ ಪಟಾಕಿ ಸಿಡಿಸಿ ಜೋರಾಗಿ ಸದ್ದು ಮಾಡಿದ ಪರಿಣಾಮ ಸಾಕಾನೆಗಳು ಕಾಡಾನೆಗಳಿಂದ ಸ್ವಲ್ಪದರಲ್ಲೇ ಬಚಾವ್ ಆದ ಘಟನೆ ನಡೆದಿದೆ. ಗುರುವಾರ ಕಾರ್ಯಾಚರಣೆ ನಡೆಸಿದ ಆನೆ ರಾತ್ರಿ ಇವುಗಳ ಮೇಲೆ ಒಂಟಿ ಸಲಗ ಸಿಟ್ಟುಗೊಂಡು ದಾಳಿ ನಡೆಸಲು ಮುಂದಾಗಿದೆ.
ದೊಡ್ಡ ದಂತಗಳನ್ನು ಹೊಂದಿದ್ದ ಕಾಡಾನೆಯನ್ನು ಕಟ್ಟಿ ಹಾಕಿದ್ದ ಸಂದರ್ಭದಲ್ಲಿ ದಾಳಿ ನಡೆಸಿದ್ದರೆ ಸಾಕಾನೆಗಳು ತೀವ್ರ ಗಾಯಗೊಳ್ಳುವ ಸಾಧ್ಯತೆ ಇತ್ತು ಹಾಗೂ ಬಲವಾದ ದಂತ ಇರುವ ದಷ್ಟಪುಷ್ಟವಾಗಿ ಬೆಳೆದಿದ್ದ ಕಾಡಾನೆ ಸಾಕಾನೆಗೆ ಹೊಟ್ಟೆ ಭಾಗಕ್ಕೆ ತಿವಿದ್ದಿದ್ದರೆ ಸಾಕಾನೆ ಸಾಯುವ ಸನ್ನಿವೇಶವೂ ಇರುತ್ತಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ. ಶುಕ್ರವಾರ ರಾತ್ರಿ ಮತ್ತೆ ಸಾಕಾನೆಗಳ ಮೇಲೆ ಕಾಡಾನೆ ದಾಳಿ ನಡೆಸುತ್ತವೆ ಎಂಬ ಆತಂಕವಿದ್ದು, ಅದಕ್ಕಾಗಿ ಮುಂಜಾಗ್ರತೆ ಕ್ರಮ ವಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement