ಬಡಾವಣೆಗೆ ಮೂಲಭೂತ ಸೌಲಭ್ಯ: ಭರವಸೆ
ಕ.ಪ್ರ.ವಾರ್ತೆ ಹೊಳೆನರಸೀಪುರ ನ. 22
ಪಟ್ಟಣದ ವಿದ್ಯುತ್ನಗರ ಬಡಾವಣೆ ಯೋಜನೆ ಮಾಡುವಲ್ಲಿ ಹಲವು ನ್ಯೂನತೆಗಳಿದ್ದು, ಅವುಗಳನ್ನು ಸರಿಪಡಿಸಿಕೊಂಡು ಬಡಾವಣೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದಾಗಿ ಶಾಸಕ ರೇವಣ್ಣ ಭರವಸೆ ನೀಡಿದರು.
ವಿದ್ಯುತ್ ನಗರದಲ್ಲಿನ ರಸ್ತೆಗಳ ಡಾಂಬರೀಕರಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ವಿದ್ಯುತ್ನಗರದ ರಸ್ತೆ ಮತ್ತು ಪಟ್ಟಣದ ನಾನಾ ರಸ್ತೆಗಳು ಮತ್ತು ಚರಂಡಿ ಕಾಮಗಾರಿಗಳಿಗೆ ಮುಖ್ಯ ಮಂತ್ರಿಗಳ ನಗರೋತ್ಥಾನ ಯೋಜನೆಯ ಎರಡನೆ ಹಂತದಲ್ಲಿ ಸುಮಾರು ಐದು ಕೋಟಿ ಅನುದಾನ ಬಂದಿದ್ದು, ಅದರಲ್ಲಿ ಪಟ್ಟಣದ 23 ವಾರ್ಡ್ಗಳಲ್ಲಿ ಅವಶ್ಯವಾಗಿ ಬೇಕಾಗಿರುವ ಕಾಮಗಾರಿಗಳಿಗೆ ಈ ಹಣವನ್ನು ವ್ಯಯಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಬಡಾವಣೆಯ ಎಲ್ಲ ರಸ್ತೆಗಳಿಗೂ ಡಾಂಬರೀಕರಣ ಮಾಡುವಂತೆ ಶಾಸಕ ರೇವಣ್ಣ ಅವರಲ್ಲಿ ಮನವಿ ಮಾಡಿದಾಗ ಶಾಸಕರು ಪ್ರತಿಕ್ರಿಯಿಸಿ ವಿದ್ಯುತ್ನಗರ ಬಡಾವಣೆ ಯೋಜನೆ ಕಾರ್ಯಗತ ಗೊಳಿಸುವ ನಿಟ್ಟಿನಲ್ಲಿ ಬಡಾವಣೆಗೆ ಮೂಲಭೂತವಾಗಿ ಇರಬೇಕಾದ ಪಾರ್ಕ್, ಕುಡಿಯುವ ನೀರು, ಒಳಚರಂಡಿಗಳು ಯೋಜನೆಯಲ್ಲಿ ಸೇರ್ಪಡೆ ಆಗಿಲ್ಲ. ಆದ್ದರಿಂದ ಈ ಬಡಾವಣೆಯನ್ನು ರೂಪಿಸಿದವರ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲೇ ಇದ್ದ ಪುರಸಭೆ ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರಸ್ತುತ ಈ ಬಡಾವಣೆಯಲ್ಲಿ ಪಾರ್ಕ್ಗೆಂದು ಬಿಟ್ಟಿರುವ ನಿವೇಶನವನ್ನು ಕೆಲವರು ಅಕ್ರಮಿಸಿಕೊಂಡಿರುವ ಸುದ್ದಿ ತಮ್ಮ ಗಮನಕ್ಕೂ ಬಂದಿದೆ. ಅತಿಕ್ರಮಿಸಿ ಕೊಂಡಿರುವವರ ವಿರುದ್ಧ ಯಾವುದೆ ಮುಲಾಜು ಇಲ್ಲದೆ ಕ್ರಮ ಕೈಗೊಂಡು ಬಡಾವಣೆ ಯೋಜನೆಯಲ್ಲಿ ಇರಬೇಕಾದ ಸವಲತ್ತುಗಳು ಇಲ್ಲಿನ ನಿವಾಸಿಗಳಿಗೆ ತಲುಪಿಸುವುದು ಪ್ರಜಾಪ್ರಭುತ್ವದ ಕೆಲಸವಾಗಿದೆ. ಈ ಬಡಾವಣೆಯನ್ನು ರೂಪಿಸಿ ಹಣ ಮಾಡಿಕೊಂಡವರು ಇಂದು ರಾಜಾರೋಷವಾಗಿ ತಿರುಗಾಡಿಕೊಂಡಿದ್ದಾರೆ. ಆದರೆ ಇಲ್ಲಿ ಮಾತ್ರ ಮೂಲಭೂತ ಸವಲತ್ತು ಇಲ್ಲದೆ ನಿವಾಸಿಗಳು ದಿನನಿತ್ಯ ಪರದಾಡುವಂತಾಗಿದೆ ಎಂಬುದು ತಮ್ಮ ಗಮನಕ್ಕೆ ಬಂದಿದೆ. ಮೂಲಭೂತ ಸೌಕರ್ಯ ನೀಡಲು ಹಣದ ಕೊರತೆ ಇದ್ದು ಅವುಗಳನ್ನು ಪೂರೈಸಲು ಮತ್ತಷ್ಟು ದಿನಗಳು ಕಾಯುವಂತೆ ತಿಳಿಸಿದರು.
ಪುರಸಭೆ ಮುಖ್ಯಾಧಿಕಾರಿ ಎಚ್.ವಿ.ಹರೀಶ್ ಮಾತನಾಡಿ ಪಟ್ಟಣದ ಅಭಿವೃದ್ದಿಗೆ ಎಂಟು ಪ್ಯಾಕೇಜಗಳನ್ನು ರೂಪಿಸಿದ್ದು ನಗರೋತ್ಥಾನ ಯೋಜನೆಯ ಎರಡನೇ ಹಂತದಲ್ಲಿ ಐದು ಕೋಟಿ ರೂಪಾಯಿ ಬಂದಿದೆ.
ಅದರಂತೆ ಪಟ್ಟಣದ ಎರಡನೇ ವಾರ್ಡ್ ಅಂಜನೇಯ ರೈಸ್ಮಿಲ್ ಸಮೀಪದ ರಸ್ತೆ, ಬನಶಂಕರಿ ದೇವಾಲಯ, ದೇವಾಂಗ ಶ್ರೀರಾಮಮಂದಿರ, ಕುಂಬಾರಬೀದಿ, ಚೌಡೇಶ್ವರಿ ದೇವಾಲಯ, ವಿದ್ಯುತ್ನಗರದಲ್ಲಿನ ರಸ್ತೆ ಡಾಂಬರಿಕರಣ, ಬಸ್ನಿಲ್ದಾಣ ಪಕ್ಕದ ಬ್ರಹ್ಮ ಕುಮಾರಿ ಈಶ್ವರಿ ರಸ್ತೆ, ಪಟ್ಟಣದ ಮುಖ್ಯ ರಸ್ತೆಯಲ್ಲಿನ ಕಂಚುಗಾರರ ಬೀದಿ, ಎವಿಎಸ್ ಗೋಡನ್ ಸಮೀಪದ ರಸ್ತೆ, ಪಟ್ಟಣದ ಸಿಂಗಮ್ಮ ದೇವಾಲಯದ ಎರಡು ರಸ್ತೆಗಳು, ಎಡಿ ಕಾಲೋನಿಯಲ್ಲಿನ ಹಾಗೂ ಎಸ್ಎಲ್ಎನ್ ಟೆಂಪಲ್ ರಸ್ತೆ ಹಾಗೂ ಒಂದೆರಡು ಕಡೆ ಚರಂಡಿ ಕಾಮಗಾರಿಗಳು ಈ ಯೋಜನೆಯಲ್ಲಿ ಸೇರ್ಪಡೆ ಆಗಿವೆ ಎಂದು ಹೇಳಿದರು. ಗುದ್ದಲಿ ಪೂಜೆ ಸಮಾರಂಭದಲ್ಲಿ ಪುರಸಭೆ ಎಂಜಿನಿಯರ್ ಪ್ರಕಾಶ್, ಆರೋಗ್ಯಾಧಿಕಾರಿ ವಸಂತಕುಮಾರ್, ಪುರಸಭೆ ಸದಸ್ಯ ಎಚ್.ವಿ.ಪುಟ್ಟರಾಜು ಸೇರಿದಂತೆ ಬಡಾವಣೆ ನಿವಾಸಿಗಳು ಹಾಜರಿದ್ದರು.