ಮೂಲ ಸೌಲಭ್ಯ ವಂಚಿತ ಕಾರಗಲ್ಲು : ಗ್ರಾಮಸ್ಥರ ಮನವಿಗೆ ಸ್ಪಂದನೆ ಇಲ್ಲ
ರಾಮನಾಥಪುರ: ಸಮೀಪದ ಕಾರಗಲ್ಲು ಗ್ರಾಮ ಮೂಲಭೂತ ಸೌಲಭ್ಯಗಳಿಲ್ಲದೆ ಹದಗೆಟ್ಟು ಹೋಗಿದ್ದು, ಇಲ್ಲಿನ ಗ್ರಾಮಸ್ಥರ ಅಹವಾಲನ್ನು ಕೇಳುವವರೇ ಇಲ್ಲವಾಗಿದೆ ಎಂದು ನಿವಾಸಿ ಗೋವಿಂದರಾಜು ಆರೋಪಿಸಿದ್ದಾರೆ. ಕೊಣನೂರು ಹೋಬಳಿಯ ಹಂಡ್ರಂಗಿ ಪಂಚಾಯ್ತಿ ವ್ಯಾಪ್ತಿಗೆ ಬರುವ ಈ ಕಾರಗಲ್ಲು ಗ್ರಾಮಕ್ಕೆ ಸರಿಯಾದ ರಸ್ತೆಯಿಲ್ಲ. ಚರಂಡಿ ವ್ಯವಸ್ಥೆಯಿಲ್ಲದೆ ರಸ್ತೆಯಲ್ಲೇ ಹರಿಯುತ್ತಿರುವ ಕೊಳಚೆ ನೀರು ಇತ್ತೀಚೆಗೆ ತಾಲೂಕು ಪಂಚಾಯ್ತಿ ಅನುದಾನದ ವತಿಯಿಂದ 200 ಮೀ. ಮಾತ್ರ ಚರಂಡಿ ನಿರ್ಮಿಸಲು ಒಪ್ಪಿಗೆ ದೊರಕಿದ್ದು, ಸ್ಥಳೀಯ ತಾಲೂಕು ಪಂಚಾಯ್ತಿ ಸದಸ್ಯರೊಬ್ಬರು ಅದೇ ಗ್ರಾಮದ ವ್ಯಕ್ತಿಗೆ ಚರಂಡಿ ಕಾಮಗಾರಿ ನಿರ್ಮಿಸಲು ಗುತ್ತಿಗೆ ನೀಡಿದೆ. ಆದರೆ ಈ ಗುತ್ತಿಗೆದಾರ ಮೊದಲು ಗ್ರಾಮದ ಕೊನೆಯಿಂದ ಚರಂಡಿಗೆಂದು ಜೆಸಿಬಿ ಯಂತ್ರದಿಂದ ರಸ್ತೆಯ ಎರಡೂ ಬದಿ ಚರಂಡಿ ತೆಗೆಸಿ ನಂತರ ರಾಜಕೀಯ ವೈಷಮ್ಯದಿಂದ ಕೆಲವು ಮನೆಗಳನ್ನು ಹೊರತುಪಡಿಸಿ ತನಗಿಷ್ಟ ಬಂದ ಕಡೆ ಚರಂಡಿ ಕಾಮಗಾರಿಯನ್ನು ಮುಂದುವರೆಸಿದ್ದು, ಈ ಬಗ್ಗೆ ಕೇಳಲು ಹೋದರೆ ಉಡಾಫೆ ಉತ್ತರ ನೀಡುತ್ತಾರೆ. ಈತ ಚರಂಡಿಗೆಂದು ಜಮೀನನ್ನೆಲ್ಲಾ ಅಗೆದು ಗುಂಡಿ ಮಾಡಿ ಜೊತೆಗೆ ಮನೆಯ ಮುಂದೆ ಇದೇ ಅವಾಂತರ ಮಾಡಿ ಸಣ್ಣ ಮಕ್ಕಳು ವೃದ್ಧರು ತಿರುಗಾಡದಂತಾಗಿದೆ. ಕೂಡಲೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಈ ಕಾಮಗಾರಿಯನ್ನು ಸ್ಥಗಿತಗೊಳಿಸಿ ಉತ್ತಮ ಕಾರ್ಯ ನಿರ್ವಹಿಸುವಂತವರಿಗೆ ಕಾಮಗಾರಿ ನೀಡಬೇಕೆಂದು ಆಗ್ರಹಿಸಿದ್ದಾರೆ.