ವಿಶ್ವನಾಥ್ ಗಿಮಿಕ್ ರಾಜಕಾರಣಿ
ಕ.ಪ್ರ.ವಾರ್ತೆ ಹಾಸನ ನ. 22
ಕಾಂಗ್ರೆಸ್ನ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರನ್ನು ಮೆಚ್ಚಿಸಿಕೊಂಡು ಸ್ಥಳೀಯ ಸಂಸ್ಥೆ ಅಧಿಕಾರ ಗಿಟ್ಟಿಸಿಕೊಳ್ಳುವ ದುರುದ್ದೇಶದಿಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಗಿಮಿಕ್ ರಾಜಕಾರಣವನ್ನು ಎಚ್.ಎಂ.ವಿಶ್ವನಾಥ ಮಾಡುತ್ತಿದ್ದಾರೆ ಎಂದು ಜೆಡಿಎಸ್ ಮುಖಂಡರು ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಶುಕ್ರವಾರ ಶಾಸಕ ಎಚ್.ಕೆ.ಕುಮಾರಸ್ವಾಮಿ ಮಾತನಾಡಿ, ವಿಶ್ವನಾಥ್ ಬೆಳೆದು ಬಂದ ಎಲ್ಲಾ ರೀತಿಯ ಸನ್ನಿವೇಶಗಳು ಜಿಲ್ಲೆಯ ಜನತೆಗೆ ತಿಳಿದಿದೆ. ಅವರು ಕಾಂಗ್ರೆಸ್ಗೆ ಸೇರಿದ ಮೇಲೆ ಅವರನ್ನು ಅಲ್ಲಿ ಗಣನೆಗೆ ತೆಗೆದುಕೊಳ್ಳದ ಕಾರಣ ದೇವೇಗೌಡರ ವಿರುದ್ಧ ಹೇಳಿಕೆಗಳನ್ನು ನೀಡಿದರೆ ಜಿಲ್ಲೆಯಲ್ಲಿ ಮಲಗಿರುವ ಕಾಂಗ್ರೆಸ್ ನಾಯಕರಿಗಿಂತ ತಾನು ಸ್ವಲ್ಪಮಟ್ಟಿಗೆ ಎಚ್ಚೆತ್ತುಕೊಂಡು ಕ್ರಿಯಾಶೀಲನಾಗಿ ಕಾರ್ಯನಿರ್ವಸುತ್ತಿದ್ದೇನೆ ಅಂತ ಕಾಂಗ್ರೆಸ್ ರಾಷ್ಟ್ರೀಯ ನಾಯಕರನ್ನು ಮೆಚ್ಚಿಸಿಕೊಳ್ಳಲು ಈ ಕುತಂತ್ರ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ವಿಶ್ವನಾಥ್ಗೆ ನೈತಿಕ ಹಕ್ಕಿಲ್ಲ: ಜಿಲ್ಲೆಗೆ ಮಾಜಿ ಪ್ರಧಾನಿ ದೇವೇಗೌಡರು ಏನು ಕೊಡುಗೆ ನೀಡಿದ್ದಾರೆ ಎಂಬುದು ಜನತೆಗೆ ಗೊತ್ತಿದೆ. ರಾಷ್ಟ್ರೀಯ ನಾಯಕರಾದ ಗೌಡರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸದೆ ರಾಜಕೀಯ ನಿವೃತ್ತಿ ಪಡೆಯಬೇಕು ಅಂತ ಹೇಳುವುದಕ್ಕೆ ವಿಶ್ವನಾಥ್ಗೆ ನೈತಿಕ ಹಕ್ಕಿಲ್ಲ. ಹಿಂದೆ ಅವರು ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ಹಾಗೂ ಸಚಿವರಾಗಿದ್ದ ರೇವಣ್ಣನವರ ಹತ್ತಿರ ಬಹಳ ಒಡನಾಟದಿಂದ ಇದ್ದು, ತಮಗೆ ಬೇಕಾದ ಕೆಲಸ ಕಾರ್ಯಗಳನ್ನು ಮಾಡಿಸಿಕೊಂಡು ಈಗ ಅವರ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಇದು ಖಂಡನೀಯ ಎಂದು ಹೇಳಿದರು.
ಹಳೇ ಕಾಂಗ್ರೆಸ್ ಕಾರ್ಯಕರ್ತರನ್ನು ಹಿಂದಿಕ್ಕಿ ಪಕ್ಷದಲ್ಲಿ ಯಾವುದಾದರೊಂದು ಹುದ್ದೆಯನ್ನು ಗಿಟ್ಟಿಸಿಕೊಳ್ಳುವ ಸಲುವಾಗಿ ದೇವೇಗೌಡರ ವಿರುದ್ಧ ನಾಟಕೀಯ ಮಾತುಗಳನ್ನಾಡುತ್ತಿದ್ದಾರೆ. ರೇವಣ್ಣನವರು ತೀವ್ರಗಾಗಿ ಶಾಸಕರಿಗೆ ತೊಂದರೆ ನೀಡುತ್ತಿದ್ದಾರೆ ಅಂತೆಲ್ಲ ಹೇಳಿದ್ದಾರೆ. ಅದೇ ವಿಶ್ವನಾಥ್ ಜೆಡಿಎಸ್ನಲ್ಲಿದ್ದಾಗ ಸಕಲೇಶಪುರದಲ್ಲಿ ಇದ್ದಂತಹ ಇತರೆ ಜೆಡಿಎಸ್ ಮುಖಂಡರು ನೆಮ್ಮದಿಯಿಂದ ಇರಲು ಬಿಡದೆ, ಮಾನಸಿಕವಾಗಿ ದೌರ್ಜನ್ಯ ಎಸಗಿ ಅವರು ಅಲ್ಲಿಂದ ಹೊರ ನಡೆಯುವಂತೆ ಮಾಡಿದಂತಹ ವ್ಯಕ್ತಿ ವಿಶ್ವನಾಥ್ ಎಂದು ತಿಳಿಸಿದರು.
ಹೇಳಿಕೆ ನೀಡುವ ಮೂಲಕ ತಮಾಶೆ ವ್ಯಕ್ತಿ: ಜೆಡಿಎಸ್ ನಾಯಕರ ಬಗ್ಗೆ ಮಾತನಾಡುವ ಅರ್ಹತೆ ವಿಶ್ವನಾಥ್ಗೆ ಇಲ್ಲ. ಅವರನ್ನು ರಾಜಕೀಯ ಜೀವನಕ್ಕೆ ಕರೆತಂದವರು ಹಾಗೂ ಅವರ ಏಳಿಗೆಗೆ ಯಾರು ಕಾರಣ ಎಂಬುದನ್ನು ಅರಿತುಕೊಂಡು ನಂತರ ದೇವೇಗೌಡರು ಹಾಗೂ ರೇವಣ್ಣ ಅವರ ಬಗ್ಗೆ ಮಾತನಾಡಲಿ. ತಮ್ಮ ಹೇಳಿಕೆಯಿಂದ ಕಾಂಗ್ರೆಸ್ ಕಟ್ಟುವಂತಹ ಕೆಲಸ ಮಾಡುತ್ತಿದ್ದೇನೆ ಅಂತ ಅಂದುಕೊಳ್ಳುವುದು ಸರಿಯಲ್ಲ ಎಂದ ಅವರು, ಕೇವಲ ಇಲ್ಲಸಲ್ಲದ ಹೇಳಿಕೆ ನೀಡುವ ಮೂಲಕ ತಮಾಶೆ ವ್ಯಕ್ತಿಯಾಗಿದ್ದಾರೆ ಎಂದು ವ್ಯಂಗ್ಯವಾಡಿದರು.
ವಿಧಾನ ಪರಿಷತ್ ಸದಸ್ಯ ಪಟೇಲ್ಶಿವರಾಂ ಮಾತನಾಡಿ, ಕಾಂಗ್ರೆಸ್ನಲ್ಲಿ ಸರಿಯಾಗಿ ವಿಶ್ವನಾಥ್ರನ್ನು ಗುರುತಿಸದ ಕಾರಣ ಅವರು ದೇವೇಗೌಡರ ವಿರುದ್ಧ ಕ್ಷುಲ್ಲಕ ಮಾತುಗಳನ್ನಾಡುತ್ತಿದ್ದಾರೆ. ಅವರು ಈಗ ಮಾಡಿರುವ ಆರೋಪಗಳ ಬಗ್ಗೆ ಜೆಡಿಎಸ್ನಲ್ಲಿದ್ದ ಸಂದರ್ಭದಲ್ಲಿ ಅದು ತಪ್ಪು ಎಂದು ಹೇಳಬಹುದಿತ್ತಲ್ಲವೇ. ಅದನ್ನು ಬಿಟ್ಟು ಈಗ ಅಧಿಕಾರದ ಆಸೆಗೆ ಬೇರೆ ಪಕ್ಷಕ್ಕೆ ಹೋಗಿ, ಬೆಳೆದು ಹೋಗಿದ್ದಂತಹ ಪಕ್ಷದ ಬಗ್ಗೆ ಈ ರೀತಿ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದು ಹೇಳಿದರು.
ಅವರಿಗೆ ಕಾಂಗ್ರೆಸ್ನಲ್ಲಿ ತಮ್ಮ ಅಸ್ತಿತ್ವದ ಬಗ್ಗೆ ಅನುಮಾನಗೊಂಡು, ದೇವೇಗೌಡರ ವಿರುದ್ಧ ಮಾತನಾಡುವ ಮೂಲಕ ಕಾಂಗ್ರೆಸ್ ನಾಯಕರ ಗಮನ ಸೆಳೆಯಲು ಸಾಧ್ಯ. ಇದರಿಂದ ತಮ್ಮ ರಾಜಕೀಯ ಭವಿಷ್ಯ ಉಜ್ವಲವಾಗಲಿದೆ ಅನ್ನೋ ಒಂದೇ ಕಾರಣಕ್ಕೆ ರಾಜಕೀಯ ಇಂಥ ನಾಟಕವಾಡುತ್ತಿದ್ದಾರೆ. ಜೆಡಿಎಸ್ನಲ್ಲಿ ಯಾರೂ, ಯಾರಿಗೂ ತೊಂದರೆ ನೀಡುತ್ತಿಲ್ಲ ಎಂದು ಸ್ವಷ್ಟಪಡಿಸಿದರು.
ದೇವೇಗೌಡರು ಚುನಾವಣೆಗೆ ಸ್ಪರ್ಧಿಸಬಾರದು ಎಂದು ಹೇಳುವ ಹಕ್ಕು ವಿಶ್ವನಾಥ್ಗೆ ಇಲ್ಲ. ಇಲ್ಲ ಸಲ್ಲದ ಆರೋಪಗಳನ್ನು ಮಾಡುವುದು ಅವರ ವ್ಯಕ್ತಿತ್ವಕ್ಕೆ ಶೋಭೆಯಲ್ಲ ಎಂದೂ ಹೇಳಿದರು.ಶಾಸಕ ಎಚ್.ಎಸ್.ಪ್ರಕಾಶ್, ಜೆಡಿಎಸ್ ಮುಖಂಡ ಕೆ.ಎಂ.ರಾಜೇಗೌಡ ಹಾಗೂ ಚನ್ನವೀರಪ್ಪ ಇದ್ದರು.
ನಾವು ಸಹ ಬೇರೆ ಪಕ್ಷಕ್ಕೆ ಹೋಗಿ ಬಂದಿದ್ದೇವೆ. ಆದರೆ ನಾವೆಲ್ಲೂ ದೇವೇಗೌಡರ ಬಗ್ಗೆಯಾಗಲಿ ಅಥವಾ ರೇವಣ್ಣನವರ ಬಗ್ಗೆ ಹಗುರವಾಗಿ ಮಾತನಾಡಿಲ್ಲ. ಆದರೆ ವಿಶ್ವನಾಥ್ ಜೆಡಿಎಸ್ನಲ್ಲಿದ್ದು, ಎಲ್ಲಾ ರೀತಿಯ ಅಧಿಕಾರವನ್ನು ಅನುಭವಿಸಿದ್ದಾರೆ. ಈಗ ಉಂಡ ಮನೆಗೆ ಉಪ್ಪು ಸುರಿಯುವಂತಹ ಕೃತ್ಯವನ್ನು ವಿಶ್ವನಾಥ್ ಮಾಡಬಾರದು...
-ಬಿ.ವಿ.ಕರೀಗೌಡ, ಮಾಜಿ ಶಾಸಕ