ಸಂಘ ಸಂಸ್ಥೆಗಳು ಸಾಮಾಜಿಕ ಕಾರ್ಯಗಳತ್ತ ಆಸಕ್ತಿ ವಹಿಸಲಿ'
ಜಾವಗಲ್: ಸಂಘ ಸಂಸ್ಥೆಗಳು, ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಜೊತೆಗೆ ಸಾಮಾಜಿಕ ಕೆಲಸ ಕಾರ್ಯಗಳತ್ತಲೂ ಆಸಕ್ತಿ ವಹಿಸಬೇಕೆಂದು ಪಿಎಲ್ಡಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಜೆ.ಎಸ್.ಸೋಮೇಗೌಡ ತಿಳಿಸಿದರು.
ಪಟ್ಟಣದಲ್ಲಿ ನಡೆಯುತ್ತಿರುವ ಗ್ರಾಮೀಣ ನಾಟಕೋತ್ಸವದಲ್ಲಿ ಮಾತನಾಡಿದ ಅವರು, ಪ್ರಸ್ತುತ ಹೋಬಳಿಯಲ್ಲಿ ಮಳೆಯಿಲ್ಲದೆ ಕೆರೆ ಕಟ್ಟೆಗಳು ಬತ್ತಿ ಹೋಗಿದ್ದು, ಅಂತರ್ಜಲಮಟ್ಟ ತೀವ್ರ ಕುಸಿದಿದ್ದು ತೆಂಗು ಬೆಳೆ ಸಂಪೂರ್ಣವಾಗಿ ನಾಶಹೊಂದಿದೆ.
ಕುಡಿಯುವ ನೀರಿನ ಸಮಸ್ಯೆ ಎಲ್ಲಾ ಹಳ್ಳಿಗಳಲ್ಲಿ ತಲೆದೋರಿದ್ದು, ನೀರು ಸಿಕ್ಕರೂ ಫ್ಲೋರೈಡ್ ಯುಕ್ತವಾಗಿದ್ದು ಕುಡಿಯಲು ಯೋಗ್ಯವಾಗಿಲ್ಲ. ಆದ್ದರಿಂದ ಹೋಬಳಿಯ ಎಲ್ಲಾ ಕೆರೆ ಕಟ್ಟೆಗಳಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಹೋರಾಟ ಮಾಡುವ ಅನಿವಾರ್ಯತೆ ಇದೆ ಎಂದರು.
ತಾಪಂ ಮಾಜಿ ಸದಸ್ಯ ಟಿ.ಮಹಾಲಿಂಗಪ್ಪ ಮಾತನಾಡಿ, ಹಳ್ಳಿಗಳ ಜನರು ದೃಶ್ಯ ಮಾಧ್ಯಮ ಬಗ್ಗೆ ಅತೀ ವ್ಯಾಮೋಹಕ್ಕೆ ಒಳಗಾಗಿದ್ದಾರೆ. ನಾಟಕ ಮನರಂಜನೆಯೊಂದಿಗೆ ಜ್ಞಾನ ದಾಸೋಹ ನೀಡುತ್ತದೆ ಎಂದು ಹೇಳಿದರು. ತಾಪಂ ಮಾಜಿ ಸದಸ್ಯ ಎನ್.ಬಿ.ಸೋಮಶೇಖರ್, ನಾಟಕಗಳು ಜೀವನದ ನೈಜ ಚಿತ್ರಣವನ್ನು ಪ್ರತಿಬಿಂಬಿಸುತ್ತದೆ ಎಂದು ನುಡಿದರು.ಮಾಜಿ ಎಪಿಎಂಸಿ ಅಧ್ಯಕ್ಷ ಬಿ.ಎಸ್.ಮಹದೇವಪ್ಪ ಮಾತನಾಡಿ, ನಾಟಕಗಳಿಂದ ಜನ ಜಾಗೃತಿ ಮೂಡಿಸುತ್ತದೆ ಎಂದರು. ಗ್ರಾಪಂ ಅಧ್ಯಕ್ಷೆ ಕವಿತಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು.
ಗ್ರಾಪಂ ಸದಸ್ಯ ಜಗದೀಶ್, ಬನಶಂಕರಿ ಮಹಿಳಾ ಸಂಘದ ಅಧ್ಯಕ್ಷೆ ಶಾಂತಮ್ಮ, ಪ್ರಸನ್ನಕುಮಾರ್ ಕುರುಣಾಕರ, ಸಿ.ಬಿ.ಕುಮಾರ್ ಇದ್ದರು. ಸಿರಿಗೆರೆ ಲಿಂಗೈಕ್ಯ ಶಿವಕುಮಾರಶಿವಾಚಾರ್ಯ ಸ್ವಾಮಿಜಿ ರಚಿಸಿದ, ಮಾಲತೇಶ್ ಬಡಿಗೇರ ನಿರ್ದೇಶನದ ವಿಶ್ವಬಂಧು ಮರುಳಸಿದ್ಧ ನಾಟಕವನ್ನು ಕಲಾತಂಡದವರು ಅತ್ಯುತ್ತಮವಾಗಿ ಪ್ರದರ್ಶಿಸಿದರು.