ಸುರಕ್ಷಿತ ಕೀಟನಾಶಕ ಬಳಕೆ ತರಬೇತಿ
ಹಾಸನ: ಕೃಷಿ ಇಲಾಖೆ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಯುಕ್ತಾಶ್ರಯದಲ್ಲಿ ಸುರಕ್ಷಿತ ಕೀಟನಾಶಕ ಬಳಕೆ ತರಬೇತಿ ಕಾರ್ಯಕ್ರಮ ದೊಡ್ಡಮಗ್ಗೆ ಅಜ್ಜೂರು ಗ್ರಾಮದಲ್ಲಿ ನಡೆಯಿತು. ತಾಪಂ ಸದಸ್ಯೆ ಸರಸ್ಪತಿ ಕಾರ್ಯಕ್ರಮ ಉದ್ಘಾಟಿಸಿದರು.
ಕೀಟಶಾಸ್ತ್ರಜ್ಞ ಡಾ.ಬಸವರಾಜು ಮಾತನಾಡಿ, ಅವಶ್ಯಕತೆಗೆ ಅನುಗುಣವಾಗಿ ಸೂಕ್ತ ಸಸ್ಯ ಸಂರಕ್ಷಣಾ ಸಿಂಪರಣೆ ಮಾಡಲು ತಿಳಿಸಿ, ಕೀಟನಾಶಕಗಳ ಸಿಂಪರಣೆ ಸಂದರ್ಭದಲ್ಲಿ ಮುನ್ನೆಚ್ಚರಿಕೆ ಕ್ರಮಗಳು, ಶಿಫಾರಸ್ಸಿನ ಆಧಾರದ ಮೇಲೆ ಬೆಳ್ಳಗಿನ ಅಥವಾ ಸಂಜೆ ಸಮಯದಲ್ಲಿ ಕೀಟನಾಶಕಗಳನ್ನು ಬಳಸುವಂತೆ ಹೇಳಿದರು.
ಕೀಟನಾಶಕಗಳ ಪ್ಯಾಕಿಂಗ್ ಮೇಲಿರುವ ಚಿಹ್ನೆಗಳ (ಕೆಂಪು, ಹಳದಿ, ನೀಲಿ, ಹಸಿರು) ಬಗ್ಗೆ ವಿವರಣೆ ನೀಡಿದರು. ಕೀಟನಾಶಕಗಳನ್ನು ಬಳಸಿದ ನಂತರ ಖಾಲಿ ಡಬ್ಬಗಳನ್ನು ಮಕ್ಕಳಿಂದ ದೂರ ಇರುವಂತೆ ಕ್ರಮ ವಹಿಸುವುದು. ಕ್ರಮಬದ್ಧವಲ್ಲದ ಕೀಟನಾಶಕಗಳ ಬಳಕೆಯ ದುಷ್ಪರಿಣಾಮಗಳ ಬಗ್ಗೆ ವಿವರ ನೀಡಿದರು. ಸಹಾಯಕ ಕೃಷಿ ನಿರ್ದೇಶಕ ಡಾ.ಯು.ಎಚ್.ಭಾನುಪ್ರಕಾಶ್ ಮಾತನಾಡಿ, ಸ್ವಸಹಾಯ ಸಂಘದ ನಿರ್ವಹಣೆ, ಕೃಷಿ ಇಲಾಖೆಯಲ್ಲಿ ಸಹಾಯಧನವನ್ನು ಪಡೆಯಲು ನೀಡಬೇಕಾದ ದಾಖಲೆಗಳು, ರೈತರ ತರಬೇತಿಗಳು, ಮಣ್ಣಿನ ಮಾದರಿ ಸಂಗ್ರಹಣೆ ಹಾಗೂ ಮಣ್ಣು ಪರೀಕ್ಷೆ ಆಧಾರಿತದ ಮೇಲೆ ಲಘು ಪೋಷಕಾಂಶ ಮತ್ತು ರಸಗೊಬ್ಬರ ಬಳಕೆಯ ಬಗ್ಗೆ ವಿವರಿಸಿದರು. ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಆರ್.ಸೋಮಶೇಖರ್ ಮಾತನಾಡಿದರು.
ಪೂರ್ಣಿಮಾ ಸ್ವಾಗತಿಸಿದರು. ಕೃಷಿ ಅಧಿಕಾರಿ ಮತ್ತು ಗ್ರಾಮಾಭಿವೃದ್ಧಿ ಸಂಘದ ಚಿದಾನಂದ ನಿರೂಪಿಸಿದರು.
ತಾಲೂಕು ತಾಂತ್ರಿಕ ವ್ಯವಸ್ಥಾಪಕ ಕೆ.ಎಂ.ದರ್ಶನ್, ಆತ್ಮ ಯೋಜನೆ ಮತ್ತು ರೈತ ಅನುವುಗಾರ ಸಂಜಯ್, ಮೋಹನ್, ಕುಶಾ, ಮಂಜುನಾಥ ಮತ್ತು ಕುಮಾರ್ ಭಾಗವಹಿಸಿದ್ದರು.