ಬರ ಪಟ್ಟಿಗೆ ಸೇರಿಸಲು ಮತ್ತೊಂದು ಪತ್ರ...
ಕ.ಪ್ರ.ವಾರ್ತೆ ಹಾಸನ ನ. 23
ಜಿಲ್ಲಾಡಳಿತ ಈಗ ಅಡಕತ್ತರಿಯಲ್ಲಿ ಸಿಲುಕಿ ಕೊಂಡಿದೆ. ಎಲ್ಲರಿಗೂ ಗೊತ್ತಿರುವಂತೆ ಚನ್ನರಾಯಪಟ್ಟಣ, ಅರಸೀಕೆರೆ ತಾಲೂಕಿನಲ್ಲಿ ಬರದ ರುದ್ರ ನರ್ತನ ನಡೆಯುತ್ತಿದೆ. ಇದನ್ನು ಗಮನಿಸಿಯೇ ಜಿಲ್ಲಾಡಳಿತ ಅವರೆಡು ತಾಲೂಕುಗಳನ್ನು ಬರದ ಪಟ್ಟಿಯಲ್ಲಿ ಸೇರ್ಪಡೆ ಮಾಡಬೇಕೆಂದು ಮಾಡಿದ ಶಿಫಾರಸ್ಸಿಗೆ ರಾಜ್ಯ ಸರ್ಕಾರ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ.
ಇದರಿಂದ ಜಿಲ್ಲಾಡಳಿತ ಒಂದು ರೀತಿಯಲ್ಲಿ ಅಡಕತ್ತರಿಯಲ್ಲಿ ಸಿಕ್ಕಿಕೊಂಡಂತೆ ಆಗಿದೆ. ಇತ್ತ ಜನರ ವಿರೋಧವನ್ನು ನಿರ್ಲಕ್ಷಿಸುವಂತಿಲ್ಲ. ಅತ್ತ ಸರ್ಕಾರದ ನಿರ್ಧಾರವನ್ನೂ ಪ್ರಶ್ನಿಸುವಂತಿಲ್ಲ ಎಂಬಂತಾಗಿದೆ ಜಿಲ್ಲಾಡಳಿತದ ಸ್ಥಿತಿ.
ರಾಜ್ಯ ಸರ್ಕಾರ ಈ ನಿರ್ಧಾರವನ್ನು ಖಂಡಿಸಿ ಜೆಡಿಎಸ್ ಶಾಸಕರು ಮತ್ತು ಜನತೆ ಕೂಡಾ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಅರಸೀಕೆರೆ ಹಾಗೂ ಚನ್ನರಾಯಪಟ್ಟಣ ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ಒತ್ತಾಯಿಸಿ ಜಿಲ್ಲಾಡಳಿತ ಸರ್ಕಾರಕ್ಕೆ ಮತ್ತೊಂದು ಪತ್ರವನ್ನು ಬರೆದಿದೆ.
ಅರಸೀಕೆರೆ, ಚನ್ನರಾಯಪಟ್ಟಣ ಮತ್ತು ಬೇಲೂರು (ಹಳೇಬೀಡು ಮತ್ತು ಮಾದಿಹಳ್ಳಿ ಹೋಬಳಿ) ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸುವಂತೆ ಕೋರಿ ಜಂಟಿ ಕೃಷಿ ನಿರ್ದೇಶಕರು ವರದಿ ಮಾಡಿದ್ದಾರೆ. ಅದರಂತೆ ಬರಪೀಡಿತ ಪ್ರದೇಶಗಳೆಂದು ಘೋಷಿಸುವಂತೆ ಕೋರಿ ಮುಂದಿನ ಕ್ರಮಕ್ಕಾಗಿ ವರದಿ ನೀಡಲಾಗಿತ್ತು. ನಂತರ ಸರ್ಕಾರದ ಆದೇಶದ ಅನ್ವಯ ಜಿಲ್ಲೆಯ ಬೇಲೂರು ಮತ್ತು ಅರಕಲಗೂಡು ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿದೆ.
ಅರಸೀಕೆರೆ ಹಾಗೂ ಚನ್ನರಾಯಪಟ್ಟಣ ತಾಲೂಕುಗಳನ್ನು ಬರಪೀಡಿತ ಪ್ರದೇಶಗಳ ಪಟ್ಟಿಯಲ್ಲಿ ಕೈಬಿಟ್ಟಿರುವ ಬಗ್ಗೆ ಸಾರ್ವಜನಿಕರಿಂದ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳಿಂದ ತೀವ್ರ ಆಕ್ಷೇಪಣೆ ವ್ಯಕ್ತವಾಗಿದ್ದು, ಬರಪೀಡಿತವೆಂದು ಘೋಷಿಸಲು ತೀವ್ರವಾಗಿ ಒತ್ತಾಯಿಸಿದ್ದಾರೆ. ಕಳೆದ 2 ವರ್ಷಗಳಿಂದ ಜಿಲ್ಲೆಯ ಎಲ್ಲಾ ತಾಲೂಕುಗಳು ಬರಪೀಡಿತವೆಂದು ಘೋಷಣೆಯಾಗಿದೆ.
ಅಲ್ಲದೆ ಜಿಲ್ಲೆಯಲ್ಲಿ ಅರಸೀಕೆರೆ ಹಾಗೂ ಚನ್ನರಾಯಪಟ್ಟಣ ತಾಲೂಕುಗಳ ಅಂತರ್ಜಲ ಮಟ್ಟ ತೀವ್ರ ಕುಸಿದಿದೆ. ಖುಷ್ಕಿ ಪ್ರದೇಶಗಳಲ್ಲಿ ಪೂರ್ವ ಮುಂಗಾರು ಬೆಳೆಗಳಾದ ಹೆಸರು, ಉದ್ದು, ಅಲಸಂದೆ, ಬೆಳೆಗಳು ತೇವಾಂಶ ಕೊರತೆಯಿಂದ ಶೇ.50ಕ್ಕಿಂತ ಹೆಚ್ಚು ಇಳುವರಿ ಕಡಿಮೆಯಾಗಿದೆ. ಮುಂಗಾರು ಹಂಗಾಮಿನ ಪ್ರಮುಖ ಬೆಳೆಗಳಾದ ಮುಸುಕಿನ ಜೋಳ ಮತ್ತು ರಾಗಿ ಬೆಳೆಗಳ ಕಟಾವು ನಡೆಯುತ್ತಿದ್ದು, ಇಳುವರಿ ಸಮೀಕ್ಷೆಯಲ್ಲಿ ಶೇ.30 ರಿಂದ 40ರಷ್ಟು ಕೊರತೆ ಉಂಟಾಗಿದೆ.
ಅಕ್ಟೋಬರ್‌ನಲ್ಲಿ ಜಿಲ್ಲೆಯ ಎಲ್ಲಾ ಹೋಬಳಿಗಳಲ್ಲಿ ಮಳೆ ಕೊರತೆ ಕುಂಡುಬಂದಿದ್ದು, ಜಿಲ್ಲೆಯಲ್ಲಿ ವಾಡಿಕೆ ಮಳೆ 160.2 ಎಂಎಂ ಮಳೆಗೆ 96.6 ಎಂಎಂ ಮಳೆಯಾಗಿದ್ದು, ಜಿಲ್ಲೆಯಲ್ಲಿ ಶೇ.40ರಷ್ಟು ಮಳೆ ಕೊರತೆಯಾಗಿದೆ. ಅರಸೀಕೆರೆ ತಾಲೂಕಿನಲ್ಲಿ ಶೇ.61ರಷ್ಟು, ಬೇಲೂರಿನಲ್ಲಿ ಶೇ.57ರಷ್ಟು, ಆಲೂರಿನಲ್ಲಿ ಶೇ.56ರಷ್ಟು ಹೊಳೆನರಸೀಪುರದಲ್ಲಿ ಶೇ.55ರಷ್ಟು, ಚನ್ನರಾಯಪಟ್ಟಣ ಮತ್ತು ಹಾಸನದಲ್ಲಿ ಶೇ.40ರಷ್ಟು ಮತ್ತು ಅರಕಲಗೂಡಿನಲ್ಲಿ ಶೇ.33ರಷ್ಟು ಕೊರತೆ ಮಳೆಯಾಗಿದೆ.
ನವೆಂಬರ್‌ನಲ್ಲಿ ಸಹ ಮಳೆ ಕೊರತೆ ಮುಂದುವರೆದಿದ್ದು, ಈ ಪ್ರದೇಶಗಳಲ್ಲಿ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುವ ಸಂಭವವಿದೆ. ಕಳೆದ 2 ವರ್ಷದಂತೆ ಈ ವರ್ಷವೂ ಬರ ಪರಿಸ್ಥಿತಿ ಅರಸೀಕೆರೆ ಹಾಗೂ ಚನ್ನರಾಯಪಟ್ಟಣ ತಾಲೂಕುಗಳಲ್ಲಿ ಮುಂದುವರೆದಿದ್ದು, ಈ ಹಿನ್ನೆಲೆಯಲ್ಲಿ ಈ ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ಜಿಲ್ಲಾಡಳಿತ ಸರ್ಕಾರಕ್ಕೆ ಮತ್ತೊಂದು ಪತ್ರವನ್ನು ಬರೆದಿದೆ.