ಬಸ್ಸಿನಲ್ಲಿ ದಿಢೀರ್ ಹೊಗೆ
ಸಿದ್ದಾಪುರ: ಕೇರಳದ ಎರ್ನಾಕುಲಂಗೆ ಹಾಸನದಿಂದ ಹೊರಟಿದ್ದ ಕೆಎ09 ಎಫ್4875 ಕೆಎಸ್ಆರ್ಟಿಸಿ ಎಕ್ಸ್ಪ್ರೆಸ್ ಬಸ್ ಸಿದ್ದಾಪುರಕ್ಕೆ ಬಂದಿದ್ದ ಸಂದರ್ಭದಲ್ಲಿ ಬೆಂಕಿ ಕಾಣಿಸಿಕೊಂಡು ಚಾಲಕನ ಸಮಯಪ್ರಜ್ಞೆಯಿಂದಾಗಿ ಅನಾಹುತ ತಪ್ಪಿತು. ರಾತ್ರಿ 7.30 ಸುಮಾರಿಗೆ ಬಂದು ಸಿದ್ದಾಪುರದಲ್ಲಿದ್ದ ಪ್ರಯಾಣಿಕರನ್ನು ಹತ್ತಿಸಿಕೊಂಡು ಬಸ್ ನಿಲ್ದಾಣದಿಂದ ತೆರಳುತ್ತಿದ್ದ ವೇಳೆ ದಿಢೀರನೆ ಬಸ್ ಚಾಲಕನ ಮುಂದೆ ವೈರ್ ಸರ್ಕ್ಯೂಟ್ ಆಗಿ ಹೊಗೆ ಕಾಣಿಸಿಕೊಂಡಿದೆ. ತಕ್ಷಣ ಸಮಯಪ್ರಜ್ಞೆ ಮೆರೆದ ಚಾಲಕ ನಾಗರಾಜ್, ವೈರನ್ನು ಕೈಯಿಂದ ಕಿತ್ತು ಭಾರಿ ಅನಾಹುತವನ್ನು ತಡೆದರು. ಬಸ್ ರಿಪೇರಿ ಮಾಡಿದ ಬಳಿಕ ಮತ್ತೆ ಎರ್ನಾಕುಲಂ ಕಡೆಗೆ ಪ್ರಯಾಣ ಮುಂದುವರಿಸಿತು.