ಶಾಸಕರ ಅಹೋರಾತ್ರಿ ಧರಣಿ ಅಂತ್ಯ
ಕ.ಪ್ರ.ವಾರ್ತೆ ಚನ್ನರಾಯಪಟ್ಟಣ ನ.23
ತಾಲೂಕನ್ನು ಬರಪೀಡಿತ ಪ್ರದೇಶವೆಂದು ರಾಜ್ಯ ಸರ್ಕಾರ ಘೋಷಣೆ ಮಾಡದಿರುವುದನ್ನು ಖಂಡಿಸಿ ಶಾಸಕ ಸಿ.ಎನ್.ಬಾಲಕೃಷ್ಣ ಪಟ್ಟಣದ ಮಿನಿ ವಿಧಾನಸೌಧದ ಎದುರು ನಡೆಸುತ್ತಿದ್ದ ಅಹೋ ರಾತ್ರಿ ಧರಣಿಯನ್ನು ಶನಿವಾರ ಬೆಳಗ್ಗೆ ಅಂತ್ಯಗೊಳಿಸಿದರು.
ಶಾಸಕ ಬಾಲಕೃಷ್ಣ ಅವರು ಬೆಳಗಾವಿ ಅಧಿವೇಶನಕ್ಕೆ ತೆರಳಲು ತಾವು ಸಿದ್ಧತೆ ನಡೆಸುತ್ತಿದ್ದು ಆಹೋರಾತ್ರಿ ಧರಣಿಯನ್ನು ಅಂತ್ಯಗೊಳಿಸಿ ಸರ್ಕಾರ ಬೆಳಗಾವಿ ಅಧಿವೇಶನದ ಹಿಂದಿನ ದಿನವಾದರೂ ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡುವಂತೆ ಆಗ್ರಹಿಸಿ ತಹಸೀಲ್ದಾರ್ ಡಾ. ನಾಗರಾಜು ಅವರಿಗೆ ಮನವಿ ಸಲ್ಲಿಸಿ ಧರಣಿ ಅಂತ್ಯಗೊಳಿಸಿದರು.
ತಣ್ಣನೆಯ ಚಳಿಯಲ್ಲಿ ಅಹೋರಾತ್ರಿ ಧರಣಿ ಕುಳಿತಿದ್ದ ಬಾಲಕೃಷ್ಣ ಹಾಗೂ ಅವರ ಬೆಂಬಲಿಗರು ನಿದ್ರೆಗೆ ಜಾರದಂತೆ ಲೋಕೇಶ್ ದಾಸ್ ಅವರು ಹರಿಕಥೆ ನಡೆಸಿಕೊಟ್ಟರು. ಮಧ್ಯ ರಾತ್ರಿಯಿಂದ ಬೆಳಗಿನ ಮೂರು ಗಂಟೆಯವರೆಗೆ ಸರ್ಕಾರದ ಬಗ್ಗೆ ಹಾಸ್ಯ ಚಟಾಕಿಗಳನ್ನು ಹೇಳುವ ಮುಖೇನ ಸರ್ಕಾರವನ್ನು ಎಚ್ಚರಿಸಿದರು. ಅಹೋ ರಾತ್ರಿ ಧರಣಿಯನ್ನು ಅಂತ್ಯಗೊಳಿಸಿದ ಸಂದರ್ಭದಲ್ಲಿ ಶಾಸಕರು ಮಾತನಾಡಿ ರಾಜ್ಯ ಸರ್ಕಾರ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡುವಂತೆ ಒತ್ತಾಯಿಸಿ ಬೆಳಗಾವಿ ಅಧಿವೇಶನದಲ್ಲಿ ಚರ್ಚೆ ನಡೆಸಲಾಗುವುದು. ಈ ನಿಟ್ಟಿನಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.
ರಾಜ್ಯ ಸರ್ಕಾರ ಸಮಿತಿ ರಚಿಸಿ ತಾಲೂಕಿನಲ್ಲಿ ಅಧ್ಯಯನ ಕೈಗೊಂಡು ನೈಜ ಸ್ಥಿತಿಯನ್ನು ತಮ್ಮ ಗೈರಿನಲ್ಲಿಯೇ ತಿಳಿಯಲಿ. ಸಮಿತಿ ತಾಲೂಕಿನಲ್ಲಿ ಬರವಿಲ್ಲ ಎಂದು ವರದಿ ನೀಡಿದರೆ, ತಾವು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡುವಂತೆ ಒತ್ತಾಯಿಸುವುದಿಲ್ಲ ಎಂದು ಹೇಳಿದರು. ನವೆಂಬರ್ನಲ್ಲಿ ಅಲ್ಪ ಸ್ವಲ್ಪ ಮಳೆ ಬೀಳುವ ತಿಂಗಳಾಗಿದ್ದು, ಈ ತಿಂಗಳಲ್ಲಿಯೇ ತಾಲೂಕಿನಲ್ಲಿ 50 ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಕಾಣಿಸಿಕೊಂಡಿದೆ. ಫೆಬ್ರವರಿ ನಂತರದಲ್ಲಿ ತಾವು ಬರಗಾಲವನ್ನು ಯಾವ ರೀತಿ ಎದುರಿಸುವುದು ತಿಳಿಯದಾಗಿದೆ ಎಂದು ನುಡಿದರು.
ಅಧಿವೇಶನದಲ್ಲಿ ಘೋಷಣೆ ಮಾಡಿದರೆ ಮಾಡಲಿ, ಇಲ್ಲದಿದ್ದರೆ ತಮ್ಮ ಧರಣಿ ಚಳವಳಿ ವಿವಿಧ ರೀತಿಯಲ್ಲಿ ಜರುಗಲಿದ್ದು, ಸರ್ಕಾರದ ತಾರತಮ್ಯ ನೀತಿಯನ್ನು ಜನತೆಯ ಮುಂದಿಡುವುದೇ ತಮ್ಮ ಕೆಲಸವಾಗಿದೆ ಎಂದರು.
ತಾಲೂಕಿನಲ್ಲಿ 4 ಲಕ್ಷ ತೆಂಗಿನ ಮರಗಳಲ್ಲಿ ಸುಳಿ ಒಣಗಿ ಹೋಗಿದ್ದು, ಮುಂದಿನ ಬೇಸಿಗೆಯಲ್ಲಿ ನೀರಿಲ್ಲದೆ ಮತ್ತಷ್ಟು ಹೆಚ್ಚಲಿದ್ದು, ರಾಗಿ ಇಳುವರಿ ಶೇ.30 ರಷ್ಟು ಮಾತ್ರ ಸಿಗಲಿದೆ. ರೈತರು ತಮ್ಮ ಜೀವನ ಸಾಗಿಸಲು ಸರ್ಕಾರ ಬರಪೀಡಿತ ಪ್ರದೇಶವಂದು ಘೋಷಣೆ ಮಾಡುವುದರ ಜತೆಗೆ ಹಲವು ಯೋಜನೆಗಳನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದರು. ಕೃಷಿ ಸಚಿವರೇ ಖುದ್ದಾಗಿ ತಮ್ಮ ತಾಲೂಕಿಗೆ ಭೇಟಿ ನೀಡಿ ಯಾವ ಗ್ರಾಮಕ್ಕಾದರೂ ತೆರಳಿ ಅಲ್ಲಿಯ ಜನತೆಯ ಅಭಿಪ್ರಾಯವನ್ನು ಸಂಗ್ರಹಿಸಲಿ ಅದನ್ನು ಮರೆತು ದ್ವೇಷದ ರಾಜಕಾರಣ ಮಾಡಿ ತಾಲೂಕಿನ ಜನತೆಯನ್ನು ಬಲಿಪಶು ಮಾಡುವತ್ತಾ ಮುಂದಾಗಬೇಡಿ ಎಂದು ಕೋರಿದರು.
ಜಿಪಂ ಸದಸ್ಯ ಶಿವಶಂಕರ್ಕುಂಠೆ, ಪುರಸಭಾಧ್ಯಕ್ಷ ಮಂಜಣ್ಣ, ತಾಲೂಕು ಜೆಡಿಎಸ್ ಅಧ್ಯಕ್ಷ ಪರಮ ದೇವರಾಜೇಗೌಡ, ತಾಪಂ ಮಾಜಿ ಅಧ್ಯಕ್ಷ ಶ್ರೀಧರ್, ಸದಸ್ಯ ಬಸವರಾಜು, ಮಾಜಿ ಸದಸ್ಯ ಪುಟ್ಟಸ್ವಾಮಿ, ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಂಜುನಾಥ್, ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ತಿಮ್ಮೇಗೌಡ, ದೊರೆಸ್ವಾಮಿ ಇತರರು ಇದ್ದರು.