ಸ್ವಚ್ಛತೆಯಿಲ್ಲದ ಎಪಿಎಂಸಿ ಆವರಣ
ಕ.ಪ್ರ.ವಾರ್ತೆ ಅರಸೀಕೆರೆ ನ. 23
ಪಟ್ಟಣದ ಎಪಿಎಂಸಿ ಆವರಣದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡದ ಕಾರಣ ಸಗಟು ತರಕಾರಿ ಮಾರುಕಟ್ಟೆಯಲ್ಲಿ ಕಸದ ರಾಶಿ ರಾಶಿಯಾಗಿ ಬಿದ್ದು ಕೊಳೆತು ನಾರುತ್ತಿದ್ದರೆ ಲಕ್ಷಾಂತರ ರು.ವೆಚ್ಚದಲ್ಲಿ ರೈತರ ಅನುಕೂಲಕ್ಕಾಗಿ ನಿರ್ಮಿಸಿದ ಶೌಚಾಲಯ ಬಳಕೆಗೆ ಬಾರದೆ ಬೀಗ ಹಾಕಿಕೊಂಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಸಗಟು ತರಕಾರಿ ಮಾರುಕಟ್ಟೆಗೆ ದಿನನಿತ್ಯ ನೂರಾರು ರೈತರು ತಾವು ಬೆಳೆದ ಉತ್ಪನ್ನಗಳನ್ನು ಮಾರಾಟ ಮಾಡಲು ಬರುತ್ತಿದ್ದು ಅಲ್ಲಿ ರೈತರು ಹಾಗೂ ವರ್ತಕರು ಕೊಳೆತ ತರಕಾರಿ ಇನ್ನಿತರ ತ್ಯಾಜ್ಯಗಳನ್ನು ರಸ್ತೆಯ ಪಕ್ಕದಲ್ಲೇ ಹಾಕುತ್ತಿದ್ದು ಇಲ್ಲಿ ಸ್ವಚ್ಛತೆಗೆ ಆದ್ಯತೆ ಕೊಡದ ಕಾರಣ ಅದು ಅಲ್ಲಿಯೇ ಕೊಳೆತು ನಾರುತ್ತಾ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಮೂಡಿಸಿದೆ.
ಅಲ್ಲದೇ ರೈತರು, ವರ್ತಕರು ಹಾಗೂ ಕೂಲಿ ಕಾರ್ಮಿಕರಿಗೆ ಅನುಕೂಲವಾಗಲೆಂದು ಕೃಷಿ ಉತ್ಪನ್ನ ಮಾರುಕಟ್ಟೆಯ ಆವರಣದಲ್ಲಿ ನಿರ್ಮಿಸಿರುವ ಶೌಚಾಲಯ ಹತ್ತಾರು ವರ್ಷಗಳಾದರೂ ಅದನ್ನು ಜನರ ಬಳಕೆಗೆ ಉಪಯೋಗಿಸದೆ ಬೀಗ ಹಾಕಿರುವುದರಿಂದ ಮಾರುಕಟ್ಟೆಗೆ ಬರುವ ರೈತರು ವ್ಯಾಪಾರಸ್ಥರು, ಕೂಲಿ ಕಾರ್ಮಿಕರು, ಸಾರ್ವಜನಿಕರು ಬಯಲಿನಲ್ಲಿಯೇ ಮಲಮೂತ್ರ ವಿಸರ್ಜನೆ ಮಾಡುವ ಸ್ಥಿತಿ ನಿರ್ಮಾಣಗೊಂಡಿದೆ.
ಸರ್ಕಾರ ಲಕ್ಷಾಂತರ ರು.ಗಳ ವೆಚ್ಚದಲ್ಲಿ ರೈತರ ಅನುಕೂಲಕ್ಕಾಗಿ ನಿರ್ಮಿಸಿರುವ ಶೌಚಾಲಯ ಹಾಗೂ ಸ್ನಾನ ಗೃಹಗಳು ಬಳಕೆಗೆ ಬಾರದೆ ಧೂಳು ಹಿಡಿದು ಕುಳಿತಿದ್ದರೂ ವ್ಯಾಪಾರ ವಹಿವಾಟಿಗಾಗಿ ಹತ್ತಾರು ಕಿ.ಮೀ.ಗಳಿಂದ ಆಗಮಿಸುವ ರೈತರು, ವರ್ತಕರು ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆಯ ಆವರಣದಲ್ಲಿ ಕಾರ್ಯನಿರ್ವಹಿಸುವ ಕೂಲಿ ಕಾರ್ಮಿಕರಿಗೆ ಶೌಚಾಲಯದ ಅಗತ್ಯವನ್ನು ಮನಗಂಡು ಸರ್ಕಾರ ಅನುಕೂಲ ಕಲ್ಪಿಸಿದೆ. ಆದರೆ ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಶೌಚಾಲಯ ಇದ್ದು ಇಲ್ಲದಂತಹ ಸ್ಥಿತಿ ಉದ್ಭವಿಸಿರುವುದು ದುರದುಷ್ಟಕರ ಸಂಗತಿ.
ಇನ್ನಾದರೂ ಜನಪ್ರತಿನಿಧಿಗಳು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧಿಕಾರಿಗಳು ಇತ್ತ ಗಮನ ಹರಿಸಿ ಬಳಕೆಗೆ ಅವಕಾಶ ಕಲ್ಪಿಸಬೇಕೆಂದು ಕಾರ್ಮಿಕರು ಆಗ್ರಹಿಸಿದ್ದಾರೆ.