ಇಂದಿನಿಂದ ರಾಜ್ಯ ಮಟ್ಟದ ಅಥ್ಲೆಟಿಕ್ಸ್
ಹಾಸನ: ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ 14 ವರ್ಷದೊಳಗಿನ ಬಾಲಕ ಬಾಲಕಿಯರ ರಾಜ್ಯ ಮಟ್ಟದ ಅಥ್ಲೆಟಿಕ್ಸ್ ನ.25 ಮತ್ತು 26ರಂದು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ನ.25ರಂದು ಬೆಳಗ್ಗೆ 9.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ.ಮಹದೇವಪ್ಪ ಕ್ರೀಡಾಕೂಟ ಉದ್ಘಾಟಿಸಲಿದ್ದಾರೆ. ಹಾಸನ ಕ್ಷೇತ್ರದ ಶಾಸಕ ಎಚ್.ಎಸ್.ಪ್ರಕಾಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಪಂ ಅಧ್ಯಕ್ಷೆ ಅಂಬಿಕಾ ರಾಮಣ್ಣ ಕ್ರೀಡಾ ಧ್ವಜಾರೋಹಣ ಮಾಡಲಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಚಿವ ರೇವಣ್ಣ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಪರ್ತಕರ್ತರಿಂದ ಲೇಖನ ಆಹ್ವಾನ
ಹಾಸನ: ಬೆಂಗಳೂರಿನ ಅಭಿಮಾನಿ ಪ್ರಕಾಶನ ಸಂಸ್ಥೆಯು ಕರ್ನಾಟಕ ಮಾಧ್ಯಮ ಅಕಾಡೆಮಿಯಲ್ಲಿ ರಾಜ್ಯ ಮತ್ತು ಜಿಲ್ಲಾ ಮಟ್ಟದ ಕನ್ನಡ ಪತ್ರಿಕೆಗಳಲ್ಲಿ ಸಾಮಾಜಿಕ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪ್ರತಿಬಿಂಬಿಸುವ ಲೇಖನ-ವರದಿಗಳನ್ನು ಬರೆದ ಪತ್ರಕರ್ತರಿಗೆ ಪ್ರತಿ ವರ್ಷ 10 ಸಾವಿರ ನಗದು, ಪ್ರಶಸ್ತಿ ನೀಡಲು 1 ಲಕ್ಷ ದತ್ತಿ ಸ್ಥಾಪಿಸಿದೆ. 2012 ಮತ್ತು 2013ನೇ ಸಾಲಿನ ಪ್ರಶಸ್ತಿಗಾಗಿ, ಆ ಸಾಲಿನಲ್ಲಿ ಪ್ರಕಟವಾಗಿರುವ ಸಾಮಾಜಿಕ ಸಮಸ್ಯೆಗಳನ್ನು ಪ್ರತಿಬಿಂಬಿಸುವ ಲೇಖನ-ವರದಿಗಳನ್ನು ಎರಡು ವರ್ಷದ ಪ್ರಶಸ್ತಿಗಳಿಗಾಗಿ ಅರ್ಜಿ ಆಹ್ವಾನಿಸಿದೆ. ತಮ್ಮ ಸ್ವವಿವರಗಳನ್ನು ಬಿಳಿ ಹಾಳೆಯಲ್ಲಿ ಬರೆದು ಅಭಿಮಾನಿ ಪ್ರಶಸ್ತಿ-2012, ಅಭಿಮಾನಿ ಪ್ರಶಸ್ತಿ-2013 ಎಂದು ಪ್ರತ್ಯೇಕವಾಗಿ ವರ್ಷವನ್ನು ದಾಖಲಿಸಿ, ಆಯಾ ವರ್ಷದ ಅವಧಿಗೆ ಒಂದು ಲೇಖನ ಮಾತ್ರ ಕಳುಹಿಸಬೇಕು. ಕನ್ನಡ ದೈನಿಕ-ವಾರ ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪತ್ರಕರ್ತರು ಬರೆದಿರುವ ವರದಿ, ಲೇಖನಗಳಿಗೆ ಮಾತ್ರ ಪ್ರಶಸ್ತಿಗೆ ಅವಕಾಶ. ಲೇಖನ-ವರದಿಗಳಲ್ಲಿ ಹೆಸರು ಪ್ರಕಟವಾಗದಿದ್ದಲ್ಲಿ ಸಂಬಂಧಿಸಿದ ಪತ್ರಿಕೆಯ ಸಂಪಾದಕರಿಂದ ದೃಢೀಕರಣ ಪತ್ರ ಪಡೆದು ಕಳುಹಿಸಬೇಕು. ಲೇಖನ-ವರದಿಗಳನ್ನು ನ.25ರ ಒಳಗಾಗಿ ಕಾರ್ಯದರ್ಶಿ, ಕರ್ನಾಟಕ ಮಾಧ್ಯಮ ಅಕಾಡೆಮಿ, ಪೋಡಿಯಂ ಬ್ಲಾಕ್, ವಿಶ್ವೇಶ್ವರಯ್ಯ ಕೇಂದ್ರ, ಡಾ. ಬಿ.ಆರ್.ಅಂಬೇಡ್ಕರ್ ಬೀದಿ, ಬೆಂಗಳೂರು-560001 ಇವರಿಗೆ ಕಳುಹಿಸುವಂತೆ ಕರ್ನಾಟಕ ಮಾಧ್ಯಮ ಅಕಾಡೆಮಿ ಕಾರ್ಯದರ್ಶಿ ಎಸ್. ಶಂಕರಪ್ಪ ಕೋರಿದ್ದಾರೆ.
ಹೋರಾಟಗಾರರ ಬಗ್ಗೆ ಮಾಹಿತಿ ನೀಡಿ
ಹಾಸನ: ಜಿಲ್ಲೆಯ ಸ್ವಾತಂತ್ರ್ಯ ಚಳವಳಿಯಲ್ಲಿ ಜಿಲ್ಲೆಯ ಹೋರಾಟಗಾರರ ಪಾತ್ರ ಮತ್ತು ಜಿಲ್ಲೆಯಲ್ಲಿ ಹಾಲಿ ಬದುಕುಳಿದಿದರುವ ಸ್ವಾತಂತ್ರ್ಯ ಹೋರಾಟಗಾರರ ವ್ಯಕ್ತಿ ಪರಿಚಯವನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಹೊರತರಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬದುಕುಳಿದಿರುವ ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಸ್ವವಿವರಗಳನ್ನು ಹಾಗೂ ಈಗಾಗಲೇ ಮೃತಪಟ್ಟಿರುವ ಹೋರಾಟಗಾರರ ಬಗ್ಗೆ ಅವರ ಕುಟುಂಬ ವರ್ಗ ಅಥವಾ ಸ್ನೇಹಿತರು ವಿವರ ಒದಗಿಸಿ ಪುಸ್ತಕ ರೂಪದಲ್ಲಿ ದಾಖಲಿಸಲು ಸಹಕರಿಸಲು ಕೋರಲಾಗಿದೆ. ವಿವರ ಒದಗಿಸುವಾಗ ಜನ್ಮ ದಿನಾಂಕ, ಶಿಕ್ಷಣ, ಯಾವ ಯಾವ ಚಳವಳಿಗಳಲ್ಲಿ ಪಾಲ್ಗೊಂಡಿದ್ದರು ಎಂಬುದರ ಬಗ್ಗೆ ಮಾಹಿತಿ ಹಾಗೂ ಸರ್ಕಾರದಿಂದ ನೀಡಲಾಗುತ್ತಿರುವ ಮಾಸಿಕ ಪಿಂಚಣಿ ಬಗೆಗಿನ ದಾಖಲೆಯ ಪ್ರತಿಯನ್ನು ಲಗತ್ತಿಸಲು ಕೋರಿದೆ. ಎಚ್.ಎಂ.ಶಿವಣ್ಣ, ಸ್ವಾತಂತ್ರ್ಯ ಹೋರಾಟಗಾರರು, 6539/1, ಶಂಕರಮಠ ರಸ್ತೆ, ಕೆ.ಆರ್.ಪುರಂ, ಹಾಸನ ಇವರ ವಿಳಾಸಕ್ಕೆ ಕಳುಹಿಸಬೇಕೆಂದು ಸ್ವಾತಂತ್ರ್ಯ ಹೋರಾಟಗಾರರ ಸಂಘದ ಕಾರ್ಯಾಧ್ಯಕ್ಷ ಎಚ್.ಎಂ.ಶಿವಣ್ಣ ಮನವಿ ಮಾಡಿದ್ದಾರೆ.
ಗರುಡಗಂಬ ಪ್ರತಿಷ್ಠಾಪನೆ
ಚನ್ನರಾಯಪಟ್ಟಣ: ಪಟ್ಟಣದ ಐತಿಹಾಸಿಕ ಶ್ರೀ ಚನ್ನಕೇಶವ ದೇವಾಲಯದಲ್ಲಿ ಧ್ವಜಸ್ತಂಬ, ಗರುಡಗಂಬ ಪ್ರತಿಷ್ಠಾಪನೆ ಹಾಗೂ ವಾರ್ಷಿಕೋತ್ಸವ ಧಾರ್ಮಿಕ ಕಾರ್ಯಕ್ರಮ ಶ್ರದ್ಧಾ ಭಕ್ತಿಯಿಂದ ನಡೆಯಿತು. ದೇವರ ಅಭಿವೃದ್ಧಿ ಸಮಿತಿ ವತಿಯಿಂದ ದೇವರಿಗೆ ಅಭಿಷೇಕ, ಹೋಮ ನೆರವೇರಿಸಲಾಯಿತು. ನಂತರ ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿನಿಯೋಗ ನಡೆಯಿತು. ಅನೇಕ ಗಣ್ಯರಿಗೆ ದೇವಾಲಯ ಜೀರ್ಣೋದ್ಧಾರ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.