ಕೊಬ್ಬರಿ ಬೆಲೆ ಏರಿಕೆ; ಗುಣಮಟ್ಟ ಇಳಿಕೆ
-ಪಿ.ಶಾಂತಕುಮಾರ್
ಅರಸೀಕೆರೆ: ಸತತ ಮಳೆಯ ಅಭಾವದಿಂದ ಸುಳಿ ಬಿದ್ದು ನಾಶವಾಗಿ ತೆಂಗು ಬೆಳೆಗಾರರು ಆರ್ಥಿಕ ಸಂಕಷ್ಟಕ್ಕೆ ಈಡಾಗಿರುವ ಸಂದರ್ಭದಲ್ಲಿ ಪಟ್ಟಣದ ಕೃಷಿ ನಿಯಂತ್ರಣ ಮಾರುಕಟ್ಟೆಯಲ್ಲಿ ಕೊಬ್ಬರಿ ಧಾರಣೆ ತೀವ್ರ ಏರಿಕೆ ಕಂಡಿದೆ.
ಮಂಗಳವಾರದ ಮಾರುಕಟ್ಟೆಯಲ್ಲಿ ಕೊಬ್ಬರಿ ಪ್ರತಿ ಕ್ವಿಂಟಲ್‌ಗೆ 7700 ದಿಂದ 7750ರವರೆಗೆ ಮಾರಾಟವಾಗಿದ್ದು, 8 ಸಾವಿರ ಗಡಿ ದಾಟುವ ಎಲ್ಲ ಲಕ್ಷಣಗಳು ಕಂಡುಬರುತ್ತಿವೆ. ಬೆಂಬಲ ಬೆಲೆ ಮೀರಿ ಕೊಬ್ಬರಿ ಧಾರಣೆ ಏರಿಕೆಯಾಗುತ್ತಿದ್ದರೂ, ಸುಳಿ ನುಸಿಪೀಡೆ ರೋಗದಿಂದ ತೆಂಗು ಇಳವರಿಯಲ್ಲಿ ಕಷ್ಟ ನಷ್ಟ ಹೊಂದಿರುವ ತಾಲೂಕಿನ ರೈತರು ಮುಂಚಿನಂತೆ ಸಮರ್ಪಕ ಪ್ರಮಾಣದಲ್ಲಿ ಮಾರುಕಟ್ಟೆಗೆ ಕೊಬ್ಬರಿ ಪೂರೈಸಲಾಗದ ಅಸಹಾಯಕತೆಯಲ್ಲಿದ್ದಾರೆ.
ಈ ಹಿಂದೆ 4500-5000ದವರೆಗೆ ಕೊಬ್ಬರಿ ಮಾರಾಟವಾಗುತ್ತಿದ್ದರಿಂದ ತೆಂಗು ಬೆಳೆಗಾರರ ಹಿತ ಕಾಪಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕ್ವಿಂಟಲ್ ಕೊಬ್ಬರಿಗೆ ನೀಡುವ 5500ಕ್ಕೆ ರಾಜ್ಯ ಸರ್ಕಾರ ಪೋತ್ಸಾಹದ ಹೆಸರಿನಲ್ಲಿ ನಫೆಡ್ ಮೂಲಕ 1000 ನೀಡಿ ಒಟ್ಟು 6500ಕ್ಕೆ ಕೊಬ್ಬರಿ ಖರೀದಿಸಿತ್ತು. ಇದರಿಂದಾಗಿ ರೈತರು ತಮ್ಮ ಬಳಿ ಇದ್ದಬದ್ದ ಕೊಬ್ಬರಿಯನ್ನೆಲ್ಲ ನ್ಯಾಫೆಡ್‌ಗೆ ಮಾರಿ ಕೈ ತೊಳೆದುಕೊಂಡರು.
ಬೆಂಬಲ ಬೆಲೆಗೆ ಕೊಬ್ಬರಿ ಖರೀದಿ ಸ್ಥಗಿತಗೊಂಡ ನಂತರ ಕ್ರಮೇಣ ಮಾರುಕಟ್ಟೆಗೆ ಬರುವ ಕೊಬ್ಬರಿ ಕಡಿಮೆಯಾದ ಹಿನ್ನೆಲೆಯಲ್ಲಿ ಧಾರಣೆ ಚೇತೋಹಾರಿ ಏರಿಕೆ ಕಂಡಿದೆ. ಈ ಮುಂಚೆ 550-600 ಕೊಬ್ಬರಿ ಒಂದು ಕ್ವಿಂಟಲ್ ತೂಕ ತೂಗುತ್ತಿತ್ತು. ನಾನಾ ರೋಗಗಳು ತಗುಲಿದ ನಂತರ ತಾಲೂಕಿನ ಪ್ರಮುಖ ವಾಣಿಜ್ಯ ಬೆಳೆಯೆನಿಸಿರುವ ತೆಂಗು ಕಡಿಮೆ ಇಳವರಿ ಜೊತೆಗೆ ಕೊಬ್ಬರಿ ಗಾತ್ರ ಹಾಗೂ ತೂಕದಲ್ಲಿ ಭಾರಿ ಇಳಿಕೆ ಕಂಡುಬರುತ್ತಿದೆ. ಪ್ರಸ್ತುತ 700ರಿಂದ 1000 ಕೊಬ್ಬರಿಗೆ ಒಂದು ಕ್ವಿಂಟಲ್ ಕೊಬ್ಬರಿ ತೂಗುತ್ತಿದೆ ಎಂಬುದು ರೈತರ ಅಳಲಾಗಿದೆ. ಕಳೆದ ಕೆಲವಾರು ತಿಂಗಳಿಂದ 4800ರಿಂದ 5000ದ ಆಸುಪಾಸಿನಲ್ಲಿದ್ದ ಕೊಬ್ಬರಿ ಧಾರಣೆ ಮಂಗಳವಾರ ಕ್ವಿಂಟಲ್ ಕೊಬ್ಬರಿಗೆ 7700-7750ಕ್ಕೆ ಏರಿಕೆ ಕಂಡಿದ್ದು ಇದು ಇನ್ನೂ ಏರುವ ಸಾಧ್ಯತೆ ಇದೆ. ಕೊಬ್ಬರಿ ಬೆಲೆ ಈ ಪರಿ ಏರಿಕೆ ಕಂಡಿರುವುದು ಈಗಾಗಲೇ ನಫೆಡ್‌ಗೆ ಕೊಬ್ಬರಿ ಮಾರಾಟ ಮಾಡಿದವರಿಗೆ ತೀವ್ರ ನಿರಾಸೆ ಉಂಟುಮಾಡಿದೆ.
ತೆಂಗು ಬೆಳೆಗಾರರ ಹಿತ ಕಾಯಬೇಕೆಂಬ ಆಶಯ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಇದ್ದರೆ ಕನಿಷ್ಠ 8000 ಆದರೂ ಬೆಂಬಲ ಬೆಲೆ ನಿಗದಿಪಡಿಸಬೇಕು. ಆಗ ಮಾತ್ರ ಮಾರುಕಟ್ಟೆಯಲ್ಲಿ ಕೊಬ್ಬರಿಯ ಬೆಲೆ ಮೇಲೆ ನಿಯಂತ್ರಣ ಸಾಧಿಸಲು ಸಾಧ್ಯವಾಗುತ್ತದೆ ಎಂಬುದು ರೈತರ ಒತ್ತಾಯವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಗಂಭೀರ ಚಿಂತನೆ ನಡೆಸಬೇಕಿದೆ.