ಬಚಾವ್ ಆಗಲು ಮಕ್ನಾದೊಂದಿಗೆ ಸಲಗ ಸಲುಗೆ
-ಪಿ.ರವಿಕುಮಾರ್
ಹಾಸನ: ಮಕ್ನಾ ಹೆಸರಿನ ಪುಂಡಾನೆ ಮತ್ತು ಸಲಗ ಜೊತೆಯಾಗಿರುವುದರಿಂದ ಆನೆ ಸೆರೆ ಕಾರ್ಯಾಚರಣೆ ಅರಣ್ಯಾಧಿಕಾರಿಗಳು ಹಾಗೂ ಸಾಕು ಆನೆಗಳಿಗೆ ತಲೆನೋವಾಗಿ ಪರಿಣಮಿಸಿದೆ.
ಜಿಲ್ಲೆಯಲ್ಲಿ ಮಾನವ ಹತ್ಯೆ ಹಾಗೂ ಬೆಳೆ ಹಾನಿಯಲ್ಲಿ ತೊಡಗಿರುವ ಮಕ್ನಾ ಹೆಸರಿನ ಪುಂಡಾನೆ ಹಾಗೂ ಸಕಲೇಶಪುರ ತಾಲೂಕಿನ ರಾಜೇಂದ್ರಪುರದಲ್ಲಿ ಇತ್ತೀಚೆಗಷ್ಟೇ ವ್ಯಕ್ತಿಯನ್ನು ಬಲಿ ತೆಗೆದುಕೊಂಡ ಸಲಗದ ಸೆರೆ ಕಾರ್ಯಾಚರಣೆಯು ಅಧಿಕಾರಿಗಳು ಹಾಗೂ ಸಾಕು ಆನೆಗಳನ್ನು ಅಕ್ಷರಶಃ ಹೈರಾಣಾಗಿಸಿದೆ. ಮೂರು ದಿನ ಕಳೆದ್ರೂ ಸೆರೆ ಸಿಕ್ಕದ ಮಕ್ನಾ ಮತ್ತು ಸಲಗ ಆನೆಗಳು, ಹಾಸನ-ಕೊಡಗು ಜಿಲ್ಲೆಗಳ ಅರಣ್ಯದಲ್ಲಿ ವೇಗವಾಗಿ ಓಡಾಡಿ ಕಣ್ಣಾಮುಚ್ಚಾಲೆ ಆಡುತ್ತಿವೆ.
ಮೂರು ದಿನಗಳಿಂದ ಮಲೆನಾಡು ಭಾಗದಲ್ಲಿರುವ ಎಲ್ಲ ಕಾಡಾನೆ ಸೆರೆ ಕಾರ್ಯಾಚರಣೆ ಆರಂಭಿಸಲಾಗಿದೆ. ವಾರದ ಅಂತರದಲ್ಲಿ ಇಬ್ಬರು ಅಮಾಯಕರನ್ನು ಹತ್ಯೆ ಮಾಡಿರುವ ಸಲಗ ಹಾಗೂ ಮಕ್ನಾ ಪುಂಡಾನೆಯನ್ನು ಸೆರೆ ಹಿಡಿಯಬೇಕು ಅನ್ನೋ ಒತ್ತಡದ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳ ದೊಡ್ಡ ತಂಡವೇ, ಪಳಗಿದ ಗಜಪಡೆ ಹಾಗೂ ಶಸ್ತ್ರಾಸ್ತ್ರಗಳೊಂದಿಗೆ ಅರಣ್ಯದಲ್ಲಿ ಬೀಡು ಬಿಟ್ಟಿದೆ.
ಆದರೆ ಒಮ್ಮೆ ಒಂದೇ ಕಾಣಿಸಿಕೊಳ್ಳುವ ಒಂಟಿ ಸಲಗ ಹಾಗೂ ಮಕ್ನಾ ಆನೆ, ಮತ್ತೊಮ್ಮೆ ಬೇರೆಡೆಗೆ ವೇಗವಾಗಿ ಸಂಚರಿಸುತ್ತಿದ್ದು, ಬೆನ್ನಟ್ಟಿ ಹೋದ್ರೂ ಅರವಳಿಕೆ ಚುಚ್ಚುಮದ್ದು ನೀಡಲು ಆಗುತ್ತಿಲ್ಲ.
ಹೆಣ್ಣು-ಗಂಡು ಎರಡೂ ಲಕ್ಷಣದ ಆನೆ: ಹೆಣ್ಣು-ಗಂಡು ಎರಡೂ ಗುಣ ಲಕ್ಷಣ ಇರುವ, ಕೋರೆ ಇಲ್ಲದ ಈ ಮಕ್ನಾ ಆನೆ, ದೈಹಿಕವಾಗಿ ಸಾಕಷ್ಟು ಬಲಿಷ್ಠವಾಗಿದೆ. ಹೀಗಾಗಿಯೇ ಸುಮಾರು 25 ವರ್ಷದ ಮಕ್ನಾ ಆನೆ, ಅರಣ್ಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಪಳಗಿದ ಆನೆ ಹಿಂಡು ಕಂಡ ತಕ್ಷಣವೇ ಜಾಗ ಬದಲಿಸಿ ಚಳ್ಳೆ ಹಣ್ಣು ತಿನ್ನಿಸುತ್ತಿದೆ. ಆದರೂ ಶ್ರಮ ಮುಂದುವರೆಸಿರುವ ಹಂಟಿಂಗ್ ಟೀಂ, ಶೀಘ್ರವೇ ದಾಂಧಲೆ ನಡೆಸುತ್ತಿರುವ ಮಕ್ನಾ ಆನೆ ಸೆರೆ ಹಿಡಿದು ಬೇರೆಡೆಗೆ ಸಾಗ ಹಾಕುವ ವಿಶ್ವಾಸ ವ್ಯಕ್ತಪಡಿಸಿದೆ.
ಮಲೆನಾಡು ಭಾಗದಲ್ಲಿ ಇರುವ ಎಲ್ಲ ಆನೆಗಳನ್ನು ಹಿಡಿಯಬೇಕೆಂಬ ಹೈಕೋರ್ಟ್ ನಿರ್ದೇಶನದ ಮೇರೆಗೆ ರಾಜ್ಯ ಸರ್ಕಾರ ಇದಕ್ಕೆ ಅನುಮತಿ ನೀಡಿದೆ. ಆದರೆ ಆನೆ ಹಿಡಿಯುವ ಪ್ರಥಮ ಆಪರೇಷನ್ ವಿಳಂಬವಾಗಿರುವುದು ಟೀಂ ಉತ್ಸಾಹವನ್ನು ಕುಗ್ಗಿಸಿದೆ.
ಮಕ್ನಾದೊಂದಿಗೆ ಫ್ರೆಂಡ್ಶಿಪ್ ಬೆಳೆಸಿದ ಸಲಗ: ಸಕಲೇಶಪುರ ತಾಲೂಕಿನ ರಾಜೇಂದ್ರಪುರದ ವ್ಯಕ್ತಿಯೊಬ್ಬನನ್ನು ಒಂದು ವಾರದ ಹಿಂದೆ ಹತ್ಯೆ ಮಾಡಿದ ಸಲಗ ತಮ್ಮನ್ನು ಅರಣ್ಯ ಇಲಾಖೆ ಸೆರೆ ಹಿಡಿಯಲು ಪಣಾ ತೊಟ್ಟಿದೆ ಅನ್ನೋ ಕಾರಣಕ್ಕೆ ಮಕ್ನಾ ಆನೆಯನ್ನು ತನ್ನತ್ತ ಸೇರಿಸದ ಸಲಗ ಈಗ ಮಕ್ನಾದೊಂದಿಗೆ ಫ್ರೆಂಡ್ಶಿಪ್ ಬೆಳೆಸಿದೆ. ಒಟ್ಟಿನಲ್ಲಿ ಮಕ್ನಾ ಮತ್ತು ಸಲಗದ ಫ್ರೆಂಡ್ಶಿಪ್ ಅರಣ್ಯಾಧಿಕಾರಿಗಳು ಹಾಗೂ ಸಾಕಾನೆಗಳ ಪಡೆಯ ನೆಮ್ಮದಿ ಕೆಡಿಸಿದೆ
ಸಕಲೇಶಪುರ ತಾಲೂಕಿನ ರಾಜೇಂದ್ರಪ್ರರದಲ್ಲಿ ವ್ಯಕ್ತಿಯನ್ನು ಸಾಯಿಸಿದ ಸಲಗವನ್ನು ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸುತ್ತಿದ್ದು, ಅದು ತಾನು ಬಚಾವ್ ಆಗಲು ಮಕ್ನಾ ಅನೆಯೊಂದಿಗೆ ಸೇರಿಕೊಂಡಿದೆ. ಇದರಿಂದ ಅವುಗಳ ಕಾರ್ಯಾಚರಣೆಗೆ ಅಡಚಣೆ ಉಂಟಾಗುತ್ತಿದೆ. ಕೂಡಲೇ ಸಲಗ ಹಾಗೂ ಮಕ್ನಾ ಆನೆಗಳನ್ನು ಸೆರೆ ಹಿಡಿಯಲಾಗುತ್ತದೆ.
-ಲಕ್ಷ್ಮಣ್, ಉಪ ಅರಣ್ಯ ಸಂರಕ್ಷಣಾಧಿಕಾರಿ