ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಬರಪೀಡಿತ ಪಟ್ಟಿಗೆ ಸೇರಿಸಿ; ಪ್ರತಿಭಟನೆ

Srinivasa Murthy VN
Updated On : 25 Nov 2013, 12:10 pm

ಕ.ಪ್ರ.ವಾರ್ತೆ ಚ.ರಾ.ಪಟ್ಟಣ ನ 24
ತಾಲೂಕನ್ನು ಬರಪೀಡಿತ ಪ್ರದೇಶದ ಪಟ್ಟಿಗೆ ಸೇರಿಸದೆ ವಂಚಿಸಿರುವ ರಾಜ್ಯ ಸರ್ಕಾರದ ವಿರುದ್ಧ ಹಾಗೂ ಕಬ್ಬಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘದ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು.
ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ತಮಟೆ ಬಾರಿಸುವ ಮೂಲಕ ಮೆರವಣಿಗೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ, ತಾಲೂಕನ್ನು ಬರಪೀಡಿತ ಪಟ್ಟಿಗೆ ಸೇರ್ಪಡೆ, ಕಬ್ಬಿಗೆ ವೈಜ್ಞಾನಿಕ ಬೆಲೆ ನಿಗದಿ ಹಾಗೂ ತಾಲೂಕಿನಲ್ಲಿ ಏತ ನೀರಾವರಿ ಕಾಮಗಾರಿ ಕೈಗೊಳ್ಳುವಂತೆ ಒತ್ತಾಯಿಸಿ ಬೆಳಗಾಂನಲ್ಲಿ ನಡೆಯಲಿರುವ ಅಧಿವೇಶನದ ಸಂದರ್ಭದಲ್ಲಿ ಧರಣಿ ನಡೆಸಲು ಪಟ್ಟಣದ ರೇಲ್ವೆ ನಿಲ್ದಾಣದಿಂದ  ಪ್ರಯಾಣ ಕೈಗೊಂಡರು.
ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘದ ಯುವ ಕಾರ್ಯದರ್ಶಿ ಆನೆಕೆರೆ ರವಿ ಮಾತನಾಡಿ, ತಾಲೂಕಿನಲ್ಲಿ ಕುಡಿಯುವ ನೀರಿಲ್ಲ. ಜಾನುವಾರಿಗೆ ನೀರು ಮತ್ತು ಮೇವಿನ ಬವಣೆ ಆರಂಭವಾಗಿದೆ. ಈ ಬಗ್ಗೆ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದೆವು. ಅದನ್ನು ಗಮನಕ್ಕೆ ತೆಗೆದುಕೊಳ್ಳದೆ ಸರ್ಕಾರ ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡದಿರುವುದನ್ನು ಖಂಡಿಸಿ ತಾಲೂಕಿನ ರಾಜ್ಯ ರೈತ ಸಂಘದ ಸದಸ್ಯರು ಬೆಳಗಾಂ ಅಧಿವೇಶನದ ಸಂದರ್ಭದಲ್ಲಿ ಧರಣಿ ಕೈಗೊಳ್ಳಲು ರೈಲಿನಲ್ಲಿ ಪ್ರಯಾಣ ಕೈಗೊಂಡಿದ್ದೇವೆ.
ತಾಲೂಕಿನಲ್ಲಿ ಸಂಭವಿಸಿರುವ ಬರಗಾಲ ಎದುರಿಸಲು ರಾಜ್ಯ ಸರ್ಕಾರ ಮುಂದಾಗುವ ಭರವಸೆ ನೀಡುವವರೆಗೆ ಬೆಳಗಾಂನಲ್ಲಿ ವಿವಿಧ ರೀತಿಯಲ್ಲಿ ಧರಣಿ ಸತ್ಯಾಗ್ರಹ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ತಾಲೂಕು ಅಧ್ಯಕ್ಷ ಮಂಜೇಗೌಡ, ಕಾರ್ಯದರ್ಶಿ ಮಹೇಶ್, ಸಂಚಾಲಕ ಸತ್ತಿಗೌಡ, ಪದಾಧಿಕಾರಿಗಳಾದ ತಿಮ್ಮೇಗೌಡ, ಜವರೇಗೌಡ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement