ಯುಪಿಎ ಸರ್ಕಾರಕ್ಕೆ ಬುದ್ಧಿ ಕಲಿಸಿ
ಕ.ಪ್ರ.ವಾರ್ತೆ ಹಾಸನ ನ 24
ಬಡತನ, ನಿರುದ್ಯೋಗ, ಅನಕ್ಷರತೆ, ಭ್ರಷ್ಟಾಚಾರ, ಭಯೋತ್ಪಾದನೆ ದೇಶದಲ್ಲಿ ಹೆಚ್ಚಾಗಲು ಕಾರಣ ಕೇಂದ್ರದ ಯುಪಿಎ ಸರ್ಕಾರದ ದುರಾಡಳಿತ. ಇದನ್ನು ತೊಡೆದು ಹಾಕಲು ಬಿಜೆಪಿಯನ್ನು ಬೆಂಬಲಿಸುವಂತೆ ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಎಚ್.ವಿಜಯ್‌ಶಂಕರ್ ಕರೆ ನೀಡಿದರು.
ಬಿಜೆಪಿ ಗೆಳೆಯರ ಬಳಗದ ವತಿಯಿಂದ ಭಾನುವಾರ ನಡೆದ ಮನ-ಮನೆಗಳಿಗೆ-ಮೋದಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 65 ವರ್ಷ ಕಳೆದರೂ ದೇಶದಲ್ಲಿ ಬಡತನ, ನಿರುದ್ಯೋಗ, ಅನಕ್ಷರತೆ, ಭ್ರಷ್ಟಾಚಾರ ರಾಷ್ಟ್ರೀಯ ಸಮಸ್ಯೆಯಾಗಿ ಪರಿಣಮಿಸಿದೆ. ಇದಕ್ಕೆ ಪರ್ಯಾಯ ವ್ಯವಸ್ಥೆ ಕಂಡುಕೊಳ್ಳಲು ಯುಪಿಎ ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಭ್ರಷ್ಟಾಚಾರಿಗಳು ದೇಶದ ಹಣವನ್ನು ಲೂಟಿ ಮಾಡಿ ಸ್ವಿಸ್ ಬ್ಯಾಂಕ್‌ನಲ್ಲಿ 27.5 ಲಕ್ಷ ಕೋಟಿ ಇಟ್ಟಿದ್ದಾರೆ. ಅದೇ ದೇಶದ ವಾರ್ಷಿಕ ಅವವ್ಯಯ ಕೇವಲ 5.70 ಲಕ್ಷ ಕೋಟಿಯಷ್ಟಿದೆ. ಸ್ವಿಸ್ ಬ್ಯಾಂಕ್ ಆ ಹಣವನ್ನು ವಾಪಸ್ ಭಾರತಕ್ಕೆ ನೀಡಲು ಸಿದ್ಧವಿದ್ದರೂ ಯುಪಿಎ ಸರ್ಕಾರ ಅದನ್ನು ದೇಶಕ್ಕೆ ವಾಪಸ್ ತರುವ ಮನಸು ಮಾಡದೇ ದೇಶದ ಜನತೆಗೆ ವಂಚಿಸುತ್ತಿದೆ ಎಂದು ಕಿಡಿಕಾರಿದರು.
ಈ ಕಪ್ಪು ಹಣವನ್ನು ದೇಶಕ್ಕೆ ವಾಪಸ್ ತಂದರೆ 5.73 ಲಕ್ಷ ಹಳ್ಳಿಗೆ ತಲಾ 100 ಕೋಟಿಗಳಂತೆ ಹಂಚಬಹುದಾಗಿದೆ. ಇದರಿಂದ ಬಡತನ, ನಿರುದ್ಯೋಗ ಸಮಸ್ಯೆ ಬಗೆಹರಿಯಲಿದೆ. ಈ ಬಗ್ಗೆ ಸಂಸತ್‌ನಲ್ಲಿಯೂ ಚರ್ಚೆಗಳು ನಡೆದಿದ್ದರೂ ಕಾಂಗ್ರೆಸ್ ಸರ್ಕಾರ ಈ ಬಗ್ಗೆ ನಿರ್ಲಕ್ಷ್ಯ ತಾಳಿದೆ. ಅದೇ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಪ್ರಧಾನಿ ಆದರೇ ತಾವು ಆ ಕಪ್ಪು ಹಣವನ್ನು ವಾಪಸ್ ತರುವುದಾಗಿ ಸವಾಲು ಹಾಕಿದ್ದಾರೆ. ಆದ್ದರಿಂದ ಬಿಜೆಪಿಗೆ ಬೆಂಬಲಿಸುವಂತೆ ಮನವಿ ಮಾಡಿದರು.
ಹಿಂದೆ ರಾಜಮನೆತನಗಳ ಆಳ್ವಿಕೆ ಕಾಲದಲ್ಲಿ ದೇಶದ ಮೇಲೆ ಸಾಕಷ್ಟು ಬಾರಿ ದಾಳಿಗಳು ನಡೆದಿವೆ. ಬ್ರಿಟಿಷರು ಸಹ ದೇಶದ ಮೇಲೆ ದಾಳಿ ನಡೆಸಿ ದೇಶದ ಸಂಪತ್ತನ್ನು ಕೊಳ್ಳೆ ಹೊಡೆದರು. ಸ್ವಾತಂತ್ರ್ಯ ನಂತರ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಭದ್ರತೆ ಇಲ್ಲದಂತಾಗಿದೆ. ದೇಶದ ಗಡಿ ಭಾಗದಲ್ಲಿ ಅಸುರಕ್ಷತೆ ನಿರ್ಮಾಣವಾಗಿದೆ. ಪಾಕಿಸ್ತಾನದ ಉಗ್ರಗಾಮಿಗಳು ಕಳೆದ 6 ತಿಂಗಳಲ್ಲಿ 59 ಬಾರಿ ದೇಶದ ಮೇಲೆ ದಾಳಿ ನಡೆಸುವ ಮೂಲಕ 52 ಹಳ್ಳಿಗಳನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದಾರೆ.
ಚೀನಾ ಸಹ ದೇಶದ ಗಡಿಯೊಳಗೆ ನುಗ್ಗಿ ದಾಳಿ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ಈ ಬಗ್ಗೆ ಯಾವುದೇ ಪ್ರತಿ ಉತ್ತರ ನೀಡದೆ ಕೈಕಟ್ಟಿ ಕುಳಿತಿದೆ. ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಪಾಕಿಸ್ತಾನ ಭಾರತದ ಮೇಲೆ ದಾಳಿ ನಡೆಸಿ ತೊಂದರೆ ನೀಡುತ್ತಿದ್ದ ಸಂದರ್ಭದಲ್ಲಿ ಕಾರ್ಗಿಲ್ ಯುದ್ಧ ನಡೆಸಿ ಜಯ ಗಳಿಸಿ ದೇಶದ ವಿಚಾರಕ್ಕೆ ಬಂದರೆ ಅಂಜುವುದಿಲ್ಲ ಎಂದು ಎದೆಗಾರಿಕೆಯಿಂದ ಪ್ರತಿಯುತ್ತರ ನೀಡಿದರು. ಆದರೆ ಕಾಂಗ್ರೆಸ್‌ನ ರಾಹುಲ್‌ಗಾಂಧಿ ತನಗೆ ದೇಶದಲ್ಲಿ ಜೀವ ಬೆದರಿಕೆ ಇದೆ ಎಂದು ಹೇಳುವ ಮೂಲಕ ದೇಶದಲ್ಲಿನ ಭದ್ರತೆಗೆ ಕಳಂಕ ತಂದಿದ್ದಾರೆ ಎಂದರು.
ಆದ್ದರಿಂದ ಇವೆಲ್ಲದಕ್ಕೂ ಪ್ರತಿಯುತ್ತರ ನೀಡುವಂತ ಧೈರ್ಯ, ಆತ್ಮಸ್ಥೈರ್ಯ ಹಾಗೂ ಬಿಡದೆ ಸಾಧಿಸುವಂತಹ ಛಲ ಇರುವಂತಹ ಬಿಜೆಪಿಯ ನರೇಂದ್ರ ಮೋದಿ ಅವರನ್ನು ಒಕ್ಕೊರಲಿನಿಂದ ಬೆಂಬಲಿಸುವಂತೆ ಮನವಿ ಮಾಡಿದರು.
ನರೇಂದ್ರ ಮೋದಿ ಅಭಿಮಾನ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಕೃಷ್ಣಸ್ವಾಮಿ, ಕಾಫಿ ಬೆಳೆಗಾರ ಎಚ್.ಸಿ.ಕುಮಾರಸ್ವಾಮಿ, ಶ್ರೀಕಾಂತ್, ಉಪನ್ಯಾಸಕ ರವಿ ಕುಮಾರ್, ಮುಖಂಡರಾದ ನವಿಲೆ ಅಣ್ಣಪ್ಪ, ಬಿ.ಕೆ.ಮಂಜುನಾಥ್, ಗುರುಪ್ರಸಾದ್, ಶ್ರೀಕಾಂತ್, ನಿಖಿಲ್, ಐನೆಟ್ ವಿಜಿ, ರವಿ ಇದ್ದರು.
ಬಿಜೆಪಿಯಿಂದ ಬೃಹತ್ ಬೈಕ್ ರ್ಯಾಲಿ
ಹಾಸನ: ಬಿಜೆಪಿ ಗೆಳೆಯರ ಬಳಗದ ವತಿಯಿಂದ ಮನ-ಮನೆಗಳಿಗೆ-ಮೋದಿ ಕಾರ್ಯಕ್ರಮದ ಅಂಗವಾಗಿ ಭಾನುವಾರ ನಗರದಲ್ಲಿ ಬೃಹತ್ ಬೈಕ್ ರ್ಯಾಲಿ ನಡೆಸಲಾಯಿತು.
ನಗರದ ಡೈರಿ ವೃತ್ತದಿಂದ ಬಿಜೆಪಿ ಕಾರ್ಯಕರ್ತರು ಬೈಕ್ ರ್ಯಾಲಿ ಪ್ರಾರಂಭಿಸಿ ಬಿ.ಎಂ.ರಸ್ತೆ, ಶಂಕರಮಠ ರಸ್ತೆ, ಎಂ.ಜಿ.ರಸ್ತೆಯ ಮೂಲಕ ಮೆರವಣಿಗೆ ತೆರಳಿ ಹಲವು ಭಾಷೆ ಒಂದೇ ಭಾವ, ಹಲವು ರಾಜ್ಯ ಒಂದೇ ದೇಶ, ಹಲವು ಪಂಥ ಒಂದೇ ಲಕ್ಷ್ಯ, ಹಲವು ಬಣ್ಣ ಒಂದೇ ತ್ರಿವಣ್ಣ, ಹಲವು ಸಮಾಜ ಒಂದೇ ಭಾರತ, ಹಲವು ಸಂಪ್ರದಾಯ ಒಂದೇ ಸಂಸ್ಕಾರ, ಹಲವು ಕಾರ್ಯ ಒಂದೇ ಸಂಕಲ್ಪ, ಹಲವು ದಾರಿ ಒಂದೇ ಗುರಿ, ಹಲವು ಚಹರೆ ಒಂದೇ ನಗು ಎಂಬ ಸಂದೇಶವನ್ನು ಸಾರಿದರು. ರ್ಯಾಲಿಯಲ್ಲಿ ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಸಚಿವ ಸಿ.ಎಚ್.ವಿಜಯ್ ಶಂಕರ್, ನರೇಂದ್ರ ಮೋದಿ ಅಭಿಮಾನ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಕೃಷ್ಣಸ್ವಾಮಿ, ಕಾಫಿ ಬೆಳೆಗಾರ ಎಚ್.ಸಿ.ಕುಮಾರಸ್ವಾಮಿ, ಶ್ರೀಕಾಂತ್, ಉಪನ್ಯಾಸಕ ರವಿ ಕುಮಾರ್, ಮುಖಂಡರಾದ ನವಿಲೆ ಅಣ್ಣಪ್ಪ, ಬಿ.ಕೆ.ಮಂಜುನಾಥ್, ಗುರು ಪ್ರಸಾದ್, ಶ್ರೀಕಾಂತ್, ನಿಖಿಲ್, ಐನೆಟ್ ವಿಜಿ, ರವಿ ಹಾಗೂ ಇತರರು ಭಾಗವಹಿಸಿದ್ದರು.