ಶಿಕ್ಷಣದಿಂದ ಹತ್ತಿಕ್ಕಬೇಕೇ ಹೊರತು ಕಾನೂನಿನಿಂದಲ್ಲ
ಕ.ಪ್ರ.ವಾರ್ತೆ ಅರಸೀಕೆರೆ ನ.24
ಮೂಢನಂಬಿಕೆಗಳು ಎಲ್ಲ ಧರ್ಮಗಳಲ್ಲಿದ್ದು, ಸರ್ಕಾರದ ಮೂಢನಂಬಿಕೆ ನಿಷೇಧ ಕಾಯ್ದೆ ಒಂದೇ ಧರ್ಮಕ್ಕೆ ಸೀಮಿತವಾಗದೆ ಎಲ್ಲ ಧರ್ಮಕ್ಕೆ ಅನ್ವಯವಾಗಬೇಕೆಂದು ಸುಕ್ಷೇತ್ರ ಹಾರನಹಳ್ಳಿ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿದ್ದಾರೆ.
ಸುಕ್ಷೇತ್ರ ಕೋಡಿಮಠದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮೂಢನಂಬಿಕೆ ಎನ್ನುವುದು ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನ, ಬೌದ್ಧ ಇನ್ನಿತರ ಧರ್ಮಗಳಲ್ಲೂ ಇದೆ. ಇದನ್ನು ನಿಷೇಧಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಮನುಷ್ಯ ತನ್ನ ಜೀವನದಲ್ಲಿ ಒಂದಲ್ಲ ಒಂದು ರೀತಿಯ ನಂಬಿಕೆಗಳ ಮೂಲಕ ಜೀವಿಸುತ್ತಿದ್ದಾನೆ. ಮಾಟ, ಮಂತ್ರ, ಇನ್ನಿತರ ಸಮಾಜಕ್ಕೆ ಕಂಟಕವಾಗಿರುವ ನಂಬಿಕೆಗಳ ನಿಷೇಧಕ್ಕೆ ಯಾವುದೇ ಅಡ್ಡಿ ಇಲ್ಲ ಎಂದರು.
ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿ ಅದರ ಮೂಲಕ ಇಂತಹ ಅನಿಷ್ಠ ಪದ್ಧತಿಗಳನ್ನು ತೊಡೆದು ಹಾಕಲು ಸಾಧ್ಯವೇ ಹೊರತು ಕಾನೂನಿನಿಂದ ಹತ್ತಿಕ್ಕಲು ಸಾಧ್ಯವಿಲ್ಲ ಅಂದರು.
ಮೂಢನಂಬಿಕೆ ವೇದಗಳ ಕಾಲದಿಂದಲೂ ಇದ್ದು ಎಲ್ಲ ಧರ್ಮಗಳಲ್ಲೂ ಹಾಸುಹೊಕ್ಕಾಗಿದೆ. ಜನರನ್ನು ವಿಚಾರವಂತರನ್ನಾಗಿ ಮಾಡುವ ಮೂಲಕ ಇದನ್ನು ದೂರ ಮಾಡಬೇಕು. ಇದಕ್ಕೆ ನಿಷೇಧ ಕಾಯ್ದೆ ತರಲು ಹೊರಟಿರುವ ಸರ್ಕಾರದ ಕ್ರಮ ಸರಿಯಲ್ಲ. ಸರ್ಕಾರದ ಮುಂದೆ ಅನೇಕ ಜ್ವಲಂತ ಸಮಸ್ಯೆಗಳಿದ್ದು ಅದನ್ನು ಪರಿಹರಿಸುವ ನಿಟ್ಟಿನಲ್ಲಿ ಗಮನ ಹರಿಸುವುದು ಬಿಟ್ಟು ಈ ರೀತಿ ಒಂದು ಧರ್ಮವನ್ನು ಟಾರ್ಗೆಟ್ ಮಾಡಲು ಹೊರಟಿರುವುದು ದುರಂತದ ಸಂಗತಿ ಎಂದರು.
ಸ್ವಾತಂತ್ರ್ಯ ಬಂದು 67 ವರ್ಷಗಳೇ ಕಳೆದರೂ ಜನರಿಗೆ ಶುದ್ಧ ಕುಡಿಯುವ ನೀರಿಲ್ಲ. ಆರೋಗ್ಯದ ಸಮಸ್ಯೆ, ಉತ್ತಮವಾದ ರಸ್ತೆ ಇಲ್ಲ. ಇದರಿಂದ ಅವಘಡಗಳು ಸಂಭವಿಸುತ್ತಿವೆ. ಈ ಸರ್ಕಾರ ಜನರ ಪ್ರಾಣದ ಜೊತೆ ಜೂಜಾಟ ನಡೆಸುತ್ತಿದೆ. ದೇಶಕ್ಕೆ ಅನ್ನ ನೀಡುವ ರೈತನ ಸ್ಥಿತಿ ಅಧೋಗತಿಗೆ ತಲುಪಿದೆ. ಸರಿಯಾದ ಮಳೆಯಿಲ್ಲದೆ ಸಂಕಷ್ಟ ಅನುಭವಿಸುತ್ತಿರುವ ರೈತ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಕಬ್ಬು ಬೆಳೆಗಾರರಿಗೆ ನ್ಯಾಯ ದೊರಕಿಸಲು ಸಾಧ್ಯವಾಗಿಲ್ಲ. ತೆಂಗಿನ ಮರಗಳು ಸುಳಿ ಬಿದ್ದು ನಾಶವಾಗಿ ರೈತನ ಆರ್ಥಿಕ ಪರಿಸ್ಥಿತಿ ಬುಡಮೇಲಾಗಿದ್ದು, ಈ ಸಮಸ್ಯೆಗಳಿಗೆ ಪರಿಹಾರ ಹುಡುಕಿ ಸ್ಪಂದಿಸಬೇಕಾದ ಸರ್ಕಾರ ಈ ರೀತಿಯ ಜನವಿರೋಧಿ ಕಾನೂನನ್ನು ಜಾರಿಗೆ ತರಲು ಹೊರಟಿರುವುದು ಸರಿಯಲ್ಲ ಎಂದು ಟೀಕಿಸಿದರು.
ಹಿಂದೆ ರಾಜಾಶ್ರಯದಲ್ಲಿ ಮಠಮಾನ್ಯಗಳ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿತ್ತು. ಅದನ್ನು ಯಡಿಯೂರಪ್ಪ ಮುಂದುವರೆಸಿದರು. ಅವರ ನಂತರ ಮಠಮಾನ್ಯಗಳು ಅನಾಥವಾಗಿವೆ ಎಂಬ ಭಯ ಕಾಡುತ್ತಿದೆ ಎಂದರು.