ಆರ್ಟಿಇ ದುರ್ಬಳಕೆ ನಿಯಂತ್ರಣಕ್ಕೆ ಆಗ್ರಹ
ಕನ್ನಡಪ್ರಭ ವಾರ್ತೆ, ಹಾಸನ, ನ.25
ಕಡ್ಡಾಯ ಶಿಕ್ಷಣದ ಹಕ್ಕು(ಆರ್ಟಿಇ)- 2009 ಅನುಷ್ಠಾನಕ್ಕೆ ಬಂದು ಮೂರನೇ ವರ್ಷಕ್ಕೆ ಕಾಲಿಡುತ್ತಿದೆ. ಮೊದಲೆರಡು ವರ್ಷಗಳಿಗೆ ಹೋಲಿಸಿದರೆ ಪ್ರಸಕ್ತ ವರ್ಷ ಆರ್ಟಿಇ ಕಾಯ್ದೆ ಹೆಚ್ಚು ಪ್ರಚಾರ ಪಡೆಯುವಲ್ಲಿ ಶಕ್ತವಾಗಿದೆ. ಆದರೆ ಗೊಂದಲ ಮತ್ತು ದುರುಪಯೋಗಳು ಮುಂದುವರೆದಂತೆ ಗೋಚರಿಸುತ್ತಿದೆ. ಈ ಒಂದು ಕಾಯ್ದೆ ಅರ್ಹ ಫಲಾನುಭವಿಗಳಿಗೆ ದೊರೆಯುವಂತಾಗಲು ಅದರ ದುರುಪಯೋಗಗಳನ್ನು ನಿಯಂತ್ರಿಸಬೇಕೆಂದು ಹಾಸನ ಜಿಲ್ಲಾ ಭಾರತ ಜ್ಞಾನ- ವಿಜ್ಞಾನ ಸಮಿತಿಯು ಆಗ್ರಹಿಸಿದೆ.
ಪ್ರಸಕ್ತ ಸಂದರ್ಭದಲ್ಲಿ ಲಭ್ಯವಿರುವ ಸದ್ಯದ ದತ್ತಾಂಶಗಳಿಗನುಸಾರ ಈ ಅಕ್ರಮಗಳನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಿಲ್ಲದ ಹಂತದಲ್ಲಿದೆ. ಸಂಬಂಧಪಟ್ಟ ಇಲಾಖೆಗಳು ಮತ್ತು ರಾಜಕೀಯ ಹಿತಾಸಕ್ತಿಗಳು ಒಗ್ಗೂಡಿ ಕೆಲಸ ನಿರ್ವಹಿಸಿದರೆ ಮಾತ್ರ ಅರ್ಹ ಫಲಾನುಭವಿಗಳ ಮಕ್ಕಳಿಗೆ ಈ ಸವಲತ್ತನ್ನು ಉಣಬಡಿಸಲು ಸಾಧ್ಯ ಎಂದು ಜಿಲ್ಲಾ ಖಜಾಂಚಿ ಬಿ.ಜಿ. ಗೋಪಾಲಕೃಷ್ಣ ತಿಳಿಸಿದ್ದಾರೆ.
ಗೊಂದಲದ ಗೂಡು: ಈ ಕಾಯ್ದೆ ಅನುಷ್ಠಾನಕ್ಕೆ ಬಂದು ಮೂರನೇ ವರ್ಷಕ್ಕೆ ಕಾಲಿಟ್ಟರೂ ಪರಿಪೂರ್ಣವಾಗಿ ಜಾರಿಗೆ ತರಲು ಇಚ್ಛಾಶಕ್ತಿಯ ಕೊರತೆ ಎಂದು ಶಿಕ್ಷಣ ಇಲಾಖೆ ಒಂದನ್ನೇ ದೂರಲು ಸಾಧ್ಯವಿಲ್ಲ. ಏಕೆಂದರೆ ಅನೇಕ ಪ್ರತಿಷ್ಠಿತ ವಿದ್ಯಾಸಂಸ್ಥೆಗಳು ನಮ್ಮನ್ನಾಳುವ ಅರಸರುಗಳದೇ ಆಗಿವೆ. ಕಾನೂನು ಮಾಡುವವರೇ ಕಾನೂನು ಮುರಿದರೆ ಆಡಳಿತ ವರ್ಗದವರೇನು ಮಾಡಲು ಸಾಧ್ಯ. ಈ ಕಾಯ್ದೆಯ ಪ್ರಚಾರ ಮತ್ತಷ್ಟು ಅವಶ್ಯಕತೆ ಇದ್ದು ಅನೇಕ ಗೊಂದಲಗಳ ಗೂಡಾಗಿದೆ ಎಂದು ಹೇಳಿದ್ದಾರೆ.
ಪ್ರವರ್ಗ-1, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಪ್ರಮಾಣ ಪತ್ರ ಒದಗಿಸಲು ಕೋರಲಾಗಿದ್ದು, ಪ್ರಮಾಣ ಪತ್ರದಲ್ಲಿ ಜಾತಿಯ ವಿವರಗಳನ್ನು ಮಾತ್ರ ಕೋರಿದ್ದು ಆದಾಯದ ವಿವರಗಳನ್ನು ಕೋರಿಲ್ಲ.
ಅವರಿಗೆ ಆದಾಯದ ಮಿತಿ ಇರುವುದಿಲ್ಲವಾದಲ್ಲಿ ಆಯ್ಕೆ ಪ್ರಕ್ರಿಯೆಯಲ್ಲಿ 1 ಲಕ್ಷಕ್ಕಿಂತ ಕಡಿಮೆ ಆದಾಯ ಇರುವ ವಿಭಾಗದಲ್ಲಿ ಪರಿಗಣಿಸಬೇಕೆ ಅಥವಾ ತದನಂತರವೇ ಎಂಬುದನ್ನು ತಿಳಿಸಬೇಕು ಎಂದಿದ್ದಾರೆ.
1 ಲಕ್ಷಕ್ಕಿಂತ ಕಡಿಮೆ ಆದಾಯ ಇರುವವರನ್ನು ಮೊದಲ ವಿಭಾಗವೆಂದು, 1 ಲಕ್ಷಕ್ಕಿಂತ ಹೆಚ್ಚು ಮತ್ತು 3.50 ಲಕ್ಷದವರೆಗೆ ಆದಾಯ ಇರುವವರನ್ನು ಎರಡನೇ ವಿಭಾಗ ಎನ್ನುವುದಾದರೆ ಮೊದಲನೇ ವಿಭಾಗದಲ್ಲಿ ಮೊದಲು ಸಾಮಾನ್ಯ ವರ್ಗದವರನ್ನು ಆಯ್ಕೆ ಮಾಡಬೇಕೆ ಅಥವಾ ಪರಿಶಿಷ್ಟ ಜಾತಿ ಮತ್ತು ಪಂಗಡದವರನ್ನು ಮೀಸಲಾತಿಗೆ ಅನುಸಾರ ಮೊದಲು ಆಯ್ಕೆ ಮಾಡಿ. ಆಯ್ಕೆಯಾಗದೆ ಉಳಿದವರನ್ನು ಸಾಮಾನ್ಯ ವರ್ಗದವರೊಂದಿಗೆ ಪರಿಗಣಿಸಬೇಕೆ ಬೇಡವೇ ಎಂದು ಪ್ರಶ್ನಿಸಿದ್ದಾರೆ.
ವ್ಯಾಪಾರೀಕರಣ ಮನೋಧರ್ಮ: ಆಯ್ಕೆಯಾದ ಮಕ್ಕಳು ಪ್ರವೇಶ ಪಡೆಯದೇ ಇದ್ದ ಪಕ್ಷದಲ್ಲಿ, ಮುಂದಿನ ಪ್ರಕ್ರಿಯೆ ಏನು ಉಳಿಕೆ ಸೀಟುಗಳ ಆಯ್ಕೆಯ ಪ್ರಕ್ರಿಯೆಯ ಮೂಲದಂಡಗಳೇನು? ಒಂದು ಮಗು ಆಯ್ಕೆಯಾಗಿ ಒಂದು ವರ್ಷದ ನಂತರ, ಪೋಷಕರು ಬೇರೆಡೆಗೆ ಸ್ಥಳಾಂತರಗೊಂಡರೆ ಮುಂದಿನ ಆಯ್ಕೆ ಏನು ಈ ರೀತಿಯ ಸಾಮಾನ್ಯ ಪ್ರಶ್ನೆಗಳನ್ನೊಳಗೊಂಡ ಕೈಪಿಡಿಯನ್ನು ಫಲಾನುಭವಿ ಮಗುವು ಯಾವುದಾದರೊಂದು ಕಾರಣಕ್ಕಾಗಿ ಪ್ರಸಕ್ತ ಶಾಲೆಯನ್ನು ತೊರೆದರೆ, ಆ ಸ್ಥಾನದ ಆಯ್ಕೆಯ ಪ್ರಕ್ರಿಯೆ ಹೇಗೆ ಎಂದು ಕೇಳಿದ್ದಾರೆ.
ಆಯ್ಕೆಯಾದ ಮತ್ತು ಕಾಯ್ದಿರಿಸಿದ ಮಕ್ಕಳ ಪಟ್ಟಿಯ ದೃಢೀಕರಿಸಿದ ನಕಲು ಪ್ರತಿಯನ್ನು, ಆ ಸಂದರ್ಭದಲ್ಲಿ ಹಾಜರಿದ್ದ ಪೋಷಕರಿಗೆ ಒದಗಿಸಬಹುದಲ್ಲವೇ ಇನ್ನು ದುರುಪಯೋಗ ಹೇಳತೀರದಾಗಿವೆ ಎಂದು ಹೇಳಿದ್ದಾರೆ.