ಕಾಂಗ್ರೆಸ್ ಘಟಕಕ್ಕೆ ಅಧ್ಯಕ್ಷ ಆಯ್ಕೆ
ಬೇಲೂರು: ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ತಾಲೂಕು ಅಧ್ಯಕ್ಷರಾಗಿ ಮಲಸವರ ಎನ್. ಸೋಮಶೇಖರ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಸಿದ್ದಮಂಜು, ದೇವರಾಜು, ವೆಂಕಟೇಶ್, ಸಂಚಾಲಕರುಗಳಾಗಿ ರೇಣುಕಯ್ಯ ಜಗದೀಶ್, ಭೈರೇಶ್, ಕಾರ್ಯದರ್ಶಿಗಳಾಗಿ ಲಿಂಗರಾಜು, ಶಿವಣ್ಣ, ಸಹ ಕಾರ್ಯದರ್ಶಿ ಯೋಗೇಶ್, ಸಂಘಟನಾ ಸಂಚಾಲಕರು ಮಂಜುಳ, ದೇವರಾಜು, ಪುಟ್ಟಸ್ವಾಮಿ ಆಯ್ಕೆಯಾಗಿದ್ದಾರೆ.
ಕಾಮಗಾರಿ ಅಪೂರ್ಣ; ಸಂಚಾರಕ್ಕೆ ತೊಂದರೆ
ಹೊಳೆನರಸೀಪುರ: ಪಟ್ಟಣದ ಕೋಟೆ ದಾಸಗೌಡರ ಬೀದಿ ಅಗೆದು ತಿಂಗಳು ಕಳೆದರು ಇನ್ನೂ ಆ ರಸ್ತೆ ಮುಕ್ತಿ ದೊರಕಿಲ್ಲ ಎಂಬ ದೂರು ಇಲ್ಲಿನ ನಿವಾಸಿಗಳಾದ್ದಾಗಿದೆ. ಕಳೆದ ತಿಂಗಳು ಒಳಚರಂಡಿ ಕಾಮಗಾರಿಗಾಗಿ ಇದ್ದಕ್ಕಿದ್ದಂತೆ ರಸ್ತೆ ಅಗೆದು ಕಾಮಗಾರಿ ಪೂರ್ಣಗೊಳಿಸಿದ ಕಾಲಹರಣ ಮಾಡಿದ್ದರ ಪರಿಣಾಮ ಇಲ್ಲಿನ ನಿವಾಸಿಗಳು ಓಡಾಡಲು ಭಾರಿ ಸಂಕಷ್ಟ ಅನುಭವಿಸಬೇಕಾಯಿತು. ಆದರೆ ಈ ಘಟನೆ ನಡೆದು ತಿಂಗಳು ಕಳೆದರೂ ಕಾಮಗಾರಿ ಇನ್ನೂ ಪೂರ್ಣಗೊಳ್ಳದೆ ಇರುವುದು ಗುತ್ತಿಗೆದಾರನ ಮತ್ತು ಪುರಸಭೆ ಅಧಿಕಾರಿಗಳ ಕರ್ತವ್ಯಕ್ಕೆ ಹಿಡಿದ ಕೈಗನ್ನಡಿ ಆಗಿದೆ.
ಅತಿ ಮದ್ಯ ಸೇವನೆಗೆ ವ್ಯಕ್ತಿ ಬಲಿ
ರಾಮನಾಥಪುರ: ಅತಿಯಾದ ಮದ್ಯ ಸೇವನೆಯಿಂದಾಗಿ ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ. ರಾಮನಾಥಪುರದ ರಾಮೇಶ್ವರ ದೇವಸ್ಥಾನ ರಸ್ತೆಯಲ್ಲಿರುವ ಅಂಜಲಿ ಹೊಟೇಲ್‌ನಲ್ಲಿ ಪ್ರವಾಸೋದ್ಯಮ ಇಲಾಖೆ ವತಿಯಿಂದ ಬಾರ್ ನಡೆಸಲು ಅನುಮತಿ ದೊರೆತಿದ್ದು, ಇಲ್ಲಿ ಬಾರ್ ನಡೆಸಲಾಗುತ್ತಿದ್ದು, ಇದೇ ಭಾನುವಾರ ತುರುವೇಕೆರೆ ಮೂಲದ ರಮೇಶ್(22) ಎಂಬಾತ ಬಾರ್ ಸಮೀಪ ಸಾವನ್ನಪ್ಪಿದ್ದಾನೆ. ವಿಪರೀತ ಮದ್ಯ ಸೇವನೆಯಿಂದಾಗಿ ಎಂದಿದ್ದರೂ ಸಹ ಸ್ಥಳಕ್ಕೆ ಧಾವಿಸಿದ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸದೆ ಯಾರದೋ ಒತ್ತಡಕ್ಕೊಳಗಾದವರಂತೆ ಶವವನ್ನು ಗೂಡ್ಸ್ ಆಟೋವೊಂದಕ್ಕೆ ಹಾಕಿಸಿ ಸ್ವಗ್ರಾಮಕ್ಕೆ ಕಳುಹಿಸಲಾಯಿತು. ಮೃತನು ಹಣೆಬೊಟ್ಟು ಹೇರ್ ಪಿನ್‌ಗಳನ್ನು ಮಾರುವ ಅಲೆಮಾರಿ ಜನಾಂಗದವನೆಂದು ಕಂಡುಬಂದಿದೆ. ಆರೋಪ: ಈ ಹೊಸ ಬಾರ್‌ನಲ್ಲಿ ಮಾರಾಟ ಮಾಡುವ ಸ್ಥಳದಲ್ಲಿ ಮದ್ಯಪಾನ ನಿಷೇಧವಿದ್ದು, ಸಹ ಬಾರ್‌ನವರು ಈ ನಿಯಮಗಳನ್ನು ಗಾಳಿಗೆ ತೂರಿ ಪಾಲಿಸುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ.
ಜಾವಗಲ್‌ನಲ್ಲಿ ಅಕ್ರಮ ಮದ್ಯ ವಶ
ಜಾವಗಲ್: ಯಾವುದೇ ಪರವಾನಗಿ ಇಲ್ಲದೇ ಅಕ್ರಮವಾಗಿ ಸಾಗಿಸುತ್ತಿದ್ದ 2250 ಮೌಲ್ಯದ ಮದ್ಯವನ್ನು ಜಾವಗಲ್ ಪೊಲೀಸರು ಭಾನುವಾರ ವಶಪಡಿಸಿಕೊಂಡಿದ್ದಾರೆ. ಜಾವಗಲ್ ಪೊಲೀಸ್ ಸಿಬ್ಬಂದಿ ಗ್ರಾಮದ ಗಸ್ತು ನಿರ್ವಹಣೆಯಲ್ಲಿದ್ದಾಗ ಬಂದೂರು ಕಾಳನಕೊಪ್ಪಲು ಗ್ರಾಮದ ವಿರೂಪಾಕ್ಷ ಎಂಬವರು ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದುದು ಕಂಡುಬಂದು ಆರೋಪಿ ಮದ್ಯವನ್ನು ಸ್ಥಳದಲ್ಲೇ ಬಿಟ್ಟು ಓಡಿಹೋಗಿದ್ದಾನೆ. ಮದ್ಯವನ್ನು ವಶಪಡಿಸಿಕೊಂಡ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.