ಭಾಷೆ ಬಗ್ಗೆ ಭಾವಾವೇಶ ಬೇಡ: ಹಗರೆ
ಕ.ಪ್ರ.ವಾರ್ತೆ ಹಾಸನ ನ.25
ಪ್ರಸ್ತುತ ಸಂದರ್ಭದಲ್ಲಿ ಕನ್ನಡದ ಬಗ್ಗೆ ನವೆಂಬರ್ ತಿಂಗಳ ಭಾವಾವೇಶದ ಮಾತುಗಳು, ಕವಿತೆಯ ಸಾಲುಗಳು ಮಾತ್ರವೇ ಕನ್ನಡದ ಹಿರಿಮೆ-ಗರಿಮೆ ಎಂಬಂತೆ ಬಿಂಬಿತವಾಗುತ್ತಿರುವುದು ಕನ್ನಡದ ಬೆಳವಣಿಗೆಯಲ್ಲಿ ಯಾವುದೇ ಪಾತ್ರವಹಿಸದು ಎಂದು ಭಾರತ ಜ್ಞಾನ- ವಿಜ್ಞಾನ ಸಮಿತಿಯ ಜಿಲ್ಲಾ ಕಾರ್ಯದರ್ಶಿ ಅಹಮದ್ ಹಗರೆ ಅಭಿಪ್ರಾಯಪಟ್ಟರು.
ನಗರದ ಶ್ರೀ ವೆಂಕಟೀಶ್ವರ ಪ್ರೌಢಶಾಲೆಯ ಕುವೆಂಪು ಕನ್ನಡ ಸಂಘವು ಕನ್ನಡ ರಾಜ್ಯೋತ್ಸವದ ಅಂಗವಾಗಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಕನ್ನಡದ ಸ್ಥಿತಿಗತಿ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಕನ್ನಡ ಎಂದರೆ ಕವಿಗಳ ಸಾಹಿತ್ಯ, ಕನ್ನಡದ ಫಲಕ ಹಾಕಿಸುವ ಚಟುವಟಿಕೆ ಮಾತ್ರ ಎಂದಾಗಿದೆ. ಹಾಗಾಗಿ ಕನ್ನಡದ ನುಡಿ, ಭಾಷೆ, ಸಂಸ್ಕೃತಿ, ರಾಜಕಾರಣದ ವಿಷಯಗಳು ಐತಿಹಾಸಿಕ ನೆಲೆಗಟ್ಟಿನಿಂದ ಅಧ್ಯಯನಿಸಿ ಕನ್ನಡದ ಉಳಿವಿಗಾಗಿ ಸಾಂಸ್ಕೃತಿಕ ಹಾಗೂ ರಾಜಕೀಯ ಚಟುವಟಿಕೆ ನಡೆಸಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ವೆಂಕಟೇಶ್ವರ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಹರ್ಷ ಶಾಂತೇಗೌಡ ಮಾತನಾಡಿ, ಕನ್ನಡಿಗರಿಗೆ ಕನ್ನಡದ ಮೇಲೆ ಕೀಳರಿಮೆ ಬೆಳೆದಿದೆ. ಇಂಗ್ಲಿಷಿನ ವ್ಯಾಮೋಹ ಕನ್ನಡ ಭಾಷೆ ಮತ್ತು ನಾಡಿಗೆ ಸಂಚಕಾರ ತಂದಿದೆ ಎಂದ ಅವರು, ಕನ್ನಡವನ್ನು ಕನ್ನಡಿಗರಲ್ಲದೆ ಇನ್ನಾರು ಉಳಿಸಿ ಬೆಳೆಸಲು ಸಾಧ್ಯ ಎಂದರು.
ಸಂಸ್ಥೆಯ ಆಡಳಿತ ಅಧಿಕಾರಿ ರೂಪ ಹರ್ಷ ಮಾತನಾಡಿ, ಇಂದಿನ ಕಂಪ್ಯೂಟರ್ ಯುಗ ಇಂಗ್ಲಿಷ್ ಅನ್ನು ಆವರಿಸಿಕೊಂಡಿರುವುದರಿಂದ ಹೊಸ ಪೀಳಿಗೆ ಅಧ್ಯಯನ ಮಾಡುತ್ತಿಲ್ಲ. ಇನ್ನು ಕನ್ನಡ ಸಾಹಿತ್ಯ ಓದಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಹಿರಿಯ ಶಿಕ್ಷಕ ಆರ್. ಸುರೇಂದ್ರ ಮಾತನಾಡಿ, ಕನ್ನಡದ ಮೇಲೆ ಮಮಕಾರ ಹಾಗೂ ಪ್ರೀತಿಯನ್ನು ಉಳಿಸಿಕೊಂಡು ಬೇರೆ ಭಾಷೆ ಅಧ್ಯಯನ ಮಾಡಿದರೆ ಎರಡೂ ಭಾಷೆಗಳು ಶ್ರೀಮಂತವಾಗಿ ಬೆಳೆಯುತ್ತವೆ. ಯಾವುದೇ ಭಾಷೆ ಪರಸ್ಪರ ಕೊಡು-ಕೊಳ್ಳುವಿಕೆಯಿಂದಲೇ ಬೆಳೆಯುವುದು ಎಂದ ಅವರು, ಮಕ್ಕಳು ಸಾಹಿತ್ಯ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ವಿದ್ಯಾರ್ಥಿನಿ ಧನಲಕ್ಷ್ಮಿ ನಿರೂಪಿಸಿದರು. ವಿದ್ಯಾರ್ಥಿ ಐ.ಎಂ. ಆಫ್ರಿದ್ ಸ್ವಾಗತಿಸಿದರು. ವಿದ್ಯಾರ್ಥಿನಿ ಎಚ್.ಬಿ. ಆಶಾ ವಂದಿಸಿದರು.