ಮಲ ಹೊರುವ ಪದ್ಧತಿಗೆ ಅಧಿಕಾರಿಗಳೇ ಹೊಣೆ
ಕ.ಪ್ರ.ವಾರ್ತೆ ಹಾಸನ ನ.25
ಮಲವನ್ನು ಕೈಯಿಂದ ಮುಟ್ಟಿ ಕೆಲಸ ಮಾಡುವುದು ಮತ್ತು ಮಾಡಿಸುವುದು ಅಕ್ಷಮ್ಯ ಅಪರಾಧ. ಈ ವಿರುದ್ಧ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಜರುಗಿಸದಿದ್ದರೆ ಅಧಿಕಾರಿಗಳೇ ನೇರ ಹೊಣೆಯಾಗಲಿದ್ದಾರೆ ಎಂದು ಸಫಾಯಿ ಕರ್ಮಚಾರಿಗಳ ರಾಷ್ಟ್ರೀಯ ಆಯೋಗದ ಅಧ್ಯಕ್ಷ ಎಂ. ಶಿವಣ್ಣ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆಸಿ ಸಭೆಯಲ್ಲಿ ಮಾತನಾಡಿ ಅವರು, ಮಲ ಹೊರುವ ಪದ್ಧತಿಯನ್ನು ದೇಶದಲ್ಲಿ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ದೇಶಾದ್ಯಂತ ಕಟ್ಟುನಿಟ್ಟಿನ ಕ್ರಮಗಳು ಜಾರಿಯಲ್ಲಿವೆ. ಆದರೆ ರಾಜ್ಯದಲ್ಲಿ ಇನ್ನೂ ಸಹ 10 ಸಾವಿರ ಮಂದಿ ಈ ಕೆಲಸ ಮಾಡುವವರಿದ್ದಾರೆ ಅಂತ ಸಮಾಜ ಕಲ್ಯಾಣ ಇಲಾಖೆ ಸಚಿವರೇ ಹೇಳಿದ್ದಾರೆ. ಆದರೆ ಹಾಸನ ಜಿಲ್ಲೆಯಲ್ಲಿ ಮಲ ಹೊರವವರಿಲ್ಲ ಅಂತ ವರದಿಯನ್ನು ಸರ್ಕಾರಕ್ಕೆ ನೀಡಿದ್ದಾರೆ. ಆದರೂ ಸಹ ಮೇಲಿಂದ ಮೇಲೆ ಕೈಯಿಂದ ಮಲ ಮುಟ್ಟಿ ಕೆಲಸ ಮಾಡುತ್ತಿರುವಂತಹ ವರದಿಗಳು ಪ್ರಕಟವಾಗುತ್ತಲೇ ಇದೆ. ಅದನ್ನು ತಡೆಗಟ್ಟಬೇಕು ಎಂದರು.
ಡಿ.6ರಂದು ಕಟ್ಟುನಿಟ್ಟಿನ ಕಾನೂನು ಜಾರಿ: ಮಲ ಮುಟ್ಟಿ ಕೆಲಸ ಮಾಡುವುದು ಮತ್ತು ಮಾಡಿಸುವುದನ್ನು ಕಟ್ಟುನಿಟ್ಟಾಗಿ ತಡೆಗಟ್ಟುವ ನಿಟ್ಟಿನಲ್ಲಿ ಡಿ.6ರಂದು ಕಾನೂನು ಜಾರಿಗೆ ತರಲಾಗುವುದು. ಆದ್ದರಿಂದ ಈ ಕೆಲಸವನ್ನು ಯಂತ್ರಗಳ ಮೂಲಕ ಮಾಡಿಸಬೇಕಾಗಿದ್ದು, ಆದ್ದರಿಂದ ಈ ಕೆಲಸ ಮಾಡುವರ ಸಮೀಕ್ಷೆಯನ್ನು ಸರಿಯಾಗಿ ಮಾಡಬೇಕು. ಸಮೀಕ್ಷೆಯಲ್ಲಿ ಯಾವುದೇ ಲೋಪದೋಷಗಳು ಬರದಂತೆ ಎಚ್ಚರ ವಹಿಸಬೇಕು ಎಂದರು.
ಈ ಪದ್ಧತಿಯನ್ನು ಅನುಸರಿಸುವ ವರ್ಗದ ಜನರನ್ನು ಸುಧಾರಣೆಗೆ ತರಲು ಅನೇಕರು ಹೋರಾಡಿದ್ದಾರೆ. ಆದರೂ ಸಹ ಈ ಪದ್ಧತಿ ಅವ್ಯಾಹತವಾಗಿ ನಡೆದುಕೊಂಡು ಬರುತ್ತಿದೆ. ಈ ವರ್ಗದ ಜನರಿಗೆ ಅರಿವು ಮೂಡಿಸಿ ಪುನರ್ವಸತಿ ಕಲ್ಪಿಸಿ ಸಮಾಜದ ಮುಖ್ಯವಾಹಿನಿಗೆ ತರುವುದೇ ಈ ಆಯೋಗದ ಮೂಲ ಧ್ಯೇಯವಾಗಿದೆ. ಮಲ ಹೊರುವ ಪದ್ಧತಿಯ ಕೆಲಸಕ್ಕೆ ಬಳಸಿಕೊಂಡಿದ್ದು ಕಂಡು ಬಂದಲ್ಲಿ 5 ವರ್ಷ ಜಲ್ಮಾನೆ ಮತ್ತು 1ರಿಂದ 5 ಲಕ್ಷದವರೆಗೆ ದಂಡ ವಿಧಿಸಲು ಕಾನೂನು ಜಾರಿಗೆ ತರಲಾಗಿದೆ ಎಂದರು.
ಕಾಳಜಿ ಅಗತ್ಯ: ಈ ವರ್ಗದ ಜನರಿಗೆ ಉಚಿತ ಮನೆ ಕಟ್ಟಿಸಿಕೊಡುವುದು, ಪ್ಯಾಕೇಜ್ ರೂಪದಲ್ಲಿ ಹಣ ನೀಡಿ ಮಲ ಹೊರುವ ವೃತ್ತಿಯನ್ನು ಬಿಡಿಸುವುದರ ಜೊತೆಗೆ ಇತರೆ ಕೆಲಸದಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹ ನೀಡಲಾಗುವುದು. ಇವರ ಮಕ್ಕಳಿಗೆ ಉತ್ತಮ ಶಾಲೆಗಳಲ್ಲಿ ವಿದ್ಯಾಭ್ಯಾಸ ಕಲ್ಪಿಸುವುದು, ಹೆಣ್ಣು ಮಕ್ಕಳು ಹೈನುಗಾರಿಕೆ, ಹೊಲಿಗೆ ಮುಂತಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಾಲ ಸೌಲಭ್ಯ ಒದಗಿಸಲಾಗುವುದು ಎಂದರು.
22.75 ಅನುದಾನವನ್ನು ಶೇ.100ರಷ್ಟು ಖರ್ಚು ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದರಲ್ಲದೆ, ಈ ವರ್ಗದ ಜನರ ಜಾಗೃತಿ ಮೂಡಿಸುವುದರ ಜೊತೆಗೆ ಅಧಿಕಾರಿಗಳೊಂದಿಗೆ ಕಾಳಜಿ ವಹಿಸಿ ಕೆಲಸ ಮಾಡುವ ಮೂಲಕ ಮುಂಚೂಣಿಗೆ ತರಲು ಶ್ರಮ ವಹಿಸುವಂತೆ ತಿಳಿಸಿದರು.
ಪುನರ್ ಸಮೀಕ್ಷೆ: ಕೆಎಸ್‌ಆರ್‌ಟಿಸಿ, ಎಪಿಎಂಸಿ, ಬೃಹತ್ ಆಸ್ಪತ್ರೆ ಮುಂತಾದ ಕಡೆಗಳಲ್ಲಿ ಸ್ವಚ್ಛತಾ ಕಾರ್ಯಗಳಿಗೆ ನೇಮಿಸಿಕೊಂಡಿರುವವರಿಗೆ ವೈಜ್ಞಾನಿಕವಾದ ಸುರಕ್ಷತಾ ಸಲಕರಣೆಗಳನ್ನು ನೀಡಬೇಕೆಂದು ಆದೇಶ ನೀಡಲಾಗಿದೆ. ಆದರೆ ಇದನ್ನು ಯಾರೂ ಪಾಲಿಸುತ್ತಿಲ್ಲ. ಇಂತಹವರ ವಿರುದ್ಧ ಶಿಸ್ತಿನ ಕ್ರಮ ತೆಗೆದುಕೊಳ್ಳಲಾಗುವುದು. ಸುರಕ್ಷತಾ ಸಲಕರಣೆಗಳು ಐಎಸ್‌ಐ ಮಾರ್ಕ್ ಹೊಂದಿರಬೇಕು. ಈ ಹಿನ್ನೆಲೆಯಲ್ಲಿ ಲಿಡ್‌ಕರ್ ಅಥವಾ ಸರ್ಕಾರಿ ಏಜೆನ್ಸಿಗಳಲ್ಲಿ ಖರೀದಿಸಬೇಕು ಎಂದರು.
ಸಫಾಯಿ ಕರ್ಮಚಾರಿಗಳ ಕುರಿತು ರಾಜ್ಯದಲ್ಲಿ ಪುನರ್ ಸಮೀಕ್ಷೆ ನಡೆಸಿ ವರದಿ ನೀಡುವಂತೆ ತಿಳಿಸಲಾಗಿದೆ. ಅದರ ಆಧಾರದ ಮೇಲೆ ಏನೇನು ಸವಲತ್ತು ಒದಗಿಸಬೇಕು ಎಂಬುದನ್ನು ನಿರ್ಧರಿಸಲಾಗುವುದು. ಅವರ ಪೂರ್ವಿಕರು ಈ ಪದ್ಧತಿ ಮಾಡುತ್ತಿದ್ದರೆ ಅವರನ್ನು ಪರಿಗಣಿಸುವಂತೆ ಆದೇಶ ನೀಡಲಾಗಿದೆ. ಸಮಾಜದಲ್ಲಿ ಇಂತಹವರು ಇದ್ದು ವರದಿಯಲ್ಲಿ ಇಲ್ಲದಂತಾದರೆ ಅವರು ಸೌಲಭ್ಯದಿಂದ ವಂಚಿತರಾಗುತ್ತಾರೆ. ಈ ದಿಸೆಯಲ್ಲಿ ಅಧಿಕಾರಿಗಳು ಗಮನ ಹರಿಸುವಂತೆ ತಿಳಿಸಿದರು.
ಮನೆ ನಿರ್ಮಿಸಿ ಕೊಡಿ: ಕಾರ್ಮಿಕ ನಿರ್ದೇಶನಾಲಯದ ನಿರ್ದೇಶನದಂತೆ ಕಡ್ಡಾಯವಾಗಿ ಪಿಎಫ್ ಮತ್ತು ಇಎಸ್‌ಐ ಹಣವನ್ನು ಕಾರ್ಮಿಕನ ಹೆಸರಿನಲ್ಲಿ ಕಟ್ಟಬೇಕು. ಈ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆಯೇ ಎಂದು ಅಧಿಕಾರಿಗಳು ಪರಿಶೀಲಿಸುವಂತೆ ತಿಳಿಸಿದರಲ್ಲದೆ, ಕನಿಷ್ಠ ವೇತನ ದೊರಕುವಂತೆ ಕ್ರಮ ವಹಿಸಲು ಸೂಚಿಸಿದರು.
ಹೋಬಳಿ ಮಟ್ಟದಲ್ಲಿ ಒಂದೊಂದು ಸಕ್ಕಿಂಗ್ ಯಂತ್ರ ಖರೀದಿಸುವಂತೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ತಿಳಿಸಿದರು. ಮಂಡಲ ಪಂಚಾಯ್ತಿಯಲ್ಲಿ ಕೆಲಸ ಮಾಡುವವರಿಗೆ ಯಾರಿಗೆ ಮನೆಯಿಲ್ಲ ಅವರಿಗೆ ಮನೆ ನಿರ್ಮಿಸಿಕೊಡುವಂತೆ ತಿಳಿಸಿದರು. ಎಸ್‌ಇಪಿ ಹಣವನ್ನು ಉದ್ದೇಶಿತವಾಗಿ ಬೇರೆ ಕಡೆಗೆ ವರ್ಗಾಯಿಸುವಂತಿಲ್ಲ ಎಂದ ಅವರು ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆಯನ್ನು ಈ ವರ್ಗದ ಜನರಿಗೆ ಅಳವಡಿಸುವಂತೆ ತಿಳಿಸಿದರು.
ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್ ಮಾತನಾಡಿ, 22.75 ಅನುದಾನವನ್ನು ಖರ್ಚು ಮಾಡಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರಲ್ಲದೆ, ಅಧ್ಯಕ್ಷರ ಸೂಚನೆಗಳಂತೆ ಗಮನ ಹರಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಉಪೇಂದ್ರ ಪ್ರತಾಪ್ ಸಿಂಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್, ಅಪರ ಜಿಲ್ಲಾಧಿಕಾರಿ ಡಾ. ಎಚ್.ಎನ್. ಗೋಪಾಲಕೃಷ್ಣ, ಉಪ ವಿಭಾಗಾಧಿಕಾರಿ ಬಿ. ಶರತ್, ಪ್ರೊಬೇಷನರಿ ಐಎಎಸ್ ಅಧಿಕಾರಿ ರಾಮಚಂದ್ರ ಉಪಸ್ಥಿತರಿದ್ದರು. ನಾನಾ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಇದ್ದರು.
ಎಸ್ಪಿ ವಿರುದ್ಧ ಅಸಮಾಧಾನ: ಸಫಾಯಿ ಕರ್ಮಚಾರಿಗಳ ಬಗ್ಗೆ ಸಭೆಯನ್ನು ಕರೆದಿದ್ದರೂ ಸಹ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸಭೆಗೆ ತಾವು ಬರದೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಕಳುಹಿಸುವ ಮೂಲಕ ಅಗೌರವ ತಂದಿದ್ದಾರೆ. ಈ ಸಫಾಯಿ ಕರ್ಮಚಾರಿಗಳ ಸಭೆಗಿಂತ ಎಸ್ಪಿ ಅವರಿಗೆ ಕ್ರೈಂಗೆ ಸಂಬಂಧಿಸಿದ ಸಭೆಯೇ ಹೆಚ್ಚಾಗಿ ಹೋಯಿತಾ?. ಇದು ಅಗೌರವ ಉಂಟು ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.