ಅರ್ಹ ರೈತರಿಗೆ ಮೇವು ಕತ್ತರಿಸುವ ಯಂತ್ರ ವಿತರಣೆ
ಹಾಸನ: ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಮಂಜೂರಾದ ತ್ವರಿತ ಮೇವು ಅಭಿವೃದ್ಧಿ ಕಾರ್ಯಕ್ರಮದಡಿ ಮೇವಿನ ಸದ್ಭಳಕೆ ಹಾಗೂ ಮೇವಿನ ಬರವನ್ನು ನೀಗಿಸುವುದು, ಜಾನುವಾರು ಉತ್ಪನ್ನಗಳ ಹೆಚ್ಚಳ ಮತ್ತು ಹೆಚ್ಚು ಹೆಚ್ಚು ಪಶುಪಾಲಕರು ಮೇವಿನ ಸದ್ಭಳಕೆ ಮಾಡಲು ಪ್ರೇರೇಪಿಸುವ ಉದ್ದೇಶದಿಂದ ಪಶುಪಾಲನಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಜಿಲ್ಲೆಯ ಅರ್ಹ ರೈತರುಗಳಿಗೆ ವಿವಿಧ 3 ಮಾದರಿಯ ಮೇವು ಕತ್ತರಿಸುವ ಯಂತ್ರಗಳನ್ನು ಉಚಿತವಾಗಿ ಪ್ರತಿ ತಾಲೂಕಿಗೆ ಮಿತಿಗೊಳಿಸಿದ ಅನುದಾನದಲ್ಲಿ ನೀಡಲಾಗುವುದು.
ಜಾನುವಾರುಗಳನ್ನು (ಹಸು,ಎಮ್ಮೆ, ಎತ್ತು,ಮೇಕೆ,ಕುರಿ) ಹೊಂದಿರುವ, ತಮ್ಮ ಜಮೀನಿನಲ್ಲಿ ಮೇವಿನ ಬೆಳೆ ಬೆಳೆಯುತ್ತಿರುವ ಅಥವಾ ಮೇವು ಸಂಗ್ರಹಿಸುವ ಸಾಮರ್ಥ್ಯವಿರುವ ಆಸಕ್ತ ರೈತರು ಜಿಲ್ಲಾ ಉಪನಿರ್ದೇಶಕರ ಕಚೇರಿ ಹಾಗೂ ಆಯಾ ತಾಲೂಕಿನ ಇಲಾಖಾ ಸಹಾಯಕ ನಿರ್ದೇಶಕರಿಂದ ಕಚೇರಿ ವೇಳೆಯಲ್ಲಿ ಮಾಹಿತಿ ಮತ್ತು ಅರ್ಜಿ ನಮೂನೆಗಳನ್ನು ಪಡೆಯಬಹುದು.
ಅರ್ಜಿಗಳನ್ನು ಅಗತ್ಯ ದಾಖಲಾತಿಗಳೊಂದಿಗೆ ಆಯಾ ತಾಲ್ಲೂಕಿನ ಇಲಾಖಾ ಸಹಾಯಕ ನಿರ್ದೇಶಕರ ಕಚೇರಿಗೆ ಸಲ್ಲಿಸಲು ಅ.21 ಸಂಜೆ 5 ಗಂಟೆ ಒಳಗೆ ಸಲ್ಲಿಸಬೇಕು.ಅಯ್ಕೆ ಸಮಿತಿ ನಿರ್ಧಾರವೇ ಅಂತಿಮವಾದುದು ಎಂದು ಇಲಾಖೆ ಉಪ ನಿರ್ದೇಶಕ ಡಾ. ಶ್ರೀನಿವಾಸ್ ತಿಳಿಸಿದ್ದಾರೆ.
ವಿಜಯ ಅಂಗಡಿಗೆ ರಾಜ್ಯ ಪುರಸ್ಕಾರ
ಹಾಸನ: ಹಾಸನ ಆಕಾಶವಾಣಿ ಕೃಷಿ ಪ್ರಸಾರ ನಿರ್ವಾಹಕ ಡಾ.ವಿಜಯ ಅಂಗಡಿಯವರಿಗೆ ಇತ್ತೀಚೆಗೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಸರ್ಕಲ್ ಮಾರಮ್ಮ ದೇವಸ್ಥಾನದ ಆವರಣದಲ್ಲಿ ದಿ. ನರಸಯ್ಯ ಸ್ಮಾರಕ ರಾಜ್ಯ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು. 5000 ರು. ನಗದು, ಲೋಹದ ಬೃಹತ್ ಗಣೇಶ ವಿಗ್ರಹದ ಸ್ಮರಣಿಕೆಯನ್ನು ನೀಡಿ ಸನ್ಮಾನಿಸಲಾಯಿತು. ಕೃಷಿ ಮತ್ತು ಪರಿಸರ ಕ್ಷೇತ್ರದಲ್ಲಿ ಬಹಳ ವರ್ಷಗಳಿಂದ ಕಾಯಕ ಮಾಡುತ್ತಿರುವ ಇವರ ವ್ಯಕ್ತಿತ್ವವನ್ನು ಗುರುತಿಸಿ ಪುರಸ್ಕರಿಸಲಾಗಿದೆ. ್ಲ ಬಸವಾನಂದ ಸ್ವಾಮೀಜಿ, ವಿಕ್ರಮ ಪತ್ರಿಕೆಯ ನ.ನಾಗರಾಜ್, ದೇವಸ್ಥಾನದ ಪ್ರಮುಖ ಎನ್.ಶ್ರೀನಿವಾಸ್ ಇದ್ದರು. ವಿವಿಧ ಕ್ಷೇತ್ರಗಳಲ್ಲಿ ವಿಶೇಷವಾಗಿ ಕಾರ್ಯ ಮಾಡುತ್ತಿರುವ ಗೀತಾ ಅರವಿಂದ್, ವೈ.ಎಸ್.ಪವಿತ್ರ, ರಾಮಿ ರೂಪೇಗೌಡ, ಸಣ್ಣ ಮಾರಪ್ಪ, ವಾಸಂತಿ ಎಸ್.ಹೆಗಡೆ, ಲಲಿತಾ ನಾರಾಯಣಸ್ವಾಮಿ ಮತ್ತು ಜ್ಯೋತಿರಾಜ್ ಅವರನ್ನು ಪುರಸ್ಕರಿಸಲಾಯಿತು.