'ಜಾಗತೀಕರಣದಿಂದ ಗ್ರಾಮೀಣ ಅಭಿವೃದ್ಧಿಗೆ ಮಾರಕ'
ಹಾಸನ: ಜಾಗತೀಕರಣ ನಮ್ಮ ಗ್ರಾಮೀಣ ಸಮಾಜದ ಅಭಿವೃದ್ಧಿಗೆ ಮಾರಕವಾಗಿದೆ ಎಂದು ಹಾಸನ ಸರ್ಕಾರಿ ಕಲಾ ಕಾಲೇಜಿನ ಪ್ರೊ,ಡಿ.ಜಿ. ಕೃಷ್ಣೇಗೌಡ ಅಭಿಪ್ರಾಯಪಟ್ಟರು. ಅವರು ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಿಕಸನ ಸಮಾಜಶಾಸ್ತ್ರ ವೇದಿಕೆ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಸಮಾಜದ ಮೇಲೆ ಜಾಗತೀಕರಣದ ಪ್ರಭಾವ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು ಭಾರತಕ್ಕೆ ಜಾಗತೀಕರಣ ಹೊಸದೇನಲ್ಲ. ಸಿಂಧೂ ನದಿ ನಾಗರಿಕತೆಯಿಂದ ಪ್ರಾರಂಭವಾಗಿ ಡಚ್ಚರು, ಪೋರ್ಚುಗೀಸರು, ಯುರೋಪಿಯನ್ನರು, ಮಂಗೋಲಿಯನ್ನರು, ನಾನಾ ಸಂದರ್ಭಗಳಲ್ಲಿ ನಿರಂತರವಾಗಿ ಭಾರತೀಯ ಸಂಸ್ಕೃತಿ ಮೇಲೆ ಪ್ರಭಾವ ಬೀರುತ್ತಲೇ ಬಂದಿದ್ದಾರೆ ಎಂದು ತಿಳಿಸಿದರು. ಆರ್ಥಿಕ ಹಾಗೂ ವ್ಯಾಪಾರಕ್ಕೆ ಸೀಮಿತವಾಗಿದ್ದ ಜಾಗತೀಕರಣ ಕಾಲಾಂತರದಲ್ಲಿ ಜೀವನಶೈಲಿ, ಬದುಕು, ಧರ್ಮ ಭಾಷೆ, ಸಂಸ್ಕೃತಿ ಶಿಕ್ಷಣ, ಸಾಹಿತ್ಯ, ಕಲೆ, ಆಚಾರ ವಿಚಾರ, ಆಹಾರ ಪದ್ಧತಿಗಳ ಮೇಲೂ ತಮ್ಮ ಪ್ರಭಾವವನ್ನು ಬೀರಿದೆ ಎಂದರು.
ಮೊದಲನೇ ಮಹಾಯುದ್ಧದ ಬಿಕ್ಕಟ್ಟಿನ ಪರಿಣಾಮವಾಗಿ ಸೈದ್ಧಾಂತಿಕವಾಗಿ ಜನ್ಮತಾಳಿದ ಜಾಗತೀಕರಣ ಗ್ಯಾಟ್ ಒಪ್ಪಂದ, ಡಂಕನ್ ವರದಿ ಹಾಗೂ ಡಬ್ಲ್ಯೂಟಿಓಗಳ ಮೂಲಕ ಕೃಷಿ ಕ್ಷೇತ್ರವನ್ನೂ ಬಿಡದೆ ತನ್ನ ವ್ಯಾಪ್ತಿಯನ್ನು ಹಿಗ್ಗಿಸಿಕೊಂಡು ಭಾರತೀಯ ಗ್ರಾಮೀಣ ಬದುಕನ್ನು ಅಸ್ತವ್ಯಸ್ತಗೊಳಿಸಿತು. ತಂತ್ರಜ್ಞಾನದ ಅಭಿವೃದ್ಧಿಯ ಹೆಸರಿನಲ್ಲಿ ವಿವಿಧ ಆಧುನಿಕ ಉಪಕರಣಗಳು ಮನುಷ್ಯನ ಜೀವನವನ್ನು ವೈಭವೀಕರಿಸಿರಬಹುದು ಎಂದರು.
ಆದರೆ ಅದು ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಪೂರಕವಾಗಲಿಲ್ಲ. ಇಂದು ದೇಶಿ ವಿಶ್ವವಿದ್ಯಾನಿಲಯಗಳ ಆಗಮನದಿಂದ ಶಿಕ್ಷಣ ವ್ಯಾಪಾರೀಕರಣ ಗೊಳ್ಳುತ್ತಿದೆ. ಜಾಗತೀಕರಣದ ಸವಾಲನ್ನು ಎದುರಿಸ ಬೇಕಾದರೆ ತಂತ್ರಜ್ಞಾನ ಬಳಕೆಯ ಜೊತೆಗೆ ಪೂರಕವಾದ ಉದ್ಯೋಗಗಳನ್ನು ಕೈಗೊಂಡು ಉತ್ಪಾದನೆಯನ್ನು ವೃದ್ಧಿಸಿ, ರಫ್ತಿನ ಪ್ರಮಾಣವನ್ನು ಹೆಚ್ಚಿಸಿದರೆ ಮಾತ್ರ ನಾವು ಸ್ಪರ್ಧೆಯಲ್ಲಿ ನಿಲ್ಲುತ್ತೇವೆ. ಇದಕ್ಕಾಗಿ ಯುವಜನತೆ ಆತ್ಮಸ್ಥೈರ್ಯ ವನ್ನು ಬೆಳೆಸಿ ಕೊಂಡು ಸನ್ನದ್ಧರಾಗ ಬೇಕಿದೆ ಎಂದು ಹೇಳಿದರು. ಉಪನ್ಯಾಸಕ ಎಂ.ಪಿ. ಗೋಪಾಲ್ ಮಾತನಾಡಿ, ಹಿಂದೆ ಗ್ರಾಮೀಣ ಬದುಕು ಸಾಮುದಾಯಿಕ ಚೌಕಟ್ಟಿನಲ್ಲಿ ಭಾವನಾತ್ಮಕವಾಗಿ ಅರಳುತ್ತಿತ್ತು. ಆದರೆ ಜಾಗತೀಕರಣದ ಪ್ರಭಾವದಿಂದಾಗಿ ಅದು ವೈಯಕ್ತಿಕ ನೆಲೆಗಟ್ಟನ್ನು ತಲುಪಿದೆ. ಇದು ಗ್ರಾಮ ಜೀವನದ ಆತ್ಮಸ್ಥೈರ್ಯವನ್ನೇ ಅಲುಗಾಡಿಸಿಬಿಟ್ಟಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಪ್ರಾಂಶುಪಾಲ ಡಾ.ಡಿ. ಶ್ರೀನಿವಾಸ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪವನುಕುಮಾರ್ ಸ್ವಾಗತಿಸಿದರು. ಹರಿಪ್ರಸಾದ್ ವಂದಿಸಿದರು. ದಿವ್ಯ ನಿರೂಪಿಸಿದರು.