ಮುಸುಕಿನ ಜೋಳ ಬೆಳೆ ಕ್ಷೇತ್ರೋತ್ಸವ
ಹೊಳೆನರಸೀಪುರ: ರೈತರು ಮಾಗಿ ಉಳುಮೆ ಮಾಡುವುದರಿಂದ ಕೀಟ ಮತ್ತು ರೋಗ ಬಾಧೆಯ ಹಾವಳಿಯನ್ನು ಮುಂದಿನ ಬೆಳೆಗಳಲ್ಲಿ ತಪ್ಪಿಸಬಹುದು ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕ ಡಾ.ಯು.ಎಚ್.ಭಾನುಪ್ರಕಾಶ್ ತಿಳಿಸಿದರು.
ಇಲ್ಲಿನ ಕೃಷಿ ಇಲಾಖೆಯಿಂದ ಕಸಬಾ ಹೋಬಳಿಯ ಗೊಂದಿಮಲ್ಲೇನಹಳ್ಳಿ ಗ್ರಾಮದಲ್ಲಿ ಭೂ ಚೇತನ ಯೋಜನೆಯಡಿ ಮುಸುಕಿನ ಜೋಳದ ಬೆಳೆ ಕ್ಷೇತ್ರೋತ್ಸವದಲ್ಲಿ ಅವರು ಮಾತನಾಡಿದರು.
ಗೊಂದಿಮಲ್ಲೇನಹಳ್ಳಿ ಗ್ರಾಪಂ ಸದಸ್ಯ ಚನ್ನಪ್ಪ ಕ್ಷೇತ್ರೋತ್ಸವ ಉದ್ಘಾಟಿಸಿದರು.
ಮಲ್ಲಪ್ಪನಹಳ್ಳಿ ಗ್ರಾಪಂ ಉಪಾಧ್ಯಕ್ಷೆ ಜಯಮ್ಮ ಅಧ್ಯಕ್ಷತೆ ವಹಿಸಿದ್ದರು. ಕಸಬಾ ಹೋಬಳಿಯ ಪ್ರಭಾರ ಕೃಷಿ ಅಧಿಕಾರಿ ಜಿ.ಎನ್.ದತ್ತಾತ್ರೇಯ ಸ್ವಾಗತಿಸಿದರು.
ಹಾಗೇಯೆ ಬೀಜೋಪಚಾರ ಮಾಡುವ ವಿಧಾನಗಳನ್ನು ತಿಳಿಸಿ ಬೀಜೋಪಚಾರದಿಂದ ಬೆಳೆಗಳಲ್ಲಿ ಬರುವ ರೋಗವನ್ನು ಮುಂಜಾಗ್ರತೆಯಾಗಿ ತಡೆಗಟ್ಟಬಹುದು ಮತ್ತು ಹೆಚ್ಚು ರಾಸಾಯನಿಕ ಔಷಧಿ ಬಳಸುವುದನ್ನು ಕಡಿತಗೊಳಿಸಬಹುದು ಎಂದು ನುಡಿದರು.
ಕೊಟ್ಟಿಗೆ ಗೊಬ್ಬರದ ಜೊತೆಗೆ ಲಘುಪೊಷಕಾಂಶಬಳಸುವುದರಿಂದ ಕಾಳು ಕಟ್ಟುವುದು, ಮತ್ತು ಕಾಳುಗಳ ಗುಣ ಮಟ್ಟವನ್ನು ಹೆಚ್ಚಿಸಿಬಹುದು. ಹಾಗೇಯೆ ಹೂವು ಉದುರುವುದನ್ನು ಕಡಿಮೆ ಮಾಡಬಹುದು. ಇದರಿಂದ ಇಳುವರಿಯಲ್ಲಿಯು ಹೆಚ್ಚಿನ ಲಾಭವನ್ನು ಪಡೆಯಬಹುದು ಎಂದು ಹೇಳಿದರು. ಪ್ರಗತಿಪರ ರೈತ ಚನ್ನಪ್ಪ ಮಾತನಾಡಿ, ಕ್ಷೇತ್ರೋತ್ಸವ ಕಾರ್ಯಕ್ರಮಗಳನ್ನು ಗ್ರಾಮ ಮಟ್ಟದಲ್ಲಿ ಏರ್ಪಡಿಸುವುದರಿಂದ ರೈತರಿಗೆ ತಾಕನ್ನು ಖುದ್ದಾಗಿ ವೀಕ್ಷಿಸುವುದರ ಜತೆಗೆ ತಮ್ಮ ಕ್ಷೇತ್ರಗಳಲ್ಲಿ ಅಳವಡಿಸಿಕೊಳ್ಳಲು ಹೆಚ್ಚಿನ ಅನುಕೂಲವಾಗುತ್ತದೆ ಎಂದರು.
ರೈತರು ಕೃಷಿ ಇಲಾಖೆಗೆ ವಾರಕ್ಕೆ ಒಮ್ಮೆಯಾದರು ಭೇಟಿ ನೀಡಿ ರೈತರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆಯಬೇಕು ಎಂದು ತಿಳಿಸುತ್ತಾ, ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸುವುದರ ಮೂಲಕ ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು. ಇಲಾಖೆಯ ಸೌಲಭ್ಯಗಳನ್ನು ರೈತ ಅನುವುಗಾರರ ಮುಖಾಂತರ ರೈತರಿಗೆ ತಲುಪುವಂತೆ ಮಾಡಬೇಕು ಎಂದು ಸಹಾಯಕ ಕೃಷಿ ನಿರ್ದೇಶಕರಿಗೆ ಅವರು ಮನವಿ ಮಾಡಿದರು.
ಉತ್ತಮ ಬೆಳೆ ಬೆಳೆದ ಗ್ರಾಮದ ಪ್ರಗತಿ ಪರ ರೈತ ಶಂಕರಪ್ಪ ಮಾತನಾಡಿ, ಸಾವಯವ ಗೊಬ್ಬರದ ಜೊತೆಗೆ ಲಘುಪೋಷಕಾಂಶಗಳು ಮತ್ತು ರಸಗೊಬ್ಬರಗಳನ್ನು ಬಳಸಿದ್ದಲ್ಲಿ ಮಾತ್ರ ಉತ್ತಮ ಇಳುವರಿ ಪಡೆಯಲು ಸಾಧ್ಯ ಎಂದು ತಮ್ಮ ಕೃಷಿ ಅನುಭವವನ್ನು ತಿಳಿಸಿದರು.