ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ದತ್ತಪೀಠಕ್ಕೆ ಹಿಂದೂ ಅರ್ಚಕರ ನೇಮಿಸಿ

Srinivasa Murthy VN
Updated On : 16 Oct 2013, 12:34 pm

ಕ.ಪ್ರ.ವಾರ್ತೆ ಹಾಸನ ಅ 15
ಚಿಕ್ಕಮಗಳೂರಿನ ದತ್ತಪೀಠ ವಿವಾದಕ್ಕೆ ಸಂಬಂಧಿಸಿದಂತೆ ಶ್ರೀರಾಮ ಸೇನೆ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕೆಲ ಸಮಯ ಧರಣಿ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಮಾಡಿದರು. ಪೀಠದ ಗುಹಾಂತರ ದೇವಾಲಯದಲ್ಲಿ ಹಿಂದೂ ಅರ್ಚಕರನ್ನು ನೇಮಿಸಬೇಕು. ದತ್ತಪೀಠದಲ್ಲಿ ಇಸ್ಲಾಂನ ಯಾವುದೇ ಚಟುವಟಿಕೆಗಳಿಗೆ ಅವಕಾಶ ನೀಡಬಾರದು. ಮುಸ್ಲಿಂ ವಿಧಾನ ಮತ್ತು ಗೋರಿಗಳನ್ನು ನಾಗೇನಹಳ್ಳಿಯಲ್ಲಿರುವ ಮೂಲ ಬಾಬಾ ಬುಡನ್ ದರ್ಗಾಕ್ಕೆ ವರ್ಗಾಯಿಸಬೇಕು. ಒಬ್ಬ ಹಿಂದೂ ಕಾರ್ಯ ನಿರ್ವಾಹಕ ಅಧಿಕಾರಿಯನ್ನು ನೇಮಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪುಣ್ಯಕ್ಷೇತ್ರವೆಂದು ಘೋಷಿಸಿ: ಪವಿತ್ರ ದತ್ತಪೀಠವನ್ನು ಹಿಂದೂಗಳಿಗೆ ಉಳಿಸಬೇಕು. ಪೀಠದ ಗುಹಾಂತರ ದೇವಾಲಯದಲ್ಲಿ ಹಿಂದೂ ಅರ್ಚಕರನ್ನು ನೇಮಕ ಮಾಡಿ ತ್ರಿಕಾಲ ಪೂಜೆಯನ್ನು ಕೈಗೊಳ್ಳಬೇಕು. ದತ್ತಪೀಠದಲ್ಲಿ ಇಸ್ಲಾಂನ ಯಾವುದೇ ಚಟುವಟಿಕೆ ನಡೆಯಲು ಅವಕಾಶ ನೀಡಬಾರದು. ಶ್ರೀಗುರು ದತ್ತಾತ್ರೆಯ ಪೀಠ ಪರಿಸರ ಹಿಂದೂಗಳ ಪುಣ್ಯಕ್ಷೇತ್ರವೆಂದು ಘೋಷಣೆ ಮಾಡಿ, ಸಂಪೂರ್ಣ ರಕ್ಷಣೆ ಮಾಡಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ತನಿಖೆ ನಡೆಸಿ: ದತ್ತ ಪೀಠದಲ್ಲಿ ಅಮೂಲ್ಯವಾದ ವಿಗ್ರಹಗಳು, ಕಾಣಿಕೆ ವಸ್ತುಗಳು ಕಾಣೆಯಾಗಿದೆ ಮತ್ತು ಆಸ್ತಿ-ಪಾಸ್ತಿ ಅಕ್ರಮವಾಗಿ ಹಸ್ತಾಂತರ ಹಾಗೂ ಮಾರಾಟವಾಗಿದ್ದರೆ ಕೂಡಲೇ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಂಡು ಪುನರ್ ಪ್ರತಿಷ್ಠಾಪನೆ ಮಾಡಬೇಕು. ಪೀಠಕ್ಕೆ ಬರುವ ಹಿಂದೂ ಭಕ್ತಾದಿಗಳಿಗೆ ಮತ್ತು ಸ್ವಾಮೀಜಿಯವರಿಗೆ ಮುಕ್ತ ಅವಕಾಶ ಕಲ್ಪಿಸಬೇಕು. ಎಲ್ಲಾ ಬೇಡಿಕೆಯನ್ನು ಗಮನ ನೀಡಿ ಹಿಂದೂಗಳ ಪುಣ್ಯ ಕ್ಷೇತ್ರವಾದ ದತ್ತಪೀಠವನ್ನು ಹಿಂದೂಗಳಿಗೆ ಉಳಿಸಿಕೊಡಬೇಕು ಎಂದು ಪಟ್ಟು ಹಿಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಜಾನೇಕೆರೆ ಹೇಮಂತ್, ಉಪಾಧ್ಯಕ್ಷ ಸೌದರಳ್ಳಿ ಕುಮಾರ್, ಸಕಲೇಶಪುರ ತಾಲೂಕು ಅಧ್ಯಕ್ಷ ಉಮೇಶ್, ತಾಲೂಕು ಅಧ್ಯಕ್ಷ ಸೌದ್ರಳ್ಳಿ ಸುರೇಶ್, ಹೊಳೆನರಸಿಪುರ ತಾಲೂಕು ಅಧ್ಯಕ್ಷ ಯಶೋದ ಕುಮಾರ್, ಅರಸೀಕೆರೆ ತಾಲೂಕು ಅಧ್ಯಕ್ಷ ಚೇತನ ಕುಮಾರ್ ಹಾಗೂ ಇತರರು ಇದ್ದರು.
27ರಂದು ನಗರದಲ್ಲಿ ಬೃಹತ್ ಶೋಭಯಾತ್ರೆ: ಶ್ರೀರಾಮ ಸೇನೆಯವರು ಪ್ರತಿಭಟನೆಗೂ ಮುನ್ನ ಸುದ್ದಿಗೋಷ್ಠಿ ನಡೆಸಿ ಅ.27ರಂದು ನಗರದಲ್ಲಿ ಬೃಹತ್ ಶೋಭಯಾತ್ರೆ ನಡೆಸುವುದಾಗಿ ತಿಳಿಸಿದರು.
ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಜಾನೇಕೆರೆ ಹೇಮಂತ್ ಮಾತನಾಡಿ, ಶೋಭಯಾತ್ರೆ ಅಂದು ಬೆಳಿಗ್ಗೆ 9ಕ್ಕೆ ನಗರದ ಆದಿಚುಂಚನಗಿರಿ ಶಾಖಾ ಮಠದಿಂದ ಚಾಲನೆ ನೀಡಿ, ಎನ್.ಆರ್. ವೃತ್ತದವರೆಗೂ ಮೆರವಣಿಗೆ ನಡೆಸಲಾಗುತ್ತದೆ. ಅ. 23ರಿಂದ 27ರವರೆಗೂ 3ನೇ ವರ್ಷದ ಉಚಿತ ದತ್ತಮಾಲಾ ಅಭಿಯಾನ, ದತ್ತಪೀಠ ಮುಕ್ತಿ ಸಂಕಲ್ಪ ರಥಯಾತ್ರೆ ಏರ್ಪಡಿಸಲಾಗಿದೆ. ಶ್ರೀರಾಮಸೇನೆವತಿಯಿಂದ ಕಳೆದ 13 ವರ್ಷಗಳಿಂದ ದತ್ತಮಾಲ ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಿದೆ.
ದತ್ತಮಾಲೆ ಧರಿಸಿ ಅಸಂಖ್ಯಾತ ಕಾರ್ಯಕರ್ತರು ಹಿಂದೂಗಳ ಪೀಠವಾದ ದತ್ತಾಪೀಠದಲ್ಲಿ ಶ್ರದ್ಧಾಭಕ್ತಿಯಿಂದ ಹೋಮ ಹವನಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಅ. 27ರಂದು ನಗರದಿಂದ ಒಟ್ಟು 2500ಕ್ಕಿಂತ ಹೆಚ್ಚು ಭಕ್ತರು ದತ್ತ ಪೀಠಕ್ಕೆ ಪ್ರಯಾಣ ಬೆಳಸಲಿದ್ದಾರೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement