'ಪ್ರತಿಪಕ್ಷ ನಾಯಕರ ಬಾಯಿ ಜ್ವರಕ್ಕೆ ಲಸಿಕೆ ಇಲ್ಲ'
ಕ.ಪ್ರ.ವಾರ್ತೆ ಹಾಸನ ಅ. 15
ಜಾನುವಾರುಗಳಿಗೆ ತಗುಲಿರುವ ಕಾಲುಬಾಯಿ ಜ್ವರಕ್ಕೆ ಲಸಿಕೆ ನೀಡಬಹುದು. ಆದರೆ ಪ್ರತಿಪಕ್ಷಗಳ ರಾಜಕಾರಣಿಗಳಿಗೆ ಬಂದಿರುವ ಬಾಯಿಜ್ವರಕ್ಕೆ ಲಸಿಕೆ ನೀಡಲು ಸಾಧ್ಯವಾಗುತ್ತಿಲ್ಲ.
ಹೀಗೆ ತಮ್ಮದೇ ಶೈಲಿಯಲ್ಲಿ ವಿರೋಧಿ ನಾಯಕರ ವಿರುದ್ಧ ಟೀಕಾ ಪ್ರಹಾರ ನಡೆಸಿದವರು ರಾಜ್ಯ ಪಶುಸಂಗೋಪನಾ ಸಚಿವ ಟಿ.ಬಿ. ಜಯಚಂದ್ರ.
ತಾಲೂಕಿನ ಕೋಡಿಹಳ್ಳಿ ಗ್ರಾಮದೇವತೆ ದ್ಯಾವಮ್ಮ ದೇವಾಲಯಕ್ಕೆ ಮಂಗಳವಾರ ಮಧ್ಯಾಹ್ನ ಭೇಟಿ ನೀಡಿ ಪೂಜೆ ಸಲ್ಲಿಸಿ, ಸಮೀಪದಲ್ಲಿಯೇ ಇರುವ ಮಾರುತಿ ಹಸು ಸಾಕಾಣೆ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಾಡಿರುವ ಟೀಕೆಯ ಬಗ್ಗೆ ಹೀಗೆ ಟೀಕಿಸಿದರು.
ತಾವೂ ಅಧಿಕಾರದಲ್ಲಿದ್ದಿರಿ: ರಾಜಕಿಯ ಲಾಭಕ್ಕಾಗಿ ಟೀಕೆ ಮಾಡುವವರು ತಾವು ಕೂಡ ಈ ಹಿಂದೆ ರಾಮನಗರ ಸಂಸತ್ ಸದಸ್ಯರಾಗಿದ್ದರು ಎಂಬುದನ್ನು ಮರೆಯಬಾರದು. ಮಂತ್ರಿಯೊಬ್ಬರು ಅಧಿಕಾರ ವಹಿಸಿಕೊಂಡ ಕೂಡಲೇ ಇಲಾಖೆಯಲ್ಲಿ ಲೋಪದೋಷಗಳು ಸಂಭವಿಸುತ್ತವೆ ಎಂದು ಪ್ರತಿಪಕ್ಷದ ನಾಯಕರು ತಮ್ಮ ವಿರುದ್ಧ ಮಾಡಿರುವ ಆರೋಪ ಹುರುಳಿಲ್ಲದ್ದು ಎಂದು ತಿರುಗೇಟು ನೀಡಿದರು. ಕಾಲುಬಾಯಿ ಜ್ವರ ರೋಗದಿಂದ ಮೃತಪಟ್ಟ ಹಸುಗಳಿಗೆ ರು. 25 ಸಾವಿರ, ಎತ್ತುಗಳಿಗೆ ರು. 20ಸಾವಿರ ಹಾಗೂ ಕರುಗಳಿಗೆ ತಲಾ 10 ಸಾವಿರದಂತೆ ಪರಿಹಾರಧನವನ್ನು ಶೀಘ್ರವೇ ವಿತರಿಸಲು ರಾಜ್ಯ ಸಚಿವ ಸಂಪುಟ ತೀರ್ಮಾನಿಸಿದ್ದು, ರೋಗನಿಯಂತ್ರಣಕ್ಕೆ ಸಂಬಂಧಿಸಿದಂತೆ ರೈತರು ಕೂಡ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕೆಂದರು.
ದೃಢೀಕರಿಸಿ: ರೋಗ ಭಾದೆಯಿಂದ ಹಸುಗಳು ಮೃತಪಟ್ಟಿವೆ ಎಂಬುದನ್ನು ಸಂಬಂಧಿಸಿದ ತಹಶೀಲ್ದಾರ್, ತಾಪಂ ಕಾರ್ಯನಿರ್ವಹಣಾಧಿಕಾರಿಗಳು ದೃಢೀಕರಿಸಿ ವರದಿ ಕಳುಹಿಸಿದ ನಂತರವೇ ಪರಿಹಾರ ನೀಡಲಾಗುವುದು. ಆದರೆ ಪರಿಹಾರ ಪಡೆಯುವ ನೆಪದಲ್ಲಿ ತಪ್ಪು ಮಾಹಿತಿ ನೀಡುವ ರೈತರು ಹಾಗೂ ಅಧಿಕಾರಿಗಳ ಮೇಲೆ ನಿಗಾ ವಹಿಸಲು ಸೂಚಿಸಲಾಗಿದೆ ಎಂದು ಹೇಳಿದರು.
ಅರಸೀಕೆರೆಯನ್ನು ಬರಪೀಡಿತ ಪಟ್ಟಿಯಿಂದ ಕೈಬಿಟ್ಟಿರುವುದು ತಮ್ಮ ಗಮನಕ್ಕೆ ಬಂದಿಲ್ಲ. ತಾವು ಕೂಡ ಈ ಭಾಗದ ಜನಪ್ರತಿನಿಧಿಯೇ ಆಗಿದ್ದು, ಒಂದು ವೇಳೆ ಕೈಬಿಟ್ಟಿದ್ದರೆ ಬರ ಪಟ್ಟಿಗೆ ಸೇರಿಸಿ ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ಎಲ್ಲ ರೀತಿಯ ಪ್ರಯತ್ನ ನಡೆಸಲಾಗುವುದೆಂದು ಆಶ್ವಾಸನೆ ನೀಡಿದರು.
ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ಶ್ರೀನಿವಾಸ್, ವಿಶೇಷಾಧಿಕಾರಿ ಜಿ.ಎಂ.ನಾಗರಾಜ್, ಸಹಾಯಕ ನಿರ್ದೇಶಕ ನಾಗೇಶ್, ತಾಲೂಕು ಪಶು ವೈದ್ಯಾಧಿಕಾರಿ ಮಂಜುನಾಥ್, ಅಶೋಕ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಮಲ್ಲೇನಹಳ್ಳಿ ಶಿವಶಂಕರ್, ಯುವ ಅಧ್ಯಕ್ಷ ವಿಜಯಕುಮಾರ್, ಕೋಡಿಹಳ್ಳಿ ರಘು, ಯೂನಸ್, ದುಮ್ಮೇನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಅಜಯ್, ಡೈರಿ ಮಾಲೀಕ ಪ್ರತಿಭಾ ಇದ್ದರು.