ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ವಿದ್ಯಾರ್ಥಿಗಳಿಂದ ಪಟ್ಟಾಭಿರಾಮ ದೇವಾಲಯ ಅಧ್ಯಯನ

Srinivasa Murthy VN
Updated On : 16 Oct 2013, 12:37 pm

ಕ.ಪ್ರ.ವಾರ್ತೆ ಹೊಳೆನರಸೀಪುರ ಅ.15
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪರಂಪರಾ ಕೂಟದ ವಿದ್ಯಾರ್ಥಿಗಳು ಇತ್ತೀಚೆಗೆ ಅರಕಲಗೂಡು ತಾಲೂಕಿನ ದಕ್ಷಿಣದ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ರಾಮನಾಥಪುರದ ಚತುರ್ಭುಜ ಪಟ್ಟಾಭಿರಾಮ ದೇವಾಲಯಕ್ಕೆ ಭೇಟಿ ನೀಡಿ ಪ್ರಾಯೋಗಿಕ ಬೋಧನಾ ತರಗತಿಗಳನ್ನು ನಡೆಸಿದರು.
ಈ ಸಂದರ್ಭದಲ್ಲಿ ದೇವಾಲಯದ ವಾಸ್ತುವಿನ್ಯಾಸ ಹಾಗೂ ರಾಮನಾಥಪುರದ ಚರಿತ್ರೆಯ ಕುರಿತಂತೆ ಪರಂಪರಾ ಕೂಟದ ಸಂಚಾಲಕರು ಹಾಗೂ ಕಾಲೇಜು ಪ್ರಾಂಶುಪಾಲ ಪ್ರೊ.ಎಂ.ಬಿ. ಇರ್ಷಾದ್ ಅವರು ವಿವರವಾಗಿ ಮಾಹಿತಿ ನೀಡಿದರು.
ಪುರಾಣ ಹಿನ್ನೆಲೆ: ರಾಮನಾಥಪುರ ಕ್ಷೇತ್ರವು ಕಾವೇರಿ ನದಿಯ ಎಡದಂಡೆಯ ಮೇಲಿರುವ ಈ ಯಾತ್ರಾ ಸ್ಥಳ ಪ್ರಾಚೀನ ಕಾಲದಿಂದಲೂ ಸಾವಿರಾರು ಭಕ್ತಾದಿಗಳನ್ನು ತನ್ನ ಸ್ಥಳ ಮಹಿಮೆಯಿಂದ ಆಕರ್ಷಿಸುತ್ತಾ ಬಂದಿದೆ. ಪುರಾಣಗಳ ಪ್ರಕಾರ ತ್ರೇತಾಯುಗದಲ್ಲಿ ಶ್ರೀರಾಮಚಂದ್ರನು ಇಲ್ಲಿಯ ಶಿವಲಿಂಗಕ್ಕೆ ಅರ್ಚಿಸಿದ್ದರಿಂದ ಈ ಶಿವಲಿಂಗಕ್ಕೆ ಶ್ರೀ ರಾಮೇಶ್ವರ ಎಂದು ಹೆಸರಾಯಿತು ಎಂದು ಮಾಹಿತಿ ನೀಡಿದ ಪ್ರೊ.ಎಂ.ಬಿ. ಇರ್ಷಾದ್, ಕೃತಯುಗದಲ್ಲಿ ಸಂವರ್ಥಕೇಶ್ವರ, ತ್ರೇತಾಯುಗದಲ್ಲಿ ವಾಸುಕೀಶ್ವರ, ದ್ವಾಪರಯುಗದಲ್ಲಿ ವಹ್ನೀಶ್ವರ ಹಾಗೂ ಕಲಿಯುಗದಲ್ಲಿ ರಾಮೇಶ್ವರ ಎಂದು ಕರೆಸಿಕೊಳ್ಳುತ್ತಿರುವ ಶಿವಲಿಂಗವು ಚತುರ್ಯುಗ ಮೂರ್ತಿ ಎಂದು ಪ್ರಖ್ಯಾತಿ ಪಡೆದಿದೆ ಎಂದರು. ಇಲ್ಲಿರುವ ಸುಬ್ರಹ್ಮಣ್ಯೇಶ್ವರ, ಪಟ್ಟಾಭಿರಾಮ, ಅಗಸ್ತೇಶ್ವರ, ಪ್ರಸನ್ನ ರಾಮೇಶ್ವರ, ಆಂಜನೇಯಸ್ವಾಮಿ, ಲಕ್ಷ್ಮೀನರಸಿಂಹಸ್ವಾಮಿ ಮತ್ತು ದುರ್ಗಾ ಪರಮೇಶ್ವರಿ ದೇವಸ್ಥಾನದೊಂದಿಗೆ ವಹ್ನಿ ಪುಷ್ಕರಿಣಿ, ಪಾಪವಿನಾಶಿನಿಯಾದ ಭೂಗರ್ಭ ಗಾಯಿತ್ರಿ ಶಿಲೆಗಳು ಪ್ರಖ್ಯಾತವಾಗಿದೆ ಎಂದು ಸ್ಥಳದ ಮಹಿಮೆ  ವಿದ್ಯಾರ್ಥಿಗಳಿಗೆ ವಿವರಿಸಿದರು.
ವಾಸ್ತುಶೈಲಿ: ಐತಿಹಾಸಿಕವಾಗಿ ಹೊಯ್ಸಳರು ವಿಜಯನಗರದ ಅರಸರು, ಮೈಸೂರಿನ ಒಡೆಯರು, ಆಳ್ವಿಕೆಗೆ ಒಳಪಟ್ಟಿದ್ದ ಈ ಸ್ಥಳ ಐತಿಹಾಸಿಕ ಖ್ಯಾತಿಯನ್ನು ಪಡೆಯಿತು. ಇಲ್ಲಿನ ಪ್ರಸನ್ನ ರಾಮೇಶ್ವರ ದೇವಾಲಯ, ಹೊಯ್ಸಳ ಶೈಲಿಯಲ್ಲಿ ನಿರ್ಮಿತವಾದ ಹೊಯ್ಸಳರ ಕಾಲದ ದೇವಾಲಯ, ನಕ್ಷತ್ರಾಕಾರದ ಗರ್ಭಗುಡಿ, ಸುಖನಾಶಿ, ಅಪೂರ್ವ ಕಾಲಕುಸಿರಿಯ ಭುವನೇಶ್ವರಿ ಸುಂದರ ಕಂಬಗಳನ್ನು ಒಳಗೊಂಡಿದೆ. ಈ ದೇವಾಲಯ ಮೂರನೆ ನರಸಿಂಹನ ಕಾಲದಲ್ಲಿ ಕಟ್ಟಲ್ಪಟ್ಟಿದೆ ಎಂದು ತಿಳಿಸಿದರು.
ಇಲ್ಲಿಯ ಮತ್ತೊಂದು ಮಹತ್ವದ ದೇವಾಲಯ ದುರ್ಗಾ ಪರಮೇಶ್ವರಿ ಈ ದೇವಾಲಯದ ವಿಗ್ರಹವನ್ನು ಶ್ರೀ ಶಂಕರಾಚಾರ್ಯರು ಸ್ಥಾಪಿಸಿದರೆಂದು ಪಟ್ಟಾಭಿರಾಮ ಎಂಬ ನಾಮಾಂಕಿತವುಳ್ಳ ಶ್ರೀರಾಮ ತನ್ನ ತೊಡೆಯ ಮೇಲೆ ಸೀತಾದೇವಿಯನ್ನು ಕುಳ್ಳಿರಿಸಿಕೊಂಡಿರುವ ಅಪೂರ್ವ ಭಂಗಿ ಈ ಕ್ಷೇತ್ರದಲ್ಲಿ ಮಾತ್ರವಿದೆ. ಆದ್ದರಿಂದ ರಾಮನಾಥಪುರದ ಶ್ರೀಪಟ್ಟಾಭಿರಾಮನ ದೇವಾಲಯ ವೈಶಿಷ್ಟ್ಯಪೂರ್ಣವಾಗಿದೆ ಎಂದರು.
ಪ್ರತಿವರ್ಷ ಮಾರ್ಗಶಿರದ ಶುದ್ಧಷಷ್ಠಿಯಂದು ರಥೋತ್ಸವ ಜಾತ್ರ ಜರುಗುತ್ತದೆ. ರಾಮನಾಥಪುರದ ಜಾತ್ರೆಯೆಂದರೆ ಬಹಳ ಪ್ರಸಿದ್ದವಾದ ಜಾತ್ರೆಯಾಗಿತ್ತು. ರಥೋತ್ಸವ ಈ ಜಾತ್ರೆಯ ಪ್ರಮುಖವಾದ ಆಕರ್ಷಣೆ ಜನಪದ ಕಲೆಗಳಾದ ಕೋಲಾಟ, ಲಾವಣಿ, ಕುಸ್ತಿ ಕಂಸಾಳೆ ನೃತ್ಯ ಮುಂತಾದ ಪ್ರತಿಭೆಗಳ ವ್ಯವಸ್ಥಿತ ಪ್ರದರ್ಶನ ರಾಮನಾಥಪುರದ ಜಾತ್ರೆಯಲ್ಲಿ ಕಾಣಲಾಗುತ್ತಿತ್ತು. ಆದರೆ ಇತ್ತೀಚೆಗೆ ಇಲ್ಲಿಯ ಜಾತ್ರೆ ಹಿಂದಿನ ವೈಭವ ಕಳೆದುಕೊಂಡಿರುವುದು ವಿಷಾದನೀಯ. ಗತಕಾಲದಿಂದಲೂ ನಡೆಸಿಕೊಂಡು ಬಂದಿರುವ ಸಾಂಪ್ರಾದಾಯಿಕ ಪರಂಪರೆಯನ್ನು ಪ್ರತಿಬಿಂಬಿಸುವ ರಥೋತ್ಸವ ಬಹಳ ವಿಜೃಂಭಣೆಯಿಂದ ಭಕ್ತಿಪೂರ್ವಕವಾಗಿ ನಡೆಸಲಾಗುತ್ತಿದೆ. ಒಂದು ತಿಂಗಳಿಗಿಂತಲೂ ಅಧಿಕವಾಗಿ ಸೇರುತ್ತಿದ್ದ ದನಗಳ ಜಾತ್ರೆಯು ಇತ್ತೀಚೆಗೆ ಅಷ್ಟಾಗಿ ಸೇರುತ್ತಿಲ್ಲ ಎಂದು ವಿಷಾಧಿಸಿದರು.
ಸಂತೃಪ್ತಿ: ದಕ್ಷಿಣದ ಕಾಶಿ ಎಂದೇ ಖ್ಯಾತವಾಗಿರುವ ಶ್ರೀ ಕ್ಷೇತ್ರ ರಾಮನಾಥಪುರಕ್ಕೆ ಭಕ್ತಾದಿಗಳು ತಂಡೋಪತಂಡವಾಗಿ ಬರುತ್ತಲೇ ಇದ್ದಾರೆ. ಆದ್ಯಾತ್ಮಿಕ ಪರಂಪರೆಗೆ ಪೋಷಣೆ ಇತ್ತ ಈ ಪುಣ್ಯ ಕ್ಷೇತ್ರದಲ್ಲಿ ಹಲವು ಭಕ್ತಾದಿಗಳ ಇಷ್ಟಾರ್ಥಗಳು ನೆರವೇರಿ ಪಾಪಗಳು ನಾಶವಾಗಿವೆ ಎಂಬ ಭಾವನೆಯಿಂದ ಮಾನಸಿಕ ಸಂತೃಪ್ತಿ ಭಕ್ತ ಸಮೂಹಕ್ಕೆ ಒದಗಿದೆ. ಇಂದಿಗೂ ದೇವಾಲಯದ ಹಿಂದೆ ಇರುವ ಕಾವೇರಿ ನದಿ ಬಡವರ ಪಾಲಿನ ಗಂಗೆ ಎಂದು ಖ್ಯಾತಿ ಪಡೆದಿದೆ.
ಇಲ್ಲಿಯ ನದಿಯಲ್ಲಿ ಮಿಂದು ಭಕ್ತಿ ಭಾವದಿಂದ ಪೂಜೆಗೈದರೆ, ಎಲ್ಲ ರೋಗಗಳು ನಿವಾರಣೆಯಾಗಿ ಮಾನಸಿಕ ಭೀತಿ ಮರೆಯಾಗಿ ಮನಸ್ಸು ಪ್ರಫುಲ್ಲವಾಗುತ್ತದೆ ಎಂಬ ನಂಬಿಕೆ ವೈಜ್ಞಾನಿಕವಾಗಿ ಸತ್ಯವಾಗುತ್ತಾ ಬಂದಿದೆ ಎಂದು ಇರ್ಷಾದ್ ತಿಳಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಕಿರಣ್ ರಾವತ್ ಹಾಗೂ ಕೃಷ್ಣನಾಯಕ್ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement