ಶ್ರೀಮಂತಿಕೆ ಬಂದರೂ ಕೆಟ್ಟ ಕೆಲಸ ಮಾಡಬಾರದು
ನುಗ್ಗೇಹಳ್ಳಿ (ಚನ್ನರಾಯಪಟ್ಟಣ ತಾ.): ಶ್ರೀಮಂತಿಕೆ ಬಂದಿತೆಂದು ಕೆಟ್ಟ ಕೆಲಸ ಮಾಡಿದರೆ ಶ್ರೀಮಂತಿಕೆಯನ್ನು ತಾಯಿ ಲಕ್ಷ್ಮಿ ಹಾಳು ಮಾಡುತ್ತಾಳೆ ಎಂದು ಬೆಲಗೂರು ಕ್ಷೇತ್ರದ ಬಿಂದುಮಾಧವ ಸ್ವಾಮಿ ತಿಳಿಸಿದರು.
ಅವರು ಇಲ್ಲಿಯ ಹೊಯ್ಸಳ ವೇದಿಕೆಯಲ್ಲಿ ಪುರವರ್ಗ ಮಠದಲ್ಲಿ ಇತ್ತೀಚೆಗೆ ನಡೆದ ವಿಶ್ವಶಾಂತಿ ಲೋಕ ಕಲ್ಯಾಣಾರ್ಥ ವಿಶ್ವ ಮಂಗಳ ಸಹಸ್ರ ನವದುರ್ಗ ಜಪಯಜ್ಞ ಹಾಗೂ ಭಾವೈಕ್ಯತಾ ಧರ್ಮ ಜಾಗೃತಿ ಸಮಾರಂಭದಲ್ಲಿ ನೇತೃತ್ವ ವಹಿಸಿ ಆಶೀರ್ವಚನ ನೀಡಿದರು.
ಹಣವಂತರು ಲೋಕ ಕಲ್ಯಾಣ ಹಾಗೂ ಅಭಿವೃದ್ಧಿ ಕೆಲಸಗಳಿಗೆ ಹಣವನ್ನು ಸದ್ಬಳಕೆ ಮಾಡಬೇಕು. ಆಗ ಅವರ ಮನಸ್ಸಿಗೆ ಆದಿಶಕ್ತಿ ಶಾಂತಿ ನೆಮ್ಮದಿ ನೀಡುತ್ತಾಳೆ ಎಂದರು.
ಶಕ್ತಿ ದೇವತೆ ಆರಾಧನೆ ದ್ವಾಪರಾ ಯುಗದಿಂದಲೂ ಇದೆ. ಲೋಕ ಕಲ್ಯಾಣಕ್ಕೆ ನವರಾತ್ರಿ ಪೂಜೆಗಳು ನಡೆಯಬೇಕು. ನಿತ್ಯ ತಾಯಿ ಶಾರದೆಯನ್ನು ಭಕ್ತಿಯಿಂದ ಪ್ರಾರ್ಥಿಸಿ ಕುಂಕುಮ ಅರಿಶಿನ ಗಂಧ ಧರಿಸುವುದರಿಂದ ಆ ತಾಯಿ ವಿದ್ಯೆ ಕೊಟ್ಟು ಕಾಪಾಡುತ್ತಾಳೆ ಎಂದು ನುಡಿದರು.
ಸನ್ಮಾರ್ಗ ಇರಲಿ: ಹಾರನಹಳ್ಳಿ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿ ಮಾತನಾಡಿ, ಜಾತಿ- ಭೇದ ಮರೆತು ಭಕ್ತಿಭಾವನೆಯಿಂದ ಜನ ಬಾಳಿದರೆ ಕಾಲಕಾಲಕ್ಕೆ ಮಳೆ ಬೆಳೆ ಆಗುತ್ತದೆ. ಮನುಷ್ಯ ಸನ್ಮಾರ್ಗದಲ್ಲಿ ನಡೆಯಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ನುಗ್ಗೇಹಳ್ಳಿ ಹಿರೆಕೆರೆ ಹಾಗೂ ಹೋಬಳಿಯ 10 ಕೆರೆಗಳಿಗೆ ಕುಡಿಯುವ ನೀರು ಹರಿಸುವ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡುತ್ತೇನೆ. ತಾಲೂಕಿನಲ್ಲಿ ಅಂತರ್ಜಲದ ಸಮಸ್ಯೆ ಇದೆ. ಜಲಾನಯನ ಇಲಾಖೆಯಿಂದ ಅಂತರರ್ಜಲ ಅಭಿವೃದ್ಧಿಪಡಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ಸನ್ಮಾನ: ಬೆಂಗಳೂರಿನ ಡಾ. ಆಶಾ ಬೆನಕಪ್ಪ, ನುಗ್ಗೇಹಳ್ಳಿ ಚನ್ನಮಲ್ಲಪ್ಪ, ನಿವೃತ್ತ ಶಿಕ್ಷಕ ಮಹದೇವಪ್ಪ, ರಾಮಕೃಷ್ಣ, ಚಂದ್ರಣ್ಣ ಅವರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಜಿಪಂ ಅದ್ಯಕ್ಷೆ ಅಂಬಿಕಾ ರಾಮಣ್ಣ, ಮಾಜಿ ವಿಧಾನ ಸಭಾ ಸದಸ್ಯ ಬಿ.ಆರ್. ಗುರುದೇವ್, ಜಿಪಂ ಸದಸ್ಯೆ ಕುಸುಮಾ ಬಾಲಕೃಷ್ಣ, ಕರ್ಪೂರಹಳ್ಳಿ ಜಂಗಮ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಮಹೇಶ್ವರ ಸ್ವಾಮೀಜಿ, ಹಾಸನ ಆದಿಚುಂಚುನಗಿರಿ ಶಾಖಾಮಠದ ಶಂಭುನಾಥ ಸ್ವಾಮೀಜಿ, ಮೆಳಿಯಮ್ಮ ಆದ್ಯಾತ್ಮಿಕ ಕೇಂದ್ರದ ಚಂದ್ರಶೇಖರ ಗುರೂಜಿ, ಎಪಿಎಂಸಿ ಮಾಜಿ ಅದ್ಯಕ್ಷ ಬಿ.ಆರ್. ದೊರೆಸ್ವಾಮಿ, ಪಟೇಲ್ ಮಂಜಣ್ಣ, ಪ್ರಾಂಶುಪಾಲ ಎಂ.ಬಿ. ಇರ್ಷಾದ್, ಬಸವಲಿಂಗಪ್ಪ, ಸಿ.ಬಿ. ಶಂಕರ್, ಅ.ಭಾ.ತಾ.ಮ ಕಾರ್ಯದರ್ಶಿ ರೇಖಾ ಗಿರೀಶ್, ಶಿಕ್ಷಕ ಶಂಕರ್ ಇದ್ದರು.