ಶ್ರೀರಾಮ್ ಚಿಟ್ಸ್ ಕಚೇರಿ ಧ್ವಂಸ
ಕ.ಪ್ರ.ವಾರ್ತೆ ಹಾಸನ ಅ. 15
ಶ್ರೀರಾಂ ಚಿಟ್ ಫಂಡ್ಸ್ನಲ್ಲಿ ಗ್ರಾಹಕರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ಕಾವಲು ಪಡೆ ಕಾರ್ಯಕರ್ತರು ಮಂಗಳವಾರ ಕಚೇರಿಯ ಪೀಠೋಪಕರಣ ಎಸೆದಾಡಿ ಧ್ವಂಸಗೊಳಿಸಿ ಪ್ರತಿಭಟನೆ ನಡೆಸಿದರು.
ಕಳೆದ ಹಲವು ವರ್ಷಗಳಿಂದ ಕಂಪನಿಯವರು ಚೀಟಿ ವ್ಯವಹಾರ ನಡೆಸುತ್ತಿದ್ದಾರೆ. ಆದರೆ ಚೀಟಿ ಪಡೆದ ಗ್ರಾಹಕರಿಗೆ ಅನೇಕ ತಿಂಗಳು ಕಳೆದಿದ್ದರೂ ಹಣ ನೀಡುತ್ತಿಲ್ಲ. ಚೀಟಿ ಹಾಕಿದವರು ಕೇಳಿದರೆ ಅನಾವಶ್ಯಕ ಕಿರುಕುಳ ನೀಡುತ್ತಿದ್ದಾರೆ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.
ಉಡಾಫೆ ಉತ್ತರ: ಸಾರ್ವಜನಿಕರಿಂದ ಚೀಟಿ ಹಾಕಿಸಿಕೊಂಡು 7 ತಿಂಗಳು ಕಳೆದರೂ, ಹಣ ನೀಡದೆ ಮೋಸ ಮಾಡಲಾಗಿದೆ. ಮೋಹನ್ ಮತ್ತು ದೀಪಿಕಾ ಎಂಬುವರು ಶ್ರೀರಾಂ ಚಿಟ್ಸ್ನಲ್ಲಿ ಚೀಟಿಯನ್ನು ಹಾಕಿದ್ದರು. ತಮಗೆ ಆರ್ಥಿಕವಾಗಿ ಕಷ್ಟ ಇದ್ದ ಪರಿಣಾಮ ಹಾಕಿದಂತಹ ಚೀಟಿಯನ್ನು ಕಳೆದ ನಾಲ್ಕು ತಿಂಗಳ ಹಿಂದೆಯೇ ಕೂಗಲಾಗಿದೆ. ಆದರೆ ಈವರೆಗೂ ಚೀಟಿ ಹಣವನ್ನು ನೀಡಿಲ್ಲ. ಚೀಟಿ ಹಣ ನೀಡುವಂತೆ ಕೇಳಿದರೆ ಉಡಾಫೆಯ ಉತ್ತರ ನೀಡುವ ಮೂಲಕ ಸಾರ್ವಜನಿಕರಿಗೆ ಮೋಸ ಮಾಡಲು ಯತ್ನಿಸುತ್ತಿದ್ದಾರೆ ಆರೋಪಿಸಿದರು.
ಇಂತಹ ಸಂಸ್ಥೆಯಲ್ಲಿ ನಂಬಿಕೆ ಇಟ್ಟು ಸಾವಿರಾರು ಜನರು ಹಣದ ವ್ಯವಹಾರ ಮಾಡುತ್ತಾ ಬಂದಿದ್ದಾರೆ. ಸಾರ್ವಜನಿಕರಿಗೆ ಹಣದ ಅವಶ್ಯಕತೆ ಇರುವ ಸಂದರ್ಭದಲ್ಲಿ ಶ್ರೀರಾಂ ಚಿಟ್ಸ್ ಸ್ಪಂದಿಸದೆ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾರೆ. ಸಾಕಷ್ಟು ಮಂದಿ ಈ ಸಂಸ್ಥೆಯಲ್ಲಿ ಚೀಟಿ ವ್ಯವಹಾರವನ್ನು ನಡೆಸಿದ್ದು, ಸಾಕಷ್ಟು ಮಂದಿ ಇನ್ನು ಹಣವನ್ನು ಸರಿಯಾಗಿ ಪಾವತಿ ಮಾಡಿಲ್ಲ ಎಂದು ದೂರಿದರು.
ಶಿಸ್ತುಕ್ರಮ ಅಗತ್ಯ: ಸಾರ್ವಜನಿಕರಿಗೆ ಮೋಸ ಮಾಡುತ್ತಿರುವ ಈ ಸಂಸ್ಥೆ ವಿರುದ್ಧ ಕಟ್ಟು ನಿಟ್ಟಿನ ಕಾನೂನು ಕ್ರಮ ಜರುಗಿಸಬೇಕು. ಈ ರೀತಿಯ ನಾನಾ ಸಂಸ್ಥೆಗಳು ಸಾರ್ವಜನಿಕರ ಹಣವನ್ನು ವಂಚಿಸಿ ನುಂಗಿ ಹಾಕಲಾಗುತ್ತಿದೆ. ಅಂತಹ ಸಂಸ್ಥೆಗಳನ್ನು ಪತ್ತೆ ಹಚ್ಚಿ ಮೋಸ ಹೋಗುತ್ತಿರುವ ಸಾರ್ವಜನಿಕರನ್ನು ಕಾಪಾಡಬೇಕಾದ ಅವಶ್ಯಕತೆ ಇದೆ. ಇಂತಹ ಸಂಸ್ಥೆಗಳು ಮತ್ತೆ ತಲೆ ಎತ್ತದಂತೆ ಶಿಸ್ತುಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಸಂಸ್ಥೆಯಲ್ಲಿ ಚೀಟಿ ವ್ಯವಹಾರವನ್ನು ನಿರ್ವಹಿಸುವ ಮ್ಯಾನೇಜರ್ ಈಗಾಗಲೇ ಪರಾರಿಯಾಗಿದ್ದಾನೆ. ಚೀಟಿ ಹಾಕಿರುವ ಸಾರ್ವಜನಿಕರಿಗೆ ಹಣ ವಾಪಸ್ ಬರುವವರೆಗೂ ಶ್ರೀರಾಂ ಚಿಟ್ ಫಂಡ್ಸ್ ಕಚೇರಿ ಬಾಗಿಲು ತೆಗೆಯಲು ಅವಕಾಶ ನೀಡಬಾರದು. ಈ ವಿರುದ್ಧ ನ್ಯಾಯಕ್ಕಾಗಿ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ ಅವರು, ಇದೇ ರೀತಿ ಹತ್ತಾರು ಗ್ರಾಹಕರಿಗೆ ಅನ್ಯಾಯವಾಗಿದ್ದು, ನಿಗದಿತ ಹಣ ಕೊಡುವವರಿಗೂ ವಹಿವಾಟು ಬಂದ್ ಮಾಡಬೇಕು ಎಂದು ಆಗ್ರಹಿಸಿದರು.
ಧ್ವಂಸ: ಕೂಡಲೇ ನ್ಯಾಯ ದೊರಕಿಸಿಕೊಡದಿದ್ದರೆ ಕರ್ತವ್ಯ ನಿರ್ವಹಿಸಲು ಬಿಡುವುದಿಲ್ಲ ಎಂದು ಎಚ್ಚರಿಸಿ, ಧಿಕ್ಕಾರ ಕೂಗಿದರು. ಈ ಸಂದರ್ಭ ಪ್ರತಿಭಟನಾಕಾರರು ಕಚೇರಿ ಪೀಠೋಪಕರಣ ಮತ್ತು ಕೆಲ ವಸ್ತುಗಳನ್ನು ಎಸೆದಾಡಿ ಧ್ವಂಸಗೊಳಿಸಿದರು. ನಂತರ ಪ್ರತಿಭಟನಾಕಾರರು ನಗರ ಪೊಲೀಸ್ ಠಾಣೆಗೆ ತೆರಳಿ ಶ್ರೀರಾಂ ಚಿಟ್ ಸಂಸ್ಥೆಯನ್ನು ಕೂಡಲೇ ಬಂದ್ ಮಾಡಿ ಮೋಸ ಹೋಗಿರುವ ಸಾರ್ವಜನಿಕರ ಹಣವನ್ನು ವಾಪಸ್ ಕೊಡಿಸುವಂತೆ ಒತ್ತಾಯಿಸಿ ದೂರು ನೀಡಿದರು.
ಪ್ರತಿಭಟನೆಯಲ್ಲಿ ಕಾವಲು ಪಡೆಯ ಅಧ್ಯಕ್ಷ ಎಚ್.ಎನ್. ನಟೇಶ್, ಜಿಲ್ಲಾ ಕಾರ್ಯದರ್ಶಿ ಬಿ.ಎಸ್. ನವೀನ್ ಕುಮಾರ್, ತಾಲೂಕು ಅಧ್ಯಕ್ಷ ಬಿ.ವಿ. ಭಾನುಪ್ರಕಾಶ್, ಸಂಘಟನಾ ಕಾರ್ಯದರ್ಶಿ ಸೈಯದ್ ಏಜಾಜ್ ಹಾಗೂ ಇತರರು ಇದ್ದರು.
ಬೇಡಿಕೆಗಳು
1. ಶ್ರೀರಾಂ ಚಿಟ್ ಫಂಡ್ಸ್ನ ಬಾಗಿಲು ಕೂಡಲೇ ಬಂದ್ಮಾಡಿಸಬೇಕು.
2. ಜಿಲ್ಲೆಯಲ್ಲಿ ಈ ರೀತಿಯ ಹೆಸರಿನಲ್ಲಿ ಹಲವಾರು ಸಂಸ್ಥೆಗಳು ನಡೆಸುತ್ತಿರುವ ಅವ್ಯವಹಾರ ಬಂದ್ ಮಾಡಬೇಕು.
3. ಇಂತಹ ಮೋಸ ಮಾಡುವ ಸಂಸ್ಥೆಯಿಂದ ವಂಚನೆಗೆ ಒಳಗಾಗಿರುವ ಸಾರ್ವಜನಿಕರಿಗೆ ಹಣವನ್ನು ವಾಪಸ್ ಕೊಡಿಸಬೇಕು.
4. ಸಾರ್ವಜನಿಕರ ಹಣವನ್ನು ಲೂಟಿ ಮಾಡುತ್ತಿರುವ ಈ ರೀತಿಯ ಫ್ರಾಡ್ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು.