ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸರ್ಕಾರಿ ನೌಕರರ ಕರ್ತವ್ಯ ಮೆಚ್ಚುಗೆ ಗಳಿಸುವಂತಾಗಬೇಕು

Srinivasa Murthy VN
Updated On : 16 Oct 2013, 12:37 pm

ಹಾಸನ: ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆಯಿಂದ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ಚಂದ್ರಶೇಖರ್ ಗುರೂಜಿ ಸರಳ ವಾಸ್ತು ಪ್ರವಚನ ಕಾರ್ಯಕ್ರಮವನ್ನು ಜಿಲ್ಲಾ ಪ್ರಧಾನ ನ್ಯಾಯಾಧೀಶ ಜೆ.ಎಸ್. ಸೋಮಶೇಖರ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಸರ್ಕಾರಿ ನೌಕರರ ಕರ್ತವ್ಯ ಜನಸಾಮಾನ್ಯರಿಗೆ ಮೆಚ್ಚುಗೆ ಆಗುವಂತೆ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು. ಪ್ರತಿಭಾವಂತ ಮಕ್ಕಳ ಬಗ್ಗೆ ಪ್ರಶಂಸಿದರು.
ದ್ವಿತೀಯ ಪಿಯುಸಿ ಮತ್ತು ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ಮಕ್ಕಳಿಗೆ ಹಾಗೂ ನಿವೃತ್ತ ನೌಕರರಿಗೆ, ಪ್ರಗತಿ ಪರರೈತರನ್ನು ಸನ್ಮಾನಿಸಿ ಗೌರವಿಸಲಾಯಿತು.  ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಾಗೂರು ಮಂಜೇಗೌಡ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಪಟೇಲ್ ಪರಡ್, ಖಜಾಂಚಿ ಯೋಗನಂದ, ಮಾಜಿ ಅಧ್ಯಕ್ಷ ಸಿ.ಎನ್. ಶೇಷೇಗೌಡ, ವಾಸ್ತುಶಿಲ್ಪಿ ಎಚ್.ಎಸ್. ದೇವೆಂದ್ರ, ಸಂಘದ ಉಪಾಧ್ಯಕ್ಷ ಜಯರಾಮಯ್ಯ, ವಾರ್ತಾ ಇಲಾಖೆ ಅಧಿಕಾರಿ ವಿನೋದ್ ಚಂದ್ರ , ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಲೀಲಾವತಿ ಇತರರು ಇದ್ದರು.

ವಿಜಯದುರ್ಗದಲ್ಲಿ  ಹೋಮ
ಹಾಸನ:
ಆಲೂರು ತಾಲೂಕಿನ ಶ್ರೀ ವಿಜಯದುರ್ಗ ಕ್ಷೇತ್ರದಲ್ಲಿ ನವರಾತ್ರಿಯ ಅಂಗವಾಗಿ ಭಕ್ತರ ಶ್ರೇಯಸ್ಸಿಗಾಗಿ ಸೋಮವಾರ ಚಂಡಿಕ ಹೋಮ ನೆರವೇರಿಸಲಾಯಿತು.
ಕಳೆದ 9 ದಿನಗಳಿಂದಲೂ ಶ್ರೀ ವಿಜಯದುರ್ಗ ಕ್ಷೇತ್ರದ ದೇವಾಲಯದಲ್ಲಿ ನಾನಾ ಪೂಜೆಗಳನ್ನು ಸಲ್ಲಿಸಲಾಯಿತು. ಕೊನೆಯ ದಿವಸ ಚಂಡಿಕಾಹೋಮ ನಂತರ ಪೂರ್ಣಾಹುತಿ ಹೋಮ ಮಾಡುವುದರ ಮೂಲಕ ನವರಾತ್ರಿ ಕೊನೆಯದಿನ ಆಚರಿಸಿ ಸರ್ವರಿಗೂ ಒಳ್ಳೆಯದಾಗಿ ಶಾಂತಿ ನೆಮ್ಮದಿ ಬರಲೆಂದು ದೇವರಲ್ಲಿ ಪ್ರಾರ್ಥಿಸಲಾಯಿತು. ಶ್ರೀ ಉದಸಲಮ್ಮ ಮತ್ತು ಶ್ರೀ ಮತ್ಸಲಮ್ಮ ದೇವರನ್ನು ಅಲಂಕರಿಸಲಾಗಿತ್ತು. ಸಾವಿರಾರು ಭಕ್ತರಿಗೆ ಅನ್ನದಾನ ಮಾಡಲಾಯಿತು. ದೇವಾಲಯ ವ್ಯವಸ್ಥಾಪಕ  ಶ್ರೀಧರ್ ರಾಜ ಅರಸ್  ಪಾಲ್ಗೊಂಡಿದ್ದರು.

ಪೂಜೆ ಮಾಡಿದ ವ್ಯಕ್ತಿ ಮೇಲೆ ಹಲ್ಲೆ
ಹಾಸನ:
ದಲಿತ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ತಾಲೂಕಿನ ಕುದುರುಗುಂಡಿಯಲ್ಲಿ ಸೋಮವಾರ ನಡೆದಿದೆ.
ತಾಲೂಕಿನ ನಿಟ್ಟೂರು ಹೋಬಳಿಯ ಕುದುರುಗುಂಡಿ ಗ್ರಾಮದ ವಾಸಿ ಕೋಡಿಗಯ್ಯ ಎಂಬ ವ್ಯಕ್ತಿಯೇ ಮಾರಣಾಂತಿಕ ಹಲ್ಲೆಗೆ ತುತ್ತಾಗಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಿಂದನೆ: ವಿಜಯದಶಮಿಯಂದು ಗ್ರಾಮದ ಕುದುರುಗುಂಡಿಯಲ್ಲಿ ದಲಿತ ವ್ಯಕ್ತಿ ಬಸವರಾಜು ಎಂಬವರು ಗ್ರಾಮದಲ್ಲಿ ಇರುವ ಬನ್ನಿ ಮರಕ್ಕೆ ಪೂಜೆಯನ್ನು ಸಲ್ಲಿಸಿದರು. ಇದರಿಂದ ಕುಪಿತಗೊಂಡ ಸವರ್ಣೀಯರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.  
ನಂತರ ಕೋಡಿಗಯ್ಯ ಅವರು ಗ್ರಾಮದಲ್ಲಿ ವಾದ್ಯ ನುಡಿಸುವ ಸಂದರ್ಭದಲ್ಲಿ ವಿನಾಕಾರಣ ಸವರ್ಣೀಯರ ಜಗಳ ತೆಗೆದು ಮಾರಣಾಂತಿಕ ಹಲ್ಲೆಯನ್ನು ನಡೆಸಿದ್ದಾರೆ ಎನ್ನಲಾಗಿದೆ.
ಸವರ್ಣೀಯರಾದ ಹರೀಶ್, ಮಂಜೇಶ್, ಆನಂದ್, ಶಶಿ, ದರ್ಶನ್, ಶೇಖರ್ ಹಾಗೂ ಇತರರು ಸೇರಿದಂತೆ ಕೋಡಿಗಯ್ಯ ಅವರ ಮೇಲೆ ಬಲವಾಗಿ ಹಲ್ಲೆ ಮಾಡಿದ್ದಾರೆ. ಇದರಿಂದ ತೀವ್ರ ಅಸ್ವಸ್ಥಗೊಂಡಿರುವ ಕೋಡಿಗಯ್ಯ ಅವರು ನಗರದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ದುದ್ದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಲಿತ ಸಂಘಟನೆಗಳ ಆಕ್ರೋಶ: ದಲಿತರು ದೇವರ ಪೂಜೆ ಮಾಡಿದ ಎಂಬ ಕಾರಣ ಸವರ್ಣೀಯರು ಈ ರೀತಿ ಮಾರಣಾಂತಿಕ ಹಲ್ಲೆ ಮಾಡಿರುವುದು ಖಂಡನೀಯವಾಗಿದೆ. ಈ ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೂಕ್ತ ಕಾನೂನು ಕ್ರಮ ಜರುಗಿಸಿ, ದಲಿತರ ಮೇಲೆ ನಡೆಯುತ್ತಿರುವಂತಹ ದೌರ್ಜನ್ಯ, ದಬ್ಬಾಳಿಕೆ, ಹಲ್ಲೆಯಂತಹ ಪ್ರಕರಣಗಳನ್ನು ತಡೆಗಟ್ಟಬೇಕು ಎಂದು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement