ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕಾಫಿ ಕೊಟ್ಟು ಸತ್ಕರಿಸಿದವಳೇ ಹತ್ಯೆ

Srinivasa Murthy VN
Updated On : 18 Oct 2013, 12:44 pm

ಕ.ಪ್ರ.ವಾರ್ತೆ ಹಾಸನ ಅ.17
ಆಕೆಗೆ ತಾನು ಮನೆಯೊಳಗೆ ಕರೆದವರು ತನ್ನನ್ನು ಇರಿದು ಕೊಲೆ ಮಾಡುತ್ತಾರೆ ಎಂದು ತಿಳಿಯಲಿಕ್ಕೆ ಸಾಧ್ಯವೇ ಇರಲಿಲ್ಲ. ಏಕೆಂದರೆ ಕೊಲೆ ಮಾಡಲು ಬಂದಿದ್ದ ನಾಲ್ವರಲ್ಲಿ ಇದ್ದವನೊಬ್ಬ ಸಂಬಂಧಿಕನಿಂದಲೇ ಪರಿಚಯವಾಗಿದ್ದ. ಹಾಗಾಗಿ ಆಕೆ ಅವರನ್ನು ಮನೆಯೊಳಗೆ ಕರೆದು ಕೂರಿಸಿ, ನೀರು, ಕಾಫಿ ಕೊಟ್ಟು ಸತ್ಕರಿಸಿದ್ದಳು. ಹೀಗೆ ಕಾಫಿ, ನೀರು ಕುಡಿದವರು ಮಾಡಿದ್ದೇನು ಗೊತ್ತಾ?
ಆಕೆಯ ಕತ್ತನ್ನು ಇರಿದು, ಮನೆಯಲ್ಲಿದ್ದ ಚಿನ್ನಾಭರಣ ದೋಚಿ ತಮ್ಮ ಘೋರ ಕೃತ್ಯ ಮೆರೆದರು. ಇದು ಹಾಸನ ಜಿಲ್ಲೆಯನ್ನು ತಲ್ಲಣಗೊಳಿಸಿದ್ದ ನಗರದ ಹೊರವಲಯದಲ್ಲಿರುವ ಚಿಕ್ಕಹೊನ್ನೇನಹಳ್ಳಿ ಬಡಾವಣೆಯ ಕೆಎಸ್ ಎಫ್‌ಸಿ ಉದ್ಯೋಗಿ ಎ.ಆರ್.ರಂಗ ಅವರ ಪತ್ನಿ ತೇಜಸ್ವಿ (32) ಅಪರಾಹ್ನ 12 ಗಂಟೆಯಲ್ಲಿ ಕೊಲೆಯಾದ ಬಗೆ.
ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾ. ಶ್ರವಣಬೆಳಗೊಳ ಹೋಬಳಿಯ ಚೋಳನಹಳ್ಳಿಯ ಸಿ.ಎನ್. ಮನುಕುಮಾರ್ ಅಲಿಯಾಸ್ ಮನು (27), ಸಿ.ಎನ್. ಮಂಜು ಅಲಿಯಾಸ್ ಮಂಜೇಗೌಡ (35),  ಸಿ.ಡಿ.ಸುನೀಲ್‌ಕುಮಾರ್ ಅಲಿಯಾಸ್ ಸುನೀಲ್ (25) ಮತ್ತು ನಾಗಮಂಗಲ ತಾಲೂಕು ಬಿಂಡಿಗನಹಳ್ಳಿ ಹೋಬಳಿ ಮಾಯಣ್ಣನ ಕೊಪ್ಪಲು ಗ್ರಾಮದ ಎಂ.ಬಿ. ಮಂಜುನಾಥ್ ಅಲಿಯಾಸ್ ಪಾಪಣ್ಣಿ (20) ಎಂಬುವರೇ ಮಹಿಳೆಯನ್ನು ಕೊಲೆ ಮಾಡಿದ ಕೊಲೆಗಾರರು.
ಈ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ಸಿಯಾದ ಎಸ್ಪಿ ರವಿ ದ್ಯಾಮಪ್ಪ ಚನ್ನಣ್ಣನವರ ಅವರು ಗುರುವಾರ ತಮ್ಮ ಕಚೇರಿ ಸಭಾಂಗಣದಲ್ಲಿ ಕೊಲೆ ನಡೆದ ಬಗೆಯನ್ನು ವಿವರಿಸಿದ್ದು ಹೀಗೆ.
ಸಂಬಂಧಿ ಮನೆಗೆ ಕರೆದಿದ್ದಾಗಲೇ ಕೊಲೆ ಸಂಚು: ಕೊಲೆ ಪ್ರಕರಣದ ರೂವಾರಿಯಾದ ಮನು ಎಂಬಾತನನ್ನು ತೇಜಸ್ವಿ ಅವರ ದೂರದ ಸಂಬಂಧಿ ಕುಮಾರ ಎಂಬಾತ ಪರಿಚಯ ಮಾಡಿಸಿದ್ದ. ಹೇಗೆ ಗೊತ್ತೆ....
ಕುಮಾರ್ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಹೋಗುವಾಗ ಹಾಸನದಲ್ಲಿ ಸಿಕ್ಕ ಮನುವನ್ನು ತನ್ನ ನೆಂಟರಾದ ತೇಜಸ್ವಿ ಮನೆಗೆ ಕರೆದುಕೊಂಡು ಹೋಗಿದ್ದ. ಆಗಲೆ ಆಕೆ ಧರಿಸಿದ್ದ ಒಡವೆಗಳು, ಮನೆಯಲ್ಲಿ ಇದ್ದ ರೀತಿಯನ್ನು ಗಮನಿಸಿ ಮುಂದೊಂದು ದಿನ ಇದೇ ತನ್ನ ಬೇಟೆ ಎಂಬ ನಿರ್ಧಾರಕ್ಕೆ ಬಂದಿದ್ದ.
ಸೆಪ್ಟೆಂಬರ್ 29ರಂದು ಆರೋಪಿಗಳು ಬೆಂಗಳೂರಿನ ಮಾಗಡಿಯಲ್ಲಿ ಒಂಟಿ ಮನೆಯೊಂದಕ್ಕೆ ಹೋಗಿ ಅಲ್ಲಿ ಒಂಟಿ ಮಹಿಳೆಯನ್ನು ಕೊಲೆ ಮಾಡಲು ಚಿನ್ನಾಭರಣ ದೋಚಲು ಯತ್ನಿಸುತ್ತಾರೆ. ಆದರೆ ಮನೆ ಬೀಗ ಹಾಕಿದ್ದರಿಂದ ಸಂಚು ವಿಫಲವಾಗುತ್ತದೆ. ಕೊನೆಗೆ ಮನು ತಲೆಗೆ ಹೊಳೆದಿದ್ದು ಹಾಸನ ನಗರದ ಚಿಕ್ಕಹೊನ್ನೇನಹಳ್ಳಿಯಲ್ಲಿರುವ ತೇಜಸ್ವಿನಿ ಮತ್ತು ಆಕೆ ಧರಿಸಿದ್ದ ಒಡವೆಗಳು.
ಕೂಡಲೇ ಮನು ತನ್ನ ಸಹಚರರೊಂದಿಗೆ ಇಂಡಿಕಾ ಕಾರಿನಲ್ಲಿ ಹಾಸನದತ್ತ ಪ್ರಯಾಣ ಬೆಳೆಸುತ್ತಾರೆ. ಈ ಪ್ರಯಾಣ ಮಾಡುವಾಗಲೇ ದರೋಡೆ, ಡಿಸೇಲ್ ಮತ್ತೀತರ ವೆಚ್ಚಗಳಿಗೆ ಬೇಕಾದ ಹಣಕ್ಕೆ ಹಾದಿಯಲ್ಲಿ ಸಿಕ್ಕ ಸೊಲೂರು ಎಂಬ ಬಳಿ ವ್ಯಕ್ತಿಯೊಬ್ಬನಿಗೆ ಚಾಕು ತೋರಿಸಿ ಆತನಿಂದ ಮೊಬೈಲ್ ಹಾಗೂ 3 ಸಾವಿರ ರು.  ದೋಚುತ್ತಾರೆ.
ನಂತರ ಸೆಪ್ಟೆಂಬರ್ 30 ರಂದು ಬೆಳಗ್ಗೆ 11.30 ರಿಂದ 12 ರೊಳಗೆ ಆಗಮಿಸಿದ ನಾಲ್ವರ ಪೈಕಿ ಮೂವರು ಅಂದ್ರೆ... ಮನು, ಮಂಜೇಗೌಡ, ಪಾಪಣ್ಣಿ ತೇಜಸ್ವಿನಿ ಮನೆಗೆ ಹೋಗುತ್ತಾರೆ. ಸುನೀಲ್ ಕಾರಿನಲ್ಲಿ ಕುಳಿತು ಬರುವ, ಹೋಗುವ ಬಗ್ಗೆ ನಿಗಾ ವಹಿಸುತ್ತಾನೆ. ಮನು ಪರಿಚಯವಿದ್ದ ಕಾರಣ ತೇಜಸ್ವಿನಿ ಬಾಗಿಲು ತೆರೆದು ಒಳಕ್ಕೆ ಕರೆದು, ಮೊದಲು ಕಾಫಿ ನೀಡುತ್ತಾರೆ. ನಂತರ ನೀರು ಕೊಟ್ಟು ತಿರುಗಿದಾಗ ಮೊದಲೇ ಮಾಡಿದ ಯೋಜನೆಯಂತೆ ಹಿಂಬದಿಯಿಂದ ಆಕೆಯ ಬಾಯಿಗೆ ಬಟ್ಟೆ ಕಟ್ಟಿ, ಚಾಕುವಿನಿಂದ ಕತ್ತನ್ನು ಇರಿದು ಕೊಲೆ ಮಾಡುತ್ತಾರೆ.
ನಂತರ ಆಕೆ ಕುತ್ತಿಗೆಯಲ್ಲಿದ್ದ 40 ಗ್ರಾಂ ಚಿನ್ನದ ಮಾಂಗಲ್ಯ ಸರ, ಬೀರುವಿನಲ್ಲಿದ್ದ ನಕ್ಲೇಸ್, ಚಿನ್ನದ ಬಳೆ ಮತ್ತು ಮೂರು ಉಂಗುರ, ಬೆಳ್ಳಿ ನಾಣ್ಯಗಳು ಮತ್ತು ಮೊಬೈಲ್ ದೋಚಿಕೊಂಡು ಹೋಗಿದ್ದರು.
ಪೊಲೀಸರು ಆರೋಪಿಗಳ ಜಾಡನ್ನು ಹಿಡಿದು ಬಂಧಿಸಿ, ಇಂಡಿಕಾ ಕಾರು ಸೇರಿದಂತೆ 4 ಲಕ್ಷ ರು. ಮೌಲ್ಯದ ಚಿನ್ನಾಭರಣ ವಶಕ್ಕೆ ತೆಗೆದುಕೊಂಡಿದ್ದಾರೆ. ಆರೋಪಿಗಳು ಚನ್ನರಾಯಪಟ್ಟಣದ ಹೇಮಣ್ಣ ಎಂಬುವರ ಗಿರಿವಿ ಅಂಗಡಿಗೆ ಇಟ್ಟಿದ್ದ ಮಾಂಗಲ್ಯ ಸರ ಮತ್ತು ಕೃತ್ಯಕ್ಕೆ ಬಳಸಿದ್ದ ಚಾಕುವನ್ನು ವಶಪಡಿಸಿಕೊಂಡಿದ್ದಾರೆ.
ಆತ ಮೊದಲೆ ಕೊಲೆ ಮಾಡಿದ್ದ: ಮಂಜೇಗೌಡ ಎಂಬಾತ ತನ್ನೂರಿನಲ್ಲಿ ನಡೆಸುತ್ತಿದ್ದ ಚೀಟಿ ವ್ಯವಹಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿ ಜೈಲು ಶಿಕ್ಷೆ ಅನುಭವಿಸಿ 3 ತಿಂಗಳ ಹಿಂದಷ್ಟೇ ಬಿಡುಗಡೆಯಾಗಿ ನಂತರ ಬೆಂಗಳೂರಿಗೆ ಹೋಗಿ ಹೊಟೇಲ್‌ವೊಂದರಲ್ಲಿ ಸಪ್ಲೆಯರ್ ಕೆಲಸ ಮಾಡುತ್ತಿದ್ದ. ಈ ಸಂದರ್ಭದಲ್ಲಿ ಆರೋಪಿಗಳೆಲ್ಲರೂ ಪರಿಚಯವಾಗಿ ಒಂಟಿ ಮನೆಗಳನ್ನು ಟಾರ್ಗೆಟ್ ಮಾಡಿಕೊಂಡು ಮಹಿಳೆಯರನ್ನು ಕೊಲೆ ಮಾಡಿ ಚಿನ್ನಾಭರಣ ದೋಚುತ್ತಿದ್ದರು.
ಸಿಸಿ ಕ್ಯಾಮರಾದಲ್ಲಿ ಸೆರೆ: ಐಷಾರಾಮಿ ಜೀವನ ನಡೆಸುವ ಉದ್ದೇಶದಿಂದ ಕೊಲೆ ಮಾಡುವ ಕೃತ್ಯಕ್ಕೆ ಇಳಿದಿದ್ದ ಆರೋಪಿಗಳು ಕಾರಿನಲ್ಲಿ ಬಂದಿದ್ದು ಕೊಲೆಯಾದ ತೇಜಸ್ವಿನಿ ಅವರ ಮನೆ ಮುಂದೆ ಅಳವಡಿಸಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿತ್ತು. ಅಲ್ಲಿ ಮೂವರು ಮಾತ್ರ ಮನೆಯೊಳಗೆ ಹೋಗಿದ್ದು ಪತ್ತೆಯಾಗಿತ್ತು.  ಸುನೀಲ್ ಹಾಗೂ ಮನು ಅವರ ಮೊಬೈಲ್‌ಗಳು ಕೊಲೆ ಕೃತ್ಯ ಮುಗಿಯುವವರೆಗೂ ಕಾರ್ಯ ನಿರತವಾಗಿಯೇ ಇದ್ದವು ಎಂದು ಎಸ್ಪಿ ಚನ್ನಣ್ಣನವರ್ ವಿವರಿಸಿದರು.
ಬಹುಮಾನ: ಮಹಿಳೆ ಕೊಲೆ ಪ್ರಕರಣದ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಹಾಸನ ನಗರ ಠಾಣೆ ಇನ್ಸ್‌ಪೆಕ್ಟರ್ ಎಚ್.ಬಿ. ಸಂಜೀವಗೌಡ, ಬಡಾವಣೆ ಠಾಣೆ ಎಸ್ಸೈ ಎನ್. ವಿಜಯಕೃಷ್ಣ, ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆ ಎಎಸ್ಸೈ ಸುರೇಶ್,  ಬಡಾವಣೆ ಠಾಣೆ ಕಾನ್‌ಸ್ಟೇಬಲ್ ರಾಜೇಗೌಡ, ಇಂದ್ರೇಶ್, ಲೋಹಿತ್, ಪೆನ್ಸನ್ ಮೊಹಲ್ಲಾ ಠಾಣೆ ಕಾನ್‌ಸ್ಟೇಬಲ್ ಹರೀಶ್, ಸಿದ್ದೇಗೌಡ, ಕಿರಣ್, ಸುನೀಲ್ ಅವರನ್ನು ಎಸ್ಪಿ ಶ್ಲಾಘಿಸಿ ನಗದು ಬಹುಮಾನ ಘೋಷಿಸಿದ್ದಾರೆ. ಸುದ್ದಿಗೋಯಲ್ಲಿ ಹೆಚ್ಚುವರಿ ಎಸ್ಪಿ ರಶ್ಮಿ ಜೈನಹಳ್ಳಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement